12/01/2025
IMG-20240811-WA0009

ರಾಜ್ಯದೆಲ್ಲೆಡೆ ಉತ್ತಮ ಮಳೆ: ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಕಾಯಕಲ್ಪ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

 

ಭದ್ರಾವತಿ-11:ರಾಜ್ಯದ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದ್ದು, ರಾಜ್ಯದಲ್ಲೆಡೆ ಈಗ ಉತ್ತಮ ಮಳೆಯಾಗುತ್ತಿರುವುದರಿಂದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕಾಯಕಲ್ಪಕ್ಕೆ ಸರ್ಕಾರ ಮುಂದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಭದ್ರಾವತಿ ತಾಲ್ಲೂಕಿನ ಬಿ.ಆರ್. ಪ್ರಾಜೆಕ್ಟ್ ಬಳಿ ಭಾನುವಾರ ನಡೆದ ಮಧ್ಯಕರ್ನಾಟಕ ಭಾಗದ ಜೀವನಾಡಿ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಮತ್ತು ಗಂಗಾ ಪೂಜೆಯನ್ನು ನೆರವೇರಿಸಿದ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಅಪಾರ ಕಾಳಜಿ ಇದೆ. ರೈತರಿಗಾಗಿ ಹಲವು ಯೋಜನೆ ರೂಪಿಸಿದ್ದಾರೆ ಎಂದರು.

IMG 20240811 WA0008 -

*ರೈತರ ಸಮಸ್ಯೆಗಳಿಗೆ ಸದಾ ಸ್ಪಂದನೆ*

ರಾಜ್ಯದಲ್ಲಿ ಈ ಹಿಂದೆ ಎದುರಾದ ಬರವನ್ನು ನಮ್ಮ ಸರ್ಕಾರ ಸಮರ್ಥವಾಗಿ ಎದುರಿಸಿತು. ಈಗ ಎದುರಾಗಿರುವ ಮಳೆಹಾನಿ, ನೆರೆಯನ್ನೂ ಕೂಡ ಸರ್ಕಾರ ಸಮರ್ಥವಾಗಿ ಎದುರಿಸುತ್ತಿದೆ. ಈ ವರ್ಷ ಸಂತಸದ ಸಂಗತಿ ಎಂದರೆ, ನಾಡಿನಲ್ಲೆಡೆ ಉತ್ತಮವಾಗಿ ಮಳೆ ಆಗಿದೆ. ಕೆಲವೆಡೆ ಅನಾಹುತಕ್ಕೂ ಕಾರಣವಾಗಿದೆ. ಎಲ್ಲೇ, ಏನೇ ಸಮಸ್ಯೆಯಾದರೂ ತಕ್ಷಣವೇ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರೈತರಿಗೆ, ಜನಸಾಮಾನ್ಯರಿಗೆ ಯಾವುದೇ ರೀತಿಯಿಂದಲೂ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ಹೇಳಿದರು.

ಈ ಬಾರಿ ಮಲೆನಾಡ ಭಾಗದಲ್ಲಿ ಉತ್ತಮವಾಗಿ ಮಳೆ ಆಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕೃಷಿ ಚಟುವಟಿಕೆಗಳು ಕೂಡ ಬಿರುಸುಗೊಂಡಿವೆ. ಎಲ್ಲೆಡೆ ಒಳ್ಳೆಯ ಮಳೆ ಆಗುತ್ತಿರುವುದರಿಂದ ಉತ್ತಮವಾಗಿ ಬೆಳೆ ಬಂದು ರೈತನ ಸಂಕಷ್ಟ ಪರಿಹಾರವಾಗಲಿ ಎನ್ನುವುದು ಸರ್ಕಾರದ ಆಶಯ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

*ನೀರಾವರಿ ಯೋಜನೆಗಳಿಗೆ ಆದ್ಯತೆ*

ನಾಡಿನ ಹಿತ ಕಾಯುವಂತ ಅನೇಕ ಜನಪರ ಕಾರ್ಯಕ್ರಮಗಳನ್ನು ಸರಕಾರ ಅನುಷ್ಠಾನಗೊಳಿಸುತ್ತಿದೆ. ವಿಶೇಷವಾಗಿ ರೈತರ ಕಲ್ಯಾಣಕ್ಕಾಗಿ ಕಾರ್ಯ ಯೋಜನೆ ರೂಪಿಸಿದೆ. ಕುಂಠಿತಗೊಂಡಿದ್ದ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

*ಸರಿಯಾದ ರೀತಿಯಲ್ಲಿ ನೀರಿನ ಸದ್ಬಳಕೆ*

ಭದ್ರಾ ಜಲಾಶಯದಿಂದ ಸುಮಾರು 11 ಜಿಲ್ಲೆಗಳ 2.5 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸಲಾಗುತ್ತಿದೆ. ಇನ್ನೂ 2.5 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಯೋಜನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ಕಾರ್ಯಗತವಾಗುತ್ತಿವೆ. ಈ ಭಾಗದ ರೈತರು ಸರಿಯಾದ ರೀತಿಯಲ್ಲಿ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಚಿವರು ಸಲಹೆ ನೀಡಿದರು.

*ಜಿಲ್ಲಾ ಉಸ್ತುವಾರಿ ಸಚಿವರು ಬಾಗಿ*

ಪ್ರಾಥಮಿಕ ಶಿಕ್ಷಣ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಬಿಳಿಕಿ ಮಠಾಧೀಶರು ಸೇರಿದಂತೆ ಸರ್ವಧರ್ಮಗಳ ಧರ್ಮಗುರುಗಳು, ಶಾಸಕರಾದ ಭದ್ರಾವತಿಯ ಬಿ. ಕೆ. ಸಂಗಮೇಶ್ವರ, ತರೀಕೆರೆಯ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಬಲ್ಕಿಶ್ ಬಾನು, ಭದ್ರಾವತಿಯ ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಶಿವಕುಮಾರ್ ಸೇರಿದಂತೆ ಭ್ರದ್ರಾವತಿ ಮತ್ತು ತರೀಕೆರೆ ಭಾಗದ ವಿವಿಧ ಜನಪ್ರತಿನಿಧಿಗಳು, ಕಾಂಗ್ರೆಸ್ ಮುಖಂಡರು ಹಾಜರಿದ್ದರು.

error: Content is protected !!