23/12/2024

ಜಿಲ್ಲೆಯ ವಿದ್ಯಾರ್ಥಿಗಳು ಸಿಇಟಿ ಎದುರಿಸಲು “ಸಕ್ಷಮ್”

ಬೆಳಗಾವಿ-೨೪: ಸರ್ಕಾರಿ ಪದವಿ ಪೂರ್ವ ವಿದ್ಯಾಲಯಗಳಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಗ್ರಾಮೀಣ ಪ್ರದೇಶದ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ “ಸಿ.ಇ.ಟಿ.-ಸಕ್ಷಮ್” ಎಂಬ ವಿನೂತನ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಜಿಲ್ಲಾ ಪಂಚಾಯತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ CET-Saksham (ಸಿಇಟಿ-ಸಕ್ಷಮ) ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಜಿಲ್ಲೆಯ ಎಲ್ಲ ಸರಕಾರಿ ವಿಜ್ಞಾನ ಪದವಿ ಪೂರ್ವವ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ಕುಟುಂಬಗಳ ಹಾಗೂ ಗ್ರಾಮೀಣ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳನ್ನು ಸಿ.ಇ.ಟಿ ಎದುರಿಸಲು ಸಕ್ಷಮ ಗೊಳಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನವನ್ನು ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಆರಂಭಿಸಿದ್ದಾರೆ.

*ಏನಿದು ಸಿಇಟಿ-ಸಕ್ಷಮ್?:*

ಸರಕಾರಿ ವಿಜ್ಞಾನ ಪಿಯು ಕಾಲೇಜುಗಳ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಎರಡನೇ ಶನಿವಾರ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಲ್ಕನೇ ಶನಿವಾರ ಸಿದ್ಧತಾ ಪರೀಕ್ಷೆಗಳನ್ನು ನಡೆಸುವ ಮೂಲಕ ಸಿಇಟಿ-ನೀಟ್ ಪರೀಕ್ಷೆಗಳಿಗೆ ಅವರನ್ನು ಸಜ್ಜುಗೊಳಿಸುವುದು ಸಿಇಟಿ-ಸಕ್ಷಮ್ ಕಾರ್ಯಕ್ರಮವಾಗಿದೆ.

ಈ ಕಾರ್ಯಕ್ರಮದ ಅಂಗವಾಗಿ ದಿನಾಂಕ:24-08-2024ರAದು ಜಿಲ್ಲೆಯಾದ್ಯಂತ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಮೊದಲನೇ ಅಭ್ಯಾಸ ಪರೀಕ್ಷೆಯನ್ನು ಆಯೋಜಿಸಲಾಗಿದೆ.

ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯ ಒಟ್ಟಾರೆ 34 ಕಾಲೇಜುಗಳಲ್ಲಿ ಕರ್ನಾಟಕಪರೀಕ್ಷಾ ಪ್ರಾಧಿಕಾರವು CET/NEET ಪರೀಕ್ಷೆಗಳನ್ನು ನಡೆಸುವ ಮಾದರಿಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನು ್ನಜರುಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪಿ.ಯು.ಸಿ ವಿದ್ಯಾರ್ಥಿಗಳು ಅವರು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಲ್ಲಿಯೇ CET/NEET ಪರೀಕ್ಷೆಗಳನ್ನು ಎದುರಿಸಲಿದ್ದಾರೆ.

*ಸಕ್ಷಮ್ ಯಶಸ್ಸಿಗೆ ನಾಲ್ಕು ಸಮಿತಿ ರಚನೆ:*

ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿರುವ ಸಿಇಟಿ-ಸಕ್ಷಮ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅನುಕೂಲವಾಗುವಂತೆ ನಾಲ್ಕು ಸಮಿತಿಗಳನ್ನು ರಚಿಸಲಾಗಿರುತ್ತದೆ.

