23/12/2024
IMG-20240904-WA0005

ಬೆಳಗಾವಿ-೦೪: ಸೂರ್ಯ ಉದಯಿಸುವ ಮುನ್ನವೇ ರಸ್ತೆಗಿಳಿಯುವ ಪತ್ರಿಕಾ ವಿತರಕರು ಬೆಳಕು ಹರಿಯುವ ಹೊತ್ತಿಗೆಲ್ಲ ಓದುಗರ ಮನೆಗಳಿಗೆ ಪತ್ರಿಕೆಗಳನ್ನು ಮುಟ್ಟಿಸಿರುತ್ತಾರೆ. ಧೋ ಎಂದು ಮಳೆ ಸುರಿಯುತ್ತಿದ್ದರೂ, ಮೈನಡುಗಿಸುವಂತಹ ಚಳಿ ಇದ್ದರೂ ಪತ್ರಿಕಾ ವಿತರಣೆ ಕಾರ್ಯ ಮಾತ್ರ ದಶಕಗಳಿಂದ ತಮ್ಮ ಅಚ್ಚುಕಟ್ಟಾಗಿ ಕೆಲಸ ಮಾಡಿಕೊಂಡು ಬರುತ್ತಿರುವ ಪತ್ರಿಕಾ ವಿತರಕರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸರ್ವಲೋಕಾ ಸೇವಾ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಹೇಳಿದರು.
ಬುಧವಾರ ಸರ್ವಲೋಕಾ ಸೇವಾ ಫೌಂಡೇಶನ್ ಹಾಗೂ ಕಾಕತಿಯ ಸಿದ್ದೇಶ್ವರ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ವಿತರಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳಗಿನ ಕಾಫಿಯೊಂದಿಗೆ ಪತ್ರಿಕೆ ಓದುವ ಓದುಗರ ಹವ್ಯಾಸಕ್ಕೆ ಚ್ಯುತಿಬಾರದಂತೆ, ಯಾರ ಮನೆಗೆ ಯಾವ ಪತ್ರಿಕೆ, ಎಷ್ಟು ಪತ್ರಿಕೆ ಎಂಬ ಪತ್ರಿಕಾ ವಿತರಕರ ಲೆಕ್ಕಾಚಾರ ಬಹುತೇಕ ಪಕ್ಕಾ. ಜಗತ್ತು ಸಿಹಿ ನಿದ್ರೆಯಲ್ಲಿರುವಾಗ ಪತ್ರಿಕಾ ವಿತರಕರು ಮಾತ್ರ ರಸ್ತೆಯಲ್ಲಿರುತ್ತಾರೆ. ಇವರ ವೃತ್ತಿ ಬದ್ಧತೆ, ಸಮಯ ಪರಿಪಾಲನೆ ಇತರ ಕ್ಷೇತ್ರಗಳಿಗೂ ಮಾದರಿಯಾಗಿದೆ ಎಂದರು.
ಪತ್ರಿಕಾ ವಿತರಕರಿಗೆ ಅನಾರೋಗ್ಯ ಕಾಡಿದರೆ ಅಪಘಾತಗಳಿಗೆ ತುತ್ತಾದರೆ ಮಾರಣಾಂತಿಕ ಕಾಯಿಲೆಗಳು ಬಂದರೆ ಸರಕಾರದಿಂದಲಾಗಲಿ ಸಂಸ್ಥೆಗಳಿಂದಾಗಲಿ ಆರ್ಥಿಕ ನೆರವು ಸಿಗುವುದಿಲ್ಲ. ಮರಣ ಹೊಂದಿದರೂ ಕೇಳುವವರು ಇಲ್ಲ. ಪತ್ರಿಕೆ ವಿತರಕನ್ನು ಸರಕಾರ ಕಾರ್ಮಿಕರು ಎಂದು ಪರಿಗಣಿಸಿ ಸವಲತ್ತುಗಳನ್ನು ನೀಡಬೇಕು ಎಂದರು.
ಡಾ. ಲಕ್ಷ್ಮಣ ಶಿರೂರ್, ಆನಂದ ಬಾತ್ಕಾಂಡೆ, ಪತ್ರಿಕಾ ವಿತರಕ ಸುಭಾಷ ಪಾಟೀಲ್ ಸೇರಿದಂತೆ ಇತರರು ಹಾಜರಿದ್ದರು.

error: Content is protected !!