ಬೆಳಗಾವಿ-೨೩:ಸೋಮವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೆ ಪಿ.ಬಿ.ರಸ್ತೆಯ ವಿವಾದವನ್ನು ಧಾರವಾಡದ ಹೈಕೋರ್ಟ್ ನಲ್ಲಿ ಸುಖಾಂತ್ಯ ಕಂಡಿದೆ. ರಸ್ತೆ ನಿರ್ಮಾಣ ಮಾಡಿದ ಕೋಟ್ಯಂತರ ರೂ. ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಿದ ಅಧಿಕಾರಿಗಳಿಂದ ವೆಚ್ಚನ್ನು ಭರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ಮಾತನಾಡಿದರು.
ಹೈಕೋರ್ಟ್ ಆದೇಶದಂತೆ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೆ ಪಿ.ಬಿ.ರಸ್ತೆ ಅಗಲಿಕರಣದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ 20 ಕೋಟಿ ರೂ. ಪರಿಹಾರ ನೀಡಬೇಕೆಂದು ಸೂಚನೆ ನೀಡಿದ ವೇಳೆ ಪಾಲಿಕೆಯಲ್ಲಿ ವಿಶೇಷ ಸಭೆ ಕರೆದು ಮೇಯರ್ ಹಣ ತುಂಬಲು ಒಪ್ಪಿಕೊಂಡಿದ್ದು ನಗರದ ಅಭಿವೃದ್ಧಿಗೆ ಮಾರಕವಾಗಿದೆ ಎಂದರು.
ಬೆಳಗಾವಿ ನಗರದ ಅಭಿವೃದ್ಧಿಗೆ ಪಾಲಿಕೆ ಸದಸ್ಯರು ನಿರ್ಣಯ ಕೈಗೊಂಡರೆ ಎಲ್ಲರೂ ಕೈ ಜೋಡಿಸುತ್ತೇವೆ. ಆದರೆ ಮೇಯರ್ ನೇತೃತ್ವದ ವಿಶೇಷ ಸಭೆಯಲ್ಲಿ ಸಂತ್ರಸ್ತರಿಗೆ ಹಣ ನೀಡುವ ಬದಲು ಪರ್ಯಾಯ ಮಾರ್ಗ ಹುಡುಕದೆ 20 ಕೋಟಿ ರೂ. ಪರಿಹಾರ ನೀಡಲು ಮುಂದಾಗಿದ್ದು ದೊಡ್ಡ ದುರಂತ ಎಂದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರವಾಗಿದ್ದರೂ ಸ್ಥಳೀಯ ಶಾಸಕ ಅಭಯ ಪಾಟೀಲ್ ಹಾಗೂ ಸಂಸದ ಜಗದೀಶ್ ಶೆಟ್ಟರ್ ಅವರು ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜಕುಮಾರ ಟೋಪಣ್ಣವರ ಮಾತನಾಡಿ, ಬೆಳಗಾವಿ ಮಹಾನಗರ ಪಾಲಿಕೆ ಉಳಿಸಿ ಎಂಬ ಅಭಿಯಾನ ಆರಂಭಿಸಿದ ಮೇಲೆ ಹೈಕೋರ್ಟ್ ಒಂದು ಉತ್ತಮ ಸಂದೇಶ ನೀಡಿ ನ್ಯಾಯ ಎತ್ತಿ ಹಿಡಿದಿದೆ ಎಂದರು.
ಬೆಳಗಾವಿ ಸ್ಮಾರ್ಟ್ ಸಿಟಿಯಿಂದ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೆ ಪಿ.ಬಿ.ರಸ್ತೆಯವರೆಗೆ ರಸ್ತೆ ಅಗಲಿಕರಣ ಮಾಡಿರುವುದೇ ಅವೈಜ್ಞಾನಿಕವಾಗಿದೆ. ಸ್ಮಾರ್ಟ್ ಸಿಟಿಯ ಪಿಎಂಸಿ ಕಂಪನಿಯ ಸಿಬ್ಬಂದಿಗಳು ಮಾಡಿದ ಯಡವಟ್ಟಿನಿಂದ ಇಂಥ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಯಿಂದ ಜನರು ಬೇಸತ್ತಿದ್ದಾರೆ ಎಂದರು.
ಹಿಂದಿನ ಪಾಲಿಕೆಯ ಆಯುಕ್ತ ಜಗದೀಶ್ ಕೆ.ಎಚ್. ಅವರ ಮನೆಯ ಮುಂದೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಸವನ್ನು ವಿಲೇವಾರಿ ಮಾಡಿ ಬೇದರಿಕೆ ಹಾಕಿ ರಸ್ತೆ ನಿರ್ಮಾಣಕ್ಕೆ ಎನ್ಒಸಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೆ ಪಿ.ಬಿ.ರಸ್ತೆಯವರೆಗೆ ನಿರ್ಮಾಣ ಮಾಡಿದ್ದ 500 ಮೀಟರ್ ರಸ್ತೆ ನಿರ್ಮಾಣಕ್ಕೆ 7 ಕೋಟಿ 2 ಲಕ್ಷ ರೂ.ಹಣ ವೆಚ್ಚವಾಗಿದೆ. ಈ ಹಣವನ್ನು ಹಿಂದಿನ ಸ್ಮಾರ್ಟ್ ಸಿಟಿ ಎಂ.ಡಿ. ಅಂದಿನ ಪಾಲಿಕೆಯ ಆಯುಕ್ತರ ಸಂಬಳದಿಂದ ಆ ವೆಚ್ಚವನ್ನು ತುಂಬಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಜನಪ್ರತಿನಿಧಿ ವಿಶೇಷ ಕಾಳಜಿಯಿಂದ ಒಂದು ಸಮಾಜದ ಮಂಗಲ ಕಾರ್ಯಾಲಯ ರಸ್ತೆಗೆ ಹೊಂದಿಕೆಯಾಗಬೇಕು ಎನ್ನುವ ಉದ್ದೇಶದಿಂದ ರಸ್ತೆ ನಿರ್ಮಾಣ ಮಾಡಿದ್ದಾರೆ. ಜಿಲ್ಲಾಡಳಿತ 10 ದಿನದಲ್ಲಿ 7 ಕೋಟಿ 2 ಲಕ್ಷ ರೂ.ಹಣ ಸಂಬಂಧಿಸಿದ ಅಧಿಕಾರಿಗಳಿಂದ ಭರ್ತಿ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಹೈಕೋರ್ಟ್ ನ್ಯಾಯವಾದಿ ನಿತಿನ್ ಬೋಳಬಂದಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.