ಬೆಳಗಾವಿ-೨೭: ಸೆಪ್ಟೆಂಬರ್ 3ರಂದು ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಇರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿ ಮಹೋತ್ಸವ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ವೀರಭದ್ರೇಶ್ವರ ಜಯಂತಿ ಮಹೋತ್ಸವದ ರಾಜ್ಯಾಧ್ಯಕ್ಷರಾದ
ಬಳ್ಳಾರಿ ಕಲ್ಯಾಣ ಮಠದ ಶ್ರೀ ಮ ನಿ ಪ್ರ ಸ್ವ ಕಲ್ಯಾಣ ಮಹಾಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಗರಗೋಳದ ಮಹಾಂತ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಅಭಿಯಾನ ಕೈಗೊಳ್ಳಲಾಯಿತು. ಬೆಳಗಾವಿ ನಗರದ ಪೊಲೀಸ್ ಹೆಡ್ ಕ್ವಾರ್ಟರ್ಸ್ ನಲ್ಲಿರುವ ವೀರಭದ್ರೇಶ್ವರ ದೇವಸ್ಥಾನ ಹಾಗೂ ರಾಮತೀರ್ಥನಗರದ ಚನ್ನಬಸವೇಶ್ವರ ಬಡಾವಣೆಯಲ್ಲಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಶ್ರೀಗಳು ಭೇಟಿ ನೀಡಿ ವೀರಭದ್ರ ದೇವರಿಗೆ ಮಹಾಮಂಗಳಾರತಿ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು, ರಾಮತೀರ್ಥ ನಗರದ ಪ್ರಸಿದ್ಧ ಕ್ಷೇತ್ರವಾಗಿ ಹೊರಹೊಮ್ಮುತ್ತಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತಿ ಮಹೋತ್ಸವ ಜಾಗೃತಿ ಅಭಿಯಾನವನ್ನು ಪರಮಪೂಜ್ಯರು ಆರಂಭಿಸಿದ್ದಾರೆ ಎಂದರು. ಇದೇ ವೇಳೆ ಮಾತನಾಡಿದ ಶ್ರೀ ಮ ನಿ ಪ್ರ ಸ್ವ ಕಲ್ಯಾಣ ಮಹಾಸ್ವಾಮೀಜಿ, ಈ ದೇಶದ ಮೊದಲ ಮಹಾನಯಕ ಶಿವ, ರುದ್ರ, ಮಹಾದೇವ. ಅವರ ಪುತ್ರರಾಗಿರುವಂತವರು ವೀರಭದ್ರೇಶ್ವರರು, ಶಿವನ ಅವತಾರ ಪುರುಷರಾಗಿರುವ ವೀರಭದ್ರೇಶ್ವರರು ಈ ದೇಶದ ಸಂಸ್ಕೃತಿಯ ಉಳಿವಿಗಾಗಿ ಮತ್ತು ಬೆಳೆಸಲು ವೀರಭದ್ರೇಶ್ವರರು ಮೂಲ ಕಾರಣೀಕರ್ತರು. ಹೀಗಾಗಿ ವೀರಭದ್ರೇಶ್ವರರ ಮಹಾತ್ಮೆಯನ್ನು ತಿಳಿಸುವ ಉದ್ದೇಶಕ್ಕಾಗಿ ಭಾದ್ರಪದ ಮೊದಲ ಮಂಗಳವಾರದಂದು ವೀರಭದ್ರೇಶ್ವರರು ಹುಟ್ಟಿದ ದಿನ ಸೆಪ್ಟೆಂಬರ್ 3ರಂದು ವೀರಭದ್ರೇಶ್ವರ ಜಯಂತಿ ಮಹೋತ್ಸವ ನಡೆಸಲಾಗುತ್ತಿದೆ. ಹೀಗಾಗಿ ವೀರಭದ್ರೇಶ್ವರ ಜಯಂತಿ ಮಹೋತ್ಸವ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದೇವೆ. ದೇಶದಲ್ಲಿರುವ ಎಲ್ಲಾ ಭಕ್ತರು ಸೆಪ್ಟೆಂಬರ್ 3ರಂದು ವೀರಭದ್ರೇಶ್ವರ ಜಯಂತಿ ಆಚರಿಸಬೇಕೆಂದು ತಿಳಿಸಿದರು. ಈ ವೇಳೆ ಪೊಲೀಸ್ ಹೆಡ್ ಕ್ವಾರ್ಟರ್ಸ್ ನ ವೀರಭದ್ರೇಶ್ವರ ದೇವಸ್ಥಾನದ ಅರ್ಚಕರಾದ ಸಂಗಯ್ಯ ಶಾಸ್ತ್ರೀ, ರಾಮತೀರ್ಥ ನಗರದ ವೀರಭದ್ರೇಶ್ವರ ದೇವಸ್ಥಾನದ ಅರ್ಚಕರಾದ ಪ್ರಭು ಸ್ವಾಮೀಜಿ, ಮಹಾನಗರ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ವೀರಭದ್ರೇಶ್ವರ ಕಮೀಟಿ ಅಧ್ಯಕ್ಷರಾದ ಈರಯ್ಯ ಖೋತ, ಮಾರುತಿ ಕುರಬೇಟ, ಬಸವಣ್ಣಿ ಸಂಗಮ್ಮನವರ, ಪ್ರಕಾಶ ಕೌಜಲಗಿ, ಅರುಣ್ ನಂದಗಾವಿ, ಸುರೇಶ ಪಾಟೀಲ್, ಈರಪ್ಪ ಮರೇದ್, ದೇಮಣ್ಣ ಕುರಬೇಟ ಸೇರಿದಂತೆ ಹಲವು ಭಕ್ತರು ಉಪಸ್ಥಿತರಿದ್ದರು.