ಇಂದಿನ ದಿನದಲ್ಲಿ ನಾಟಕಗಳು ಅವನತಿಯತ್ತ ಸಾಗಿದ್ದು, ಯುವ ಜನತೆ ನಾಟಕ ಎಂದರೆ ಮೂಗು ಮುರಿಯುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ.ಇಂಥ ದಿನಗಳಲ್ಲಿ ನಾಟಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಪ್ರಕಾಶ ಹುಂಬಿ ಗಮನ ಸೆಳೆಯುತ್ತಾರೆ.
ಅವರಿಗೆ ನಾಟಕಗಳಲ್ಲಿ ಪಾತ್ರಗಳು ಲೀಲಾಜಾಲವಾಗಿ ಕರವಾಗಿದೆ. ಮೊದಲಿಗೆ ರಂಗ ಕ್ಷೇತ್ರ, ಸಮಾಜ ಸೇವಕರಾಗಿ ಗುರುತಿಸಿಕೊಳ್ಳುವ ಪ್ರಕಾಶ ಅವರು ವಿದ್ಯಾರ್ಥಿ ಜೀವನದಲ್ಲಿ ರಂಗಭೂಮಿಯಲ್ಲಿ ಮಿಮಿಕ್ರಿ ಏಕ ಪಾತ್ರ ಅಭಿನಯಮಾಡುತ್ತಾ ಮನಂಜಿಸುವ ಕಲೆಗಾರಿಕೆ ಬೆಳೆಸಿಕೊಂಡವರು.
ಕಾಲೇಜು ಶಿಕ್ಷಣಾರ್ಥಿಯಾಗಿದ್ದಾಗ ಈಶಪ್ರಭು ವಿದ್ಯಾರ್ಥಿ ವೇದಿಕೆಯ ಮುಖಂಡನಾಗಿ, ಹುಬ್ಬಳ್ಳಿಯ ಜೀವಿ ಕಲಾಬಳಗದ ಅಧ್ಯಕ್ಷ ಗದಗಯ್ಯ ಹಿರೇಮಠ, ನಟ ಯುವ ಉತ್ಸಾಹಿ ಶಂಕರ ಕರೀಕಟ್ಟಿ, ಹಿರಿಯ ರಂಗ ನಟರಾದ ಈಶ್ವರಯ್ಯ ಪೂಜೇರವರ ಲ್ಲಿ ನಾಟಕ ಕಲೆಯಲ್ಲಿ ಪಳಗಿದವರು.
ಈಶಪ್ರಭು ವೇದಿಕೆಯ ಮೂಲಕ ಹಿರಿಯರೊಂದಿಗೆ ಕೂಡಿಕೊಂಡು ಅವರ ಮಾರ್ಗದರ್ಶನದೊಂದಿಗೆ ಮಾಡಿದ ಸತ್ಯಾಗ್ರಹದಿಂದ ಧಾರವಾಡಕ್ಕೆ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಸಹಾಯಕವಾಯಿತು. ಗ್ರಾಮದ ಹಿರಿಯರು ಯುವಕರೊಂದಿಗೆ ವಿದ್ಯಾರ್ಥಿ ಶಕ್ತಿ ಸೇರಿಸಿ ಗ್ರಾಮದ ನೀರಿನ ವ್ಯವಸ್ಥೆಗಾಗಿ, ಮಲ್ಲಮ್ಮ ಸರ್ಕಲ್ ಹಾಗೂ ಅಶ್ವರೋಡ ಕಂಚಿನ ಮೂರ್ತಿ ಸ್ಥಾಪನೆ ಅವಿರತ ಶ್ರಮದಿಂದ ಹೋರಾಡಿ ಜಯ ದೊರಕಿಸಿ ಕೊಟ್ಟರು. ಗ್ರಾಮೀಣರಲ್ಲಿ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಕಬಡ್ಡಿ, ಕ್ರಿಕೆಟ್, ವ್ಹಾಲಿಬಾಲ್, ಪಂದ್ಯಾಗಳನ್ನೇರ್ಪಡಿಸುವುದು ಡಾ. ರಾಜಕುಮಾರವರ ಸವಿನೆನಪಿಗಾಗಿ ಚಿತ್ರರಂಗದ ಜ್ಯೂನಿಯರ್ ನಟರನ್ನು ಬೆಳವಡಿ ನಾಡಿಗೆ ಪರಿಚಯಿಸಿರುವುದು ಒಳ್ಳೆಯ ಕಾರ್ಯ ಮಾಡಿದ್ದಾರೆ. ನ್ಯಾಯವಾದಿಗಳಾದ ಸಿ ಎಸ್ ಚಿಕ್ಕನಗೌಡರ ಹಾಗೂ ಗೆಳೆಯರ ಜೊತೆಗೂಡಿ
