23/12/2024
IMG-20240903-WA0051

ಬೆಳಗಾವಿ-೦೩:ಭಾರತೀಯ ಹಬ್ಬಗಳು ಪರಿಸರವನ್ನು ಪೂಜಿಸಿ ಅದರ ಪ್ರಾಮುಖ್ಯತೆಯನ್ನು ಜನಸಾಮಾನ್ಯರಿಗೆ ತಿಳಿಸುವಂತಹವು. ಮಣ್ಣು, ನೀರು, ಗಾಳಿ ಇವುಗಳಲ್ಲಿ ದೈವವನ್ನು ಕಾಣುವ ಕಾಣುವ ಭಾರತೀಯ ಹಬ್ಬಗಳ ಮೂಲ ಆಶಯವೇ ಪರಿಸರ ಸಂರಕ್ಷಣೆ ಎಂದು ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಮಂಜುನಾಥ ಶರಣಪ್ಪನವರ ಅಭಿಪ್ರಾಯಪಟ್ಟರು‌. ಅವರು ಇಂದು ಶಿವಬಸವ ನಗರದ ಸಿದ್ಧರಾಮೇಶ್ವರ ಸಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಅಟಲ್ ಟಿಂಕರಿಂಗ್ ಲ್ಯಾಬ್ ನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಡಾ. ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ “ಪರಿಸರ ಸ್ನೇಹಿ ಗಣೇಶೋತ್ಸವ”ದ ಜಾಗೃತಿ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ನೀಡುತ್ತಾ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಹಬ್ಬಗಳ ಆಚರಣೆಯ ನೆಪದಲ್ಲಿ ಜನತೆ ಪರಿಸರ ಮಾಲಿನ್ಯ ಮಾಡುತ್ತ ಅವುಗಳ ಪ್ರಾಮುಖ್ಯತೆ ಕಡಿಮೆ ಮಾಡಬಾರದು. ಗಣೇಶೋತ್ಸವ ಮಣ್ಣನ್ನು ಪೂಜಿಸುವ ಹಾಗು ಜನತೆಯಲ್ಲಿ ರಾಷ್ಟ್ರೀಯತೆಯ ಭಾವವನ್ನು ಬಿಂಬಿಸುವ ವಿಶೇಷ ಹಬ್ಬ. ಈ ಸಂದರ್ಭದಲ್ಲಿ ಪಿಓಪಿ ಹಾಗೂ ಮಾಲಿನ್ಯಯುಕ್ತ ಬಣ್ಣ ಗಳಿಂದ ತಯಾರಿಸಿದ ಗಣೇಶನ ವಿಗ್ರಹಗಳನ್ನು ಪೂಜಿಸದೆ ಜೇಡಿಮಣ್ಣಿನಿಂದ ತಯಾರಿಸಿದ ವಿಗ್ರಹಗಳನ್ನು ಆರಾಧಿಸಬೇಕು. ವಿಸರ್ಜನೆಯ ಸಂದರ್ಭದಲ್ಲಿ ಜಲ ಮೂಲಗಳನ್ನು ಮಲಿನಗೊಳಿಸದೆ ಸರ್ಕಾರ ನಿಗದಿಗೊಳಿಸಿದ ಸ್ಥಳಗಳಲ್ಲಿ ವಿಗ್ರಹಗಳ ವಿಸರ್ಜನೆ ಮಾಡಬೇಕೆಂದು ಅವರು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿ ಶೋಭಾ ಪೋಳ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ವಿಗ್ರಹಗಳ ಬಳಕೆ, ಮಾರಾಟ ಹಾಗೂ ವಿಸರ್ಜನೆಯನ್ನು ಸರ್ಕಾರ ನಿಷೇಧಿಸಿದ್ದು ಸಾರ್ವಜನಿಕರು ಅವುಗಳ ಬಳಕೆ ಮಾಡಬಾರದು. ಮಾಲಿನ್ಯಯುಕ್ತ ಪಟಾಕಿಗಳನ್ನು ಸಿಡಿಸದೆ ಹಸಿರು ಪಟಾಕಿಯತ್ತ ಜನತೆ ಒಲವು ತೋರಿಸಬೇಕು ಎಂದರು.

ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ಧರಾಮೇಶ್ವರ ಸಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಉಪಪ್ರಾಚಾರ್ಯ ಶಿವಲೀಲಾ ಪೂಜಾರ ದೇಶದ ಜನತೆಯಲ್ಲಿ ರಾಷ್ಟ್ರೀಯತೆ, ಏಕತೆ ಹಾಗೂ ಸ್ವಾತಂತ್ರ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಪ್ರಾರಂಭವಾದ ಸಾರ್ವಜನಿಕ ಗಣೇಶೋತ್ಸವ ಇಂದು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಪರಿಸರದ ಪ್ರಮುಖ ಘಟಕಗಳಾದ ಜಲ, ವಾಯು ಹಾಗೂ ಮಣ್ಣು ಮಾಲಿನ್ಯ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೈಜ್ಞಾನಿಕ ಅಧಿಕಾರಿ ಡಾ. ಜಿ. ಎಮ್. ಪಾಟೀಲ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ವಿಜ್ಞಾನ ಕೇಂದ್ರದ ಯೋಜನಾಧಿಕಾರಿ ರಾಜಶೇಖರ ಪಾಟೀಲ ಸ್ವಾಗತಿಸಿದರು. ಕೊನೆಗೆ ಶಿಕ್ಷಕ ಮನೋಹರ ಉಳ್ಳೇಗಡ್ಡಿ ನಿರೂಪಿಸಿ ವಂದಿಸಿದರು.

error: Content is protected !!