23/12/2024
IMG-20240913-WA0023

ಬೆಳಗಾವಿ-೧೩: ರಾಜ್ಯ ಸರ್ಕಾರ ಬಡವರಿಗಾಗಿ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ ಅದರ ಲಾಭವನ್ನು ಎಲ್ಲರೂ ಪಡೆಯಬೇಕೆಂದು ಕಾಗವಾಡ ಶಾಸಕ ರಾಜು ಕಾಗೆ ಕರೆ ನೀಡಿದರು.

ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ವಸತಿ ಯೋಜನೆಗಳ ಫಲಾನುಭವಿಗಳಿಗೆ ಮನೆಗಳ ಆದೇಶ ಪತ್ರ ವಿತರಣೆ ಮಾಡಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯನವರ ನೇತೃತ್ವದ ಉತ್ತಮ ಆಡಳಿತ ನೀಡುತ್ತಿದೆ. ಈಗಾಗಲೇ ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಗಳ ಕೊಡೆಗೆಯನ್ನು ನೀಡಿರುವ ನುಡಿದಂತೆ ನಡೆದದ್ದು ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಪರ ಕಾರ್ಯವೈಖರಿಯನ್ನು ತಿಳಿಸುತ್ತದೆ ಎಂದರು.

ಸರ್ಕಾರದಿಂದ ವಸತಿ ಯೋಜನೆಗಳ ಫಲಾನುಭವಿಗಳಿಗೆ ಬರುವ ಅನುದಾನ ಮನೆಗಳನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ ಎಂದು ಈಗಾಗಲೇ ಇತ್ತಿಚೆಗೆ ನಡೆದ ಸಿಎಲ್ ಪಿ (ಶಾಸಕಾಂಗ ಪಕ್ಷದ ಸಭೆ) ಯಲ್ಲಿ ಧ್ವನಿ ಎತ್ತುವ ಮೂಲಕ ಅನುದಾನದಲ್ಲಿ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.

1,50 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯು ಅಪೂರ್ಣವಾಗುತ್ತದೆ. ಆದ್ದರಿಂದ ಪ್ರವಾಹ ಸಂತ್ರಸ್ತರಿಗೆ ನೀಡುವಂತೆಯೇ ಆಶ್ರಯ ಮನೆಗಳಿಗೆ 5 ಲಕ್ಷ ರೂಪಾಯಿಗಳನ್ನು ನೀಡಲು ಸರ್ಕಾರಕ್ಕೆ ಮನವಿ ಮಾಡಿದರು.

ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಿದರೂ ಸಹ ಅವರು ಮತ್ತೆ ಅದೇ ಸ್ಥಳದಲ್ಲಿ ನೆಲೆಸುತ್ತಾರೆ. ಅದಕ್ಕಾಗಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಈ ರೀತಿ ತಾರತಮ್ಯ ನೀತಿಯಾಗದಂತೆ ತಡೆಯಲು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

ಈಗಾಗಲೇ ಕ್ಷೇತ್ರದಲ್ಲಿ ಮಂಜೂರಾದ ನಿವೇಶನಗಳ ಆದೇಶ ಪತ್ರ ವಿತರಣೆ ಮಾಡಲಾಗುತ್ತಿದೆ. ಅಲ್ಲದೆ ಇನ್ನೂ ಹೆಚ್ಚಿನ ಮನೆಗಳಿಗೆ ಬೇಡಿಕೆ ಇದೆ ಅವುಗಳನ್ನೂ ಸಹ ಮುಂದಿನ ಹಂತಗಳಲ್ಲಿ ಮಂಜೂರು ಪಡೆಯಲಾಗುವುದು ಎಂದು ಶಾಸಕ ಕಾಗೆ ಭರವಸೆ ನೀಡಿದರು.

ಬಡ, ಮದ್ಯಮ ಹಾಗೂ ಶೋಷಿತರ ಪರವಾಗಿ ಸಾಮಾಜಿಕ ನ್ಯಾಯದ ಸಿದ್ದಾಂತ ಪಾಲನೆ ಮಾಡಿಕೊಂಡು ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯವನರು ರಾಜ್ಯದಲ್ಲಿ ಜನರಿಗೆ ಸರ್ಕಾರದ ಪ್ರತಿಯೊಂದು ಯೋಜನೆಗಳು ತಲುಪಿಸಬೇಕೆಂಬ ಮಹದಾಸೆಯಿಂದ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಾರ್ಯವೈಖರಿಯನ್ನು ಕಾಗೆ ಶ್ಲಾಘಿಸಿದರು.

ಇದೇ ವೇಳೆ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದರೆಪ್ಪ ತಗಲಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ದಳವಾಯಿ, ಉಪಾಧ್ಯಕ್ಷ ಅಶೋಕ ಮಾನೆ, ಅಥಣಿ ಪುರಸಭೆ ಸದಸ್ಯ ರಾವಸಾಹೇಬ ಐಹೊಳೆ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ವರ್ಗದವರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

error: Content is protected !!