ಈಶ ಪ್ರಭು ಸಮಾಜ ಸೇವಾ ಸಂಘವನ್ನು ಹುಟ್ಟು ಹಾಕಿ ಉಚಿತ ಆರೋಗ್ಯ ಶಿಬಿರ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ ಪ್ರಸ್ತುತ ಯುವ ಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ
1995-96ರಲ್ಲಿ ಸಾಮಾಜಿಕ ಸೇವಾ ಕಾರ್ಯದಲ್ಲಿ ಸಾಕ್ಷರತಾ ಆಂದೋಲನದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ನೇತಾಜಿ ತರುಣ ಸಂಘದೊಂದಿಗೆ ಗುರುತಿಸಿಕೊಂಡು, ಹಳ್ಳಿಗಳಲ್ಲಿ ಕಲಾ ಜಾಥಾದಲ್ಲಿ ಪಾಲ್ಗೊಂಡು ತಮ್ಮ ಕಲೆಯನ್ನು ಪ್ರದರ್ಶಿಸಿ ಜನಮನ್ನಣೆ ಗಳಿಸಿದರು. ನೇತಾಜಿ ತರುಣ ಸಂಘದ ಮುಖಾಂತರ ಬೀದಿ ನಾಟಕಗಳ ಸೇವೆಗಾಗಿ ಅಕ್ಷರ ಅರಿವಿನ ಜಾಗೃತಿ ಮೂಡಿಸುವುದನ್ನು ಗಮನಿಸಿ ಕೇಂದ್ರ ಸರ್ಕಾರ ಇವರಿಗೆ ಸತ್ಯನ್ನ ಮಿತ್ರ ಪ್ರಶಸ್ತಿಗೆ ನೀಡಿ ಗೌರವಿಸಿದೆ.ಧಾರವಾಡ ವಿದ್ಯಾವರ್ಧಕ ಸಂಸ್ಥೆ, ಹಲವಾರು ಸಂಘ ಸಂಸ್ಥೆಗಳು ಇವರ ಕಲೆಯನ್ನು ಮೆಚ್ಚಿ ಸತ್ಕರಿಸಿವೆ.
ಹವ್ಯಾಸಿ ರಂಗಭೂಮಿಯ ನಟನಾಗಿ ನೇತಾಜಿ ತರುಣ ಸಂಘದಾಶ್ರಮದಲ್ಲಿ ಸುಮಾರ 135 ಪ್ರಯೋಗಗಳಲ್ಲಿ ಬಣ್ಣ ಹಚ್ಚಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ.
1989 ರಿಂದ ತಮ್ಮ 14ನೇ ವಯಸ್ಸಿನಲ್ಲಿಯೇ ದೀಪಾವಳಿ ನಾಟಕದಲ್ಲಿ ತೇಜಸ್ವಿ ಪಾತ್ರ, ಬೆಳವಡಿ ಮಲ್ಲಮ್ಮ ನಾಟಕದಲ್ಲಿ ಸಕುಜಿ, ಸಿಂಧೂರ ಲಕ್ಷ್ಮಣ ದಲ್ಲಿ ಗಾರ್ಮನ್, ಕುರುಕ್ಷೇತ್ರ ನಾಟಕದಲ್ಲಿ ದ್ರೋಣಚಾರ್ಯ, ರತ್ನ, ಮಾಂಗಲ್ಯದ ರಾಮಜ್ಜ, ಧನಿಕರ ದೌರ್ಜನ್ಯದ ವಿಲನ್ ವಿಕ್ರಮ, ದನಿಕರ ದೌರ್ಜನ್ಯ, ರಕ್ತ ರಾತ್ರಿ, ರೇವಣಸಿದ್ದೇಶ್ವರ ಮಹಾತ್ಮೆ, ಬೆಳವಡಿ ಮಲ್ಲಮ್ಮ ಹೀಗೆ ಇನ್ನೂ ಅನೇಕ ನಾಟಕಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿ ಜನರನ್ನು ಮನರಂಜಿಸಿದ್ದಾರೆ. ಸಿಂಧೂರ ಲಕ್ಷ್ಮಣ ನಾಟಕ, ಕುರುಕ್ಷೇತ್ರ ನಾಟಕಗಳು ಧಾರವಾಡ ಹಾಗೂ ಕಿತ್ತೂರ ಉತ್ಸವಗಳಲ್ಲಿ ಪ್ರದರ್ಶನಗೊಂಡಿವೆ. ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯಿಂದ ನಡೆದ ರಾಜ್ಯ ಮಟ್ಟದ ನಾಟಕೋತ್ಸವದಲ್ಲಿ ಕುರುಕ್ಷೇತ್ರ ನಾಟಕ ಪ್ರಥಮ ಸ್ಥಾನ ಲಭಿಸಿದೆ. ಇಂತಹ ಕಲಾವಿದರೆಲ್ಲರ ಅಮೋಘ ಅಭಿನಯವನ್ನು ಪ್ರತಿನಿಧಿಸುತ್ತದೆ. ಬಾಳೆಹೊನ್ನೂರನಲ್ಲಿ ನಡೆದ ರೇವಣ ಸಿದ್ದೇಶ್ವರ ಮಹಾತ್ಮ ನಾಟಕದ ಗೋರಕನಾಥ ರಾಜನ ಪಾತ್ರ ಮೈ ನವಿರೇಳಿಸುವಂತಹದಾಗಿದೆ. ಲಕ್ಷ್ಮಣ ನಾಟಕದಲ್ಲಿ ಬ್ರಿಟಿಷ್ ಅಧಿಕಾರಿಯಾಗಿ ಪಾತ್ರವಹಿಸಿದ್ದಾರೆ .ಇಲ್ಲಿಯವರೆಗೆ ಸುಮಾರು ೧೩೫ ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ.
ದಾರಾವಾಹಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಆಕಾಶವಾಣಿಯ ತಾಯಿಕರುಳು ನಾಟಕದ ಮಹೇಶನ ಪಾತ್ರ ಹಾಗೂ ಬೆಳವಡಿ ಮಲ್ಲಮ್ಮ ನಾಟಕದ ಸಖಜಿ ಪಾತ್ರದಲ್ಲಿಅಮೋಘ ಅಭಿನಯವನ್ನು ನೀಡಿದ್ದಾರೆ. ಹೀಗೆ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಆಧ್ಯಾತ್ಮಿಕ ನಾಟಕಗಳೊಂದಿಗೆ ಪ್ರಕಾಶ ಹುಂಬಿಯವರು ಬೆಳೆದು ಬಂದಿದ್ದಾರೆ.
ವೃತ್ತಿಯಿಂದ ಎಲ್‌ಐಸಿ ಜೀವ ವಿಮಾ ಮುಖ್ಯ ,(ಪ್ರತಿನಿಧಿ)ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುತ್ತ ರಂಗಕಲೆಯನ್ನು ಪೋಷಿಸುತ್ತಾ ಹೊರಟಿದ್ದಾರೆ. ಸಹಕಾರಿ ಡಿಪ್ಲೊಮಾ ಪದವಿ ಪಡೆಯುವ 109 ನೇ ತಂಡದ ಸದಸ್ಯರಾಗಿದ್ದಾಗ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹೆಮ್ಮೆ ಇವರದಾಗಿದೆ. ನಾಟ್ಯಕಲೆ, ಸಹಕಾರಿ ಸೇವೆ. ಸಮಾಜ ಸೇವೆಯೊಂದಿಗೆ ಇವರ ಈ ರೀತಿಯ ನಂಟು ಇನ್ನೂ ಮುಂದೆಯೂ ಬೆಳೆದು ಉನ್ನತ ಮಟ್ಟಕ್ಕೆ ಏರುವಂತಾಗಲಿ. ರಾಜ್ಯ ಸರಕಾರ ಸಹ ಇಂತಹ ಒಳ್ಳೆಯ ರಂಗ ನಟನನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಲೆಂದು ಹಾರೈಸುತ್ತೇವೆ.
– ನ.ಮ.ಮೆಣಸಿನಕಾಯಿ
(ಪತ್ರಕರ್ತರು)
ಜಿ.ಬೆಳಗಾವಿ
7676320667