23/12/2024
IMG-20240819-WA0002

ಸಹೋದರರಿಂದ ಸಚಿವೆಗೆ ರಕ್ಷೆಯ ಹಾರೈಕೆ

ಬೆಳಗಾವಿ-೧೯: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಪ್ರತಿವರ್ಷದಂತೆ ಈ ಬಾರಿಯೂ ಸಾವಿರಾರು ಸಹೋದರರಿಗೆ ರಾಕಿ ಕಟ್ಟಿ, ರಕ್ಷಾ ಬಂಧನ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು.

ಭ್ರಾತೃತ್ವದ ಬಂಧವನ್ನು ಗಟ್ಟಿಗೊಳಿಸುವ ರಕ್ಷಾ ಬಂಧನದ ಪವಿತ್ರ ಹಬ್ಬವು ಸಚಿವರ ಬೆಳಗಾವಿಯ ಗೃಹ ಕಚೇರಿಯಲ್ಲಿ ಸಂತೋಷ, ಸಂಭ್ರಮ ಇಮ್ಮಡಿಸಿತ್ತು. ಸಚಿವರು ಆಗಮಿಸಿದ ಎಲ್ಲ ಸಹೋದರರನ್ನು ಆದರದಿಂದ ಸ್ವಾಗತಿಸಿ; ಸ್ವತಃ ತಾವೇ ಎಲ್ಲರಿಗೂ ಶ್ರೀರಕ್ಷೆ- ರಾಕಿಯನ್ನು ಕಟ್ಟಿ ಶುಭಾಶಯ ಕೋರಿದರು.

ಸಚಿವರು, ಕಳೆದ ಹತ್ತು ವರ್ಷಗಳಿಂದಲೂ ನಿರಂತರವಾಗಿ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಕೊರೋನ ವರ್ಷ ಹೊರತುಪಡಿಸಿ; ಇನ್ನಿಳಿದ ಎಲ್ಲ ವರ್ಷಗಳಲ್ಲೂ ಸಚಿವರ ನಿವಾಸದಲ್ಲಿ ರಾಕಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಆರಂಭದ ವರ್ಷಗಳಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನರು ಮಾತ್ರ ರಾಕಿ ಕಟ್ಟಿಸಿಕೊಂಡು ಶುಭಾಶಯ ವಿನಿಯಮ ಮಾಡಿಕೊಳ್ಳುತ್ತಿದ್ದರು. ಆದರೆ, ಈ ವರ್ಷ ಬೆಳಗಾವಿ ಕ್ಷೇತ್ರ ಮಾತ್ರವಲ್ಲ; ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಅಸಂಖ್ಯಾತ ಸಹೋದರರಿಗೆ ಉತ್ಸಾಹದಿಂದ ರಾಕಿ ಕಟ್ಟಿ ಸಂಭ್ರಮಪಟ್ಟರು.

ಇಂದು ಮೊದಲಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು, ವಿಧಾನಪರಿಷತ್ ಸದಸ್ಯರು ಹಾಗೂ ತಮ್ಮ ಸಹೋದರರಾದ ಚನ್ನರಾಜ ಹಟ್ಟಿಹೊಳಿ ಅವರಿಗೆ ರಾಕಿ ಕಟ್ಟಿದರು; ನಂತರ ಅವರು ಸಚಿವರ ಕಾಲಿಗೆರಗಿ, ಆಶೀರ್ವಾದ ಪಡೆದರು; ಶುಭಾಷಯ ವಿನಿಮಯ ಮಾಡಿಕೊಂಡರು. ಸಚಿವರೊಂದಿಗೆ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾದರು.

ಬೆಳಗ್ಗೆಯಿಂದಲೇ ಬೆಳಗಾವಿ ಗ್ರಾಮೀಣ ಕ್ಷೇತ್ರ, ಜಿಲ್ಲೆ ಅಷ್ಟೇ ಅಲ್ಲ, ರಾಜ್ಯದ ವಿವಿಧೆಡೆಯಿಂದ ಸಹೋದರ ಬಂಧುಗಳು ಸಚಿವರ ನಿವಾಸಕ್ಕೆ ಆಗಮಿಸಿದರು. ಸರತಿ ಸಾಲಿನಲ್ಲಿ ಬಂದ ಎಲ್ಲ ಸಹೋದರರಿಗೆ ಅತ್ಯಂತ ಪ್ರೀತಿಯಿಂದ ರಾಕಿ ಕಟ್ಟಿ; ಸಿಹಿ ತಿನಿಸಿ ಸಂಭ್ರಮಿಸಿದರು. ಈ ಸಂಭ್ರಮದ ಕಾರ್ಯಕ್ರಮವು ಮಧ್ಯಾಹ್ನದವರೆಗೂ ನಿರಂತರವಾಗಿ ನಡೆಯಿತು. ಬಂದವರಿಗೆಲ್ಲ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಸಚಿವರ ರಾಕಿ ಕಟ್ಟುವ ಕಾರ್ಯಕ್ರಮದಲ್ಲಿ ಅವರ ಪುತ್ರ ಮೃಣಾಲ್ ಹೆಬ್ಬಾಳಕರ್, ಸೊಸೆ ಡಾ. ಹಿತಾ ಕೂಡ ಸಾಥ್ ನೀಡಿದರು.