ಮೊದಲನೇ ಸಮಿತಿ- ಶೈಕ್ಷಣಿಕ ಸಮಿತಿ: ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದು ಹಾಗೂ ಫಲಿತಾಂಶದ ನಂತರ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ ಮಾಡಲಿದೆ.
ಎರಡನೇ ಸಮಿತಿ-ಆಡಳಿತ ಸಮಿತಿ: ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಡೆಸುವುದು; ಮೂರನೇ ಸಮಿತಿ-ಓ.ಎಂ.ಆರ್. ಸ್ಕಾö್ಯನಿಂಗ್ ಸಮಿತಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆ.ಇ.ಎ). ಮಾದರಿಯಲ್ಲಿ ಓ.ಎಂ.ಆರ್. ಸ್ಕ್ಯಾನಿಂಗ್ ಕಾರ್ಯನಿರ್ವಹಣೆ ಮಾಡುವುದರ ಜತೆಗೆ ಕಾಲೇಜುವಾರು ಫಲಿತಾಂಶ ಪ್ರಕಟಿಸಲಿದೆ.
ಅದೇ ರೀತಿ ನಾಲ್ಕನೇ ಸಮಿತಿಯು ಸಮನ್ವಯ ಸಮಿತಿಯಾಗಿದ್ದು, ಪರೀಕ್ಷಾ ಕಾರ್ಯವನ್ನು ಸಮನ್ವಯಗೊಳಿಸುವ ಕೆಲಸವನ್ನು ನಿರ್ವಹಿಸಲಿದೆ.

ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿಯಾಗಿರುವ ಗಂಗಾಧರ್ ದಿವಟರ ಅವರು ಈ ನಾಲ್ಕು ಸಮಿತಿಗಳ ಸಮನ್ವಯಕಾರರಾಗಿ ಕಾರ್ಯನಿರ್ವಹಿಸುತ್ತಾರೆ.

*CET -ಸಕ್ಷಮ ಕಾರ್ಯಕ್ರಮದ ವಿವರಗಳು ಕೆಳಗಿನಂತಿವೆ:*

ಬೆಳಗಾವಿ ಜಿಲ್ಲೆಯಲ್ಲಿ ಚಿಕ್ಕೋಡಿ ವಲಯದ 15 ಹಾಗೂ ಬೆಳಗಾವಿ ವಲಯದ 19 ಸೇರಿದಂತೆ ಒಟ್ಟು 34 ಸರ್ಕಾರಿ ಪದವಿಪೂರ್ವ ವಿಜ್ಞಾನ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

ಚಿಕ್ಕೋಡಿ ವಲಯದಲ್ಲಿ 1699 ಪ್ರಥಮ ಪಿ.ಯು.ಸಿ ಹಾಗೂ 1561 ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಹಾಗೂ ಬೆಳಗಾವಿ ವಲಯದಲ್ಲಿ 1444 ಪ್ರಥಮ ಪಿ.ಯು.ಸಿ ಹಾಗೂ 1359 ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆ 3143 ಪ್ರಥಮ ಪಿ.ಯು.ಸಿ ಹಾಗೂ 2920 ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಸರ್ಕಾರಿ ವಿಜ್ಞಾನ ವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸಶಕ್ತಗೊಳಿಸಲು ಮತ್ತು ಅವರ ಶೈಕ್ಷಣಿಕ ಸಾಮರ್ಥ್ಯವನ್ನು ವೃದ್ಧಿಸಲು ಬೆಳಗಾವಿ ಜಿಲ್ಲಾ ಪಂಚಾಯತಿಯು ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸರ್ಕಾರಿ ಪದವಿಪೂರ್ವ (ವಿಜ್ಞಾನ) ವಿದ್ಯಾರ್ಥಿಗಳಿಗೆ OMR ಪ್ರಶ್ನೆ ಪತ್ರಿಕೆ ಮೂಲಕ (ಈಗಾಗಲೇ ಜಾರಿಯಲ್ಲಿರುವ ಮಾದರಿಯಲ್ಲಿ) CET/NEET ಸಿದ್ಧತಾ ಪರೀಕ್ಷೆಗಳನ್ನು ಜರುಗಿಸುವ ಕುರಿತು ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕಾರ್ಯಕ್ರಮದ ಅಂಗವಾಗಿ ಪ್ರತಿ ತಿಂಗಳ ಎರಡನೇ ಶನಿವಾರ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಹಾಗೂ ನಾಲ್ಕನೇ ಶನಿವಾರ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ CET/NEET ಸಿದ್ಧತಾ ಪರೀಕ್ಷೆಗಳನ್ನು ಜರುಗಿಸಲಾಗುವುದು.

