23/12/2024
FB_IMG_1724179031995

ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ತುರ್ತು ಕ್ರಮ

ಬೆಳಗಾವಿ-೨೧: ಇಲ್ಲಿನ ಕೆ.ಎಲ್‌.ಇ. ಸಂಸ್ಥೆಯ ಜವಾಹರಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು, ಮಹಿಳೆಯರ ಸಮಸ್ಯೆಗಳು ಮತ್ತು ಅವುಗಳನ್ನು ಎದುರಿಸುವ ವಿಧಾನಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ವಿದ್ಯಾರ್ಥಿನಿಯರು ಹಾಗೂ ಮಹಿಳಾ ಬೋಧಕಿಯರಿಗೆ ಕರ್ತವ್ಯ ನಿರ್ವಹಿಸುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಅವರು, ಲೈಂಗಿಕ ದೌರ್ಜನ್ಯ ಸೇರಿದಂತೆ ಯಾವುದೇ ಸಮಸ್ಯೆಗಳು ಎದುರಾದರೆ ತಕ್ಷಣವೇ ಪೊಲೀಸ್ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು.
ಒಂದು ವೇಳೆ ಸ್ಥಳೀಯವಾಗಿ ಸಮಸ್ಯೆಗೆ ಸೂಕ್ತ ಸ್ಪಂದನೆ ದೊರಕದಿದ್ದರೆ ಕೂಡಲೇ ನೇರವಾಗಿ ಮಹಿಳಾ ಆಯೋಗಕ್ಕೆ ಮಾಹಿತಿ ನೀಡುವಂತೆ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದರು.

ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ವಿವಿಧ ವಿಧಗಳನ್ನು ವಿವರಿಸಿದ ಅವರು, ಪ್ರತಿಯೊಂದು ಸಮಸ್ಯೆ ನಿವಾರಣೆಗೆ ಸರಕಾರವು ವಿವಿಧ ಬಗೆಯ ವ್ಯವಸ್ಥೆಗಳನ್ನು ಕಲ್ಪಿಸಿರುತ್ತದೆ. ಆದ್ದರಿಂದ ಇವುಗಳ ಸದ್ಬಳಕೆ ಮಾಡಿಕೊಂಡು ರಕ್ಷಣೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಪಿಎಂಸಿ ಠಾಣೆಯ ಪಿಎಸ್.ಐ. ಶ್ರೀಮತಿ ತ್ರಿವೇಣಿ, ಸಾಮಾಜಿಕ ಜಾಲತಾಣಗಳ ಕುರಿತು ಮಹಿಳೆಯರು ತುಂಬಾ ಜಾಗೃತರಾಗಬೇಕಾಗಿದೆ. ಇಲ್ಲದಿದ್ದರೆ ಪ್ರತಿಕ್ಷಣ ಭಯದಲ್ಲಿ ಬದುಕುವ ಸನ್ನಿವೇಶ ಎದುರಾಗಬಹುದು ಎಂಬುದನ್ನು ಇಲಾಖೆಯ ವಿವಿಧ ಪ್ರಕರಣಗಳನ್ನು ತೆರೆದಿಡುವುದರ ಮೂಲಕ ತಿಳಿಸಿಕೊಟ್ಟರು.

ಸವಾದದಲ್ಲಿ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ, ಮಹಿಳೆಯರಿಗೆ ತಮ್ಮ ಶಿಕ್ಷಣ ಸಂಸ್ಥೆಗಳು ಅಥವಾ ಕೆಲಸದ ಸ್ಥಳಗಳಲ್ಲಿ ದೌರ್ಜನ್ಯಗಳಾದಾಗ ನ್ಯಾಯ ಸಿಗದೇ ಹೋದಲ್ಲಿ ಜಿಲ್ಲಾ ಮಟ್ಟದಲ್ಲಿರುವಂತ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.
ಸ್ಥಳೀಯವಾಗಿ ನ್ಯಾಯ ದೊರಕದೇ ಹೋದಲ್ಲಿ ನೇರವಾಗಿ ಮಹಿಳಾ ಆಯೋಗಕ್ಕೆ ಮಾಹಿತಿ ನೀಡಿದರೆ ಆಯೋಗವು ತುರ್ತಾಗಿ ಕ್ರಮವಹಿಸುವುದು ಎಂದು ಭರವಸೆಯನ್ನು ನೀಡಿದರು.

ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಕೀಯ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

error: Content is protected !!