*ರಕ್ಷಾ ಬಂಧನ ಸಂಬಂಧಗಳ ಸಮೃದ್ಧಿ;*
*ಸಹೋದರರ ಭ್ರಾತೃತ್ವ ಎಂದೂ ಮರೆಯಲಾಗದು -ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
*ಅಕ್ಕನಿಗೆ ತಮ್ಮ; ತಮ್ಮನಿಗೆ ಅಕ್ಕನ ರಕ್ಷಣೆ*

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು, ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಸಹೋದರರಿಗಾಗಿ ರಕ್ಷಾ ಬಂಧನವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕೊರೊನಾ ವರ್ಷವನ್ನು ಬಿಟ್ಟರೆ, ಇನ್ನಿಳಿದಂತೆ ಎಲ್ಲ ವರ್ಷಗಳಲ್ಲೂ ಅತ್ಯಂತ ಸಂತೋಷದಿಂದ ಇಡೀ ಕ್ಷೇತ್ರದ ನನ್ನೆಲ್ಲ ಸಹೋದರರಿಗೆ ರಾಕಿ ಕಟ್ಟಿಕೊಂಡು ಬರುತ್ತಿದ್ದೇನೆ ಎಂದರು.

ನಾವು ಐವರು ಅಕ್ಕ ತಂಗಿಯರು; ನಮಗೆ ಒಬ್ಬನೇ ಒಬ್ಬ ಕೊನೆಯ ತಮ್ಮ. ದೇವರು ನಮಗೆ ಒಳ್ಳೆಯ ಆಶೀರ್ವಾದ ಮಾಡಿದ್ದಾನೆ. ಅಕ್ಕ , ತಮ್ಮನಿಗೆ ರಕ್ಷಣೆ ಮಾಡಿದರೆ; ತಮ್ಮ ಅಕ್ಕನಿಗೆ ರಕ್ಷಣೆ ಮಾಡುತ್ತಾನೆ. ಇದು ಈ ಹಬ್ಬದ ವಿಶೇಷತೆಯೂ ಹೌದು. ಇಡೀ ಕ್ಷೇತ್ರದ ಎಲ್ಲ ಅಣ್ಣ-ತಮ್ಮಂದಿರ ಜೊತೆ ಅತ್ಯಂತ ಸಂಭ್ರಮದಿಂದ ರಕ್ಷಾ ಬಂಧನವನ್ನು ಆಚರಿಸಿಕೊಂಡಿದ್ದೇವೆ ಎಂದು ಹೇಳಿದರು.

*ಸಚಿವರಾದ ಮೇಲೆ ಎರಡನೇ ಬಾರಿಗೆ…*
ಸಚಿವರಾದ ಬಳಿಕ ಇದು ಎರಡನೇ ಬಾರಿಗೆ ಕ್ಷೇತ್ರದಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ. ಬಿಡುವಿಲ್ಲದ ಸಂದರ್ಭವಾದರೂ; ಇಂತಹ ವಿಶೇಷತೆಯನ್ನು, ಪ್ರೀತಿ-ವಿಶ್ವಾಸವನ್ನು ಮರೆಯಲಾಗದು; ನಮ್ಮ ಸಂಬಂಧಗಳೂ ಮತ್ತಷ್ಟು ಸಮೃದ್ಧಿಯಾಗುತ್ತವೆ ಎಂದು ಸಚಿವರು ಹೇಳಿದರು.

*ಕ್ಷೇತ್ರದಲ್ಲಿ ಸುಖ-ಸಮೃದ್ಧಿ ತುಂಬಿ ತುಳಕಲಿ*
ಭಾರತೀಯರಲ್ಲಿ ರಕ್ಷಾ ಬಂಧನದಂತಹ ಹಬ್ಬ ಹರಿದಿನಗಳು ಸಂಸ್ಕಾರ, ಸಂಸ್ಕೃತಿಯನ್ನು ಇನ್ನು ಮುಂದೆಯೂ ತೆಗೆದುಕೊಂಡು ಹೋಗುವುದಕ್ಕೆ ಇದೊಂದು ಸುದೈವ. ಇದೇ ವೇಳೆ, ನಾಡಿಗೆ ಒಳ್ಳೆಯ ಮಳೆ; ಬೆಳೆ ಬಂದು ಎಲ್ಲೆಡೆ ಸಮೃದ್ಧಿಯಾಗಲಿ; ಸುಖ -ಸಮೃದ್ಧಿ ತುಂಬಿ ತುಳಕಲಿ; ನನ್ನೆಲ್ಲ ಅಣ್ಣ-ತಮ್ಮಂದಿರಿಗೆ ದೇವರು ಒಳ್ಳೆಯ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಸಚಿವರು ಕೋರಿದರು.