ಭಾನುವಾರ CET/NEET ಸಿದ್ಧತಾ ಪರೀಕ್ಷೆಗಳ ಮೌಲ್ಯಮಾಪನವನ್ನು ಕೈಗೊಳ್ಳಲಾಗುವುದು. ಮೌಲ್ಯಮಾಪನ ಆಧರಿಸಿ ಜಿಲ್ಲೆಯ ಮತ್ತು ತಾಲೂಕುವಾರು/ಕಾಲೇಜುವಾರು Ranking ಶ್ರೇಣಿ ನೀಡಲಾಗುವುದು.

ಮೌಲ್ಯಮಾಪನ ವಿವರಗಳನ್ನು ಆಧರಿಸಿ, ಕಾಲೇಜು ಮಟ್ಟದಲ್ಲಿ ಉಪನ್ಯಾಸಕರು ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಕಡಿಮೆ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ CET/NEET ಪರೀಕ್ಷೆ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸದೇ ಇರುವ ಬಗ್ಗೆ ಕಾರಣವಾದ ಅಂಶಗಳ ಆಧಾರದ ಮೇಲೆ ಮುಂದಿನ ಅಭ್ಯಾಸ ಪರೀಕ್ಷೆಯ ಒಳಗೆ ವಿದ್ಯಾರ್ಥಿಗಳ ಪರೀಕ್ಷೆಯನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮವಹಿಸುವುದು.

ಮಂಗಳವಾರ ಪೂರ್ವ ಸಿದ್ಧತಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿಷಯ ಪರಿಣಿತರಿಂದ ಸಂದೇಹ ನಿವಾರಣಾ (Doubt Clearing Session) ತರಗತಿಗಳನ್ನು ಆಯೋಜಿಸಲಾಗುವುದು. ಅಲ್ಲದೇ ವಿಷಯವಾರು ಹೆಚ್ಚು ವಿದ್ಯಾರ್ಥಿಗಳು ತಪ್ಪು ಉತ್ತರ ನೀಡಿರುವ ಪ್ರಶ್ನೆಗಳಿಗೆ ವಿವರಣಾತ್ಮಕ ತರಗತಿಗಳನ್ನು (Focused approach) ಆಯೋಜಿಸಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಿಇಟಿ-ಸಕ್ಷಮ್ ವಿನೂತನ ಕಾರ್ಯಕ್ರಮದ ಮೂಲಕ ನಡೆಸಲಾಗುವ ಸಿದ್ಧತಾ ಪರೀಕ್ಷೆಗಳು ವಿದ್ಯಾರ್ಥಿಗಳ CET/NEET ಪರೀಕ್ಷೆಗಳನ್ನು ಎದುರಿಸಲು ಸಾಮರ್ಥ್ಯ ಬಲಪಡಿಸುವುದಲ್ಲದೇ, ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪರಿಣಿತಿಯನ್ನು ಮತ್ತು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿವೆ.
****
*ಬಾಕ್ಸ್ ಮಾಡಬಹುದು…….*
ಬೆಳಗಾವಿ ಜಿಲ್ಲೆಯ ಸರಕಾರಿ ವಿಜ್ಞಾನ ಪಿಯು ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿರುವ ಸಿಇಟಿ/ನೀಟ್ ಪರೀಕ್ಷೆಯ ಭಯವನ್ನು ಹೋಗಲಾಡಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು “ಸಿಇಟಿ-ಸಕ್ಷಮ್” ಎಂಬ ವಿನೂತನ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ.

ಅಭ್ಯಾಸ ಪರೀಕ್ಷೆಗಳನ್ನು ಕೂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾದರಿಯಲ್ಲಿಯೇ ನಡೆಸುವ ಮೂಲಕ ಸಿಇಟಿ/ನೀಟ್ ಪರೀಕ್ಷೆಗಳನ್ನು ನಿರ್ಭಯವಾಗಿ ಹಾಗೂ ಸಮರ್ಥವಾಗಿ ಎದುರಿಸಲು ಅನುಕೂಲವಾಗುವಂತೆ ತರಬೇತಿಯನ್ನು ನೀಡಲಾಗುತ್ತಿದೆ.

-*ರಾಹುಲ್ ಶಿಂಧೆ*,
*ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು*,
*ಜಿಲ್ಲಾ ಪಂಚಾಯತಿ, ಬೆಳಗಾವಿ*.
IMG 20240824 WA0003 -

error: Content is protected !!