*ಅಪೂರ್ವ ಸಹೋದರಿಯರ ಪ್ರೀತಿ -ವಾತ್ಸಲ್ಯಕ್ಕೆ ಸದಾ ಋಣಿ*
*ಅಕ್ಕ ಹೇಳಿದಂತೆ ಜೀವನ ಪರ್ಯಂತ ನಡೆಯುತ್ತೇನೆ-ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ*

ರಕ್ಷಾ ಬಂಧನದ ವೇಳೆ ಸಂಭ್ರಮ ಹಂಚಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಸಹೋದರ ಹಾಗೂ ವಿಧಾನಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರು, ರಕ್ಷಾ ಬಂಧನದಂದು ಅಕ್ಕ ರಾಕಿ ಕಟ್ಟಿ; ಶುಭ ಹಾರೈಸಿರುವುದರಿಂದ ತುಂಬಾ ಸಂತೋಷವಾಗುತ್ತಿದೆ. ಇದು ನನ್ನ ಸೌಭಾಗ್ಯ. ಇಂತಹ ಅಕ್ಕನನ್ನು ಪಡೆದಿರುವುದಕ್ಕೆ ಭಗವಂತನಲ್ಲಿ ಸದಾ ಚಿರ ಋಣಿಯಾಗಿರುತ್ತೇನೆ ಎಂದರು.

ಇಂದು ನಮ್ಮ ಸಹೋದರಿ, ಕ್ಷೇತ್ರದ ಜನಪ್ರಿಯ ಶಾಸಕರಾಗಿ, ನಮ್ಮ ರಾಜ್ಯದ ಸಚಿವರಾಗಿ, ಅದೇ ರೀತಿ ಕ್ಷೇತ್ರದ ಮಗಳಾಗಿ, ಜನರ ಸೇವೆ ಮಾಡುತ್ತಿರುವುದು ಬಹಳ ಖುಷಿ ತಂದಿದೆ. ಅವರು ನಡೆದು ಬಂದ ಹಾದಿಯನ್ನು ನೋಡಿದರೆ, ಬಹಳ ಹೆಮ್ಮೆ ಅನಿಸುತ್ತದೆ. ಅಕ್ಕನೇ ನಮ್ಮೆಗೆಲ್ಲ ಸ್ಫೂರ್ತಿ. ಅವರು ಹಾಕಿಕೊಟ್ಟ ದಾರಿಯಲ್ಲಿ ಸದಾ ಮುನ್ನೆಡೆಯುತ್ತೇನೆ ಎಂದು ಈ ವೇಳೆ ಅವರು ವಾಗ್ದಾನ ಮಾಡಿದರು.

ನಮ್ಮ ಕುಟುಂಬ ನಮಗೆ ಹೆಮ್ಮೆ ಅನಿಸುತ್ತದೆ. ನನಗೆ ಐವರು ಸಹೋದರಿಯರು, ನಾನು ಆರನೇಯವನು; ಇಂತಹ ಅಪೂರ್ವ ಸಹೋದರಿಯರ ಪ್ರೀತಿ, ವಾತ್ಸಲ್ಯ ಪಡೆದಿರುವುದೇ ನನಗೆ ಪುಣ್ಯ. ನಾವೆಂದೂ ಇಂತಹ ದಿನಗಳು ಬರುತ್ತವೆಂದು ಕನಸು ಕಂಡವರಲ್ಲ; ದೇವರ ಆಶೀರ್ವಾದ, ಸುಮಾರು 25 ವರ್ಷಗಳಿಂದ ಅಕ್ಕ ಪಟ್ಟವಂತಹ ಕಷ್ಟ ಅಷ್ಟಿಷ್ಟಲ್ಲ. ರಾಜಕೀಯ ಸಂಘರ್ಷ, ಛಲದ ಹೋರಾಟದಿಂದಲೇ ಸಾಧನೆ ಮಾಡಿದಂತಹ ಗಟ್ಟಿಗಿತ್ತಿ. ಅವರನ್ನು ನೋಡಿದರೆ ನಮಗೆಲ್ಲ ಹೆಮ್ಮೆ. ಇಡೀ ರಾಜ್ಯದ ಎಲ್ಲ ಮಹಿಳೆಯರಿಗೂ ದೊಡ್ಡ ಸ್ಫೂರ್ತಿ. ಜೀವನಪರ್ಯಂತ ಅವರು ಹಾಕಿಕೊಟ್ಟ ಮಾರ್ಗದಲ್ಲಿ; ಅವರು ಹೇಳಿದಂತೆ ನಡೆಯುತ್ತೇನೆಂದು ಹೇಳಿದರು.

error: Content is protected !!