23/12/2024
IMG-20240810-WA0001

ಬೆಳಗಾವಿ-10:ಜಗತ್ತಿನಲ್ಲಿ ಯಾರಿಂದಲೂ ಕದಿಯಲಾಗದ, ಯಾರಿಗೂ ತೆರಿಗೆ ರೂಪದಲ್ಲಿ ನೀಡಲಾಗದ, ಯಾರಿಗೂ ಪಾಲು ನೀಡಲಾಗದ ಹಾಗೂ ಎಷ್ಟೇ ಖರ್ಚು ಮಾಡಿದರೂ ತೀರದ ಸಂಪತ್ತು ವಿದ್ಯೆ. ಅಂತಹ ವಿದ್ಯೆ ಒಂದಿದ್ದರೆ ಎಂತಹ ಸಂಕಷ್ಟದಿಂದಲೂ ಪಾರಾಗಬಹುದಲ್ಲದೇ ಅದು ನಮ್ಮೆಲ್ಲರ ವ್ಯಕ್ತಿತ್ವವನ್ನು ಸುಂದರಗೊಳಿಸುತ್ತದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು  ಶಿವಬಸವ ನಗರದ ಪ್ರಭುದೇವ ಸಭಾಗ್ರಹದಲ್ಲಿ ಹಮ್ಮಿಕೊಂಡಿದ್ದ ಸಿದ್ಧರಾಮೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ‘ಶಾಲಾ ಸಂಸತ್ತು ಹಾಗು ಸಾಂಸ್ಕೃತಿಕ ಸಂಘಗಳ’ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಾ ಮಾತನಾಡಿದರು. ಮುಂದುವರೆದು ಮಾತನಾಡಿದ ಶ್ರೀಗಳು ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆಯಿಂದ ಬಾಲ್ಯದಿಂದಲೇ ನಿರಂತರವಾಗಿ ಪ್ರಯತ್ನಿಸಿದರೆ ಒಲಪಿಂಕ್ ಪದಕ ಗಳಿಸುವುದು ಕಷ್ಟಸಾಧ್ಯವಲ್ಲ. ದೊಡ್ಡಗುರಿಯೊಂದಿಗೆ ನಿರಂತರ ಶ್ರಮಪಟ್ಟರೆ ಯಾವುದೂ ಅಸಾಧ್ಯವಲ್ಲ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಚಿಂತಾಮಣರಾವ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಹಣ್ಣೂರ ಮಾತನಾಡಿ ಎಲ್ಲರಿಂದ ತಿರಸ್ಕಾರಕ್ಕೆ ಒಳಗಾಗಿ ನೆಲಕ್ಕೆ ಚೆಲ್ಲಲ್ಪಟ್ಟ ಬೀಜವೇ ಮುಂದೊಂದು ದಿನ ಮೊಳಕೆಯೊಡೆದು ಹೆಮ್ಮರವಾಗುವಂತೆ, ವಿದ್ಯಾರ್ಥಿಗಳು ತಾನು ದಡ್ಡ, ನನ್ನ ತಲೆಗೆ ವಿದ್ಯೆ ಹತ್ತುವುದಿಲ್ಲ ಎಂಬ ಕೀಳರಿಮೆಯಿಂದ ಹೊರಬಂದು ನಿರಂತರ ಅಧ್ಯಯನಶೀಲರಾಗಿ ಉನ್ನತ ಸಾಧನೆ ಮಾಡಬೇಕೆಂದು ಪ್ರೇರೇಪಿಸಿದರು.
ಇನ್ನೋರ್ವ ಅತಿಥಿ ಯರಗಟ್ಟಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕಿರಣ ಚೌಗಲೆ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರೆ ಅಂತವರ ಶೈಕ್ಷಣಿಕ ಪ್ರಗತಿ ಇಮ್ಮಡಿಯಾಗುತ್ತದೆ. ವಿದೇಶಿ ಶೈಲಿಯ ಬಟ್ಟೆಯಿಂದ ಯಾರೂ ಆಧುನಿಕರಾಗುವುದಿಲ್ಲ. ಆದರೆ ಉತ್ತಮ ಸಂಸ್ಕೃತಿ, ಒಳ್ಳೆಯ ಆಚಾರ ವಿಚಾರ, ಸಮಾಜಮುಖಿ ಕಾರ್ಯಗಳಿಂದ ಎಲ್ಲರೂ ಆಧುನಿಕರಾಗಬಹುದು ಎಂದರು.

ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ. ಬಿ. ಹಿರೇಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದ “ಧರ್ಮವ ಬೆಳಗಿದೆ ಅಣ್ಣಾ, ಕರ್ಮವ ಕಳೆದೆ ಅಣ್ಣಾ, ಬಾ ಬಾರೋ ಈ ಧರೆಗೆ ಬಸವಣ್ಣ” ಎಂಬ ನೃತ್ಯ ಎಲ್ಲರ ಮನಸೂರಿಗೊಂಡಿತು.

ಶಾಲೆಯ ಉಪಪ್ರಾಚಾರ್ಯ ಶಿವಲೀಲಾ ಪೂಜಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಮನೋಹರ ಉಳ್ಳೇಗಡ್ಡಿ ನಿರೂಪಿಸಿದರು. ಶಿಕ್ಷಕರಾದ ಲಕ್ಷ್ಮಣ ಮೆಳವಂಕಿ, ಜಾನಕಿ ಚೌಗಲೆ ಪರಿಚಯಿಸಿದರೆ ಇನ್ನೋರ್ವ ಶಿಕ್ಷಕ ಎಮ್. ಬಿ. ಬೆಳಗಾವಿ ಶಾಲಾ ಸಾಂಸ್ಕೃತಿಕ ಚಟುವಟಿಕೆಗಳ ವರದಿ ವಾಚಿಸಿದರು. ಕೊನೆಗೆ ಶಿಕ್ಷಕಿ ಪ್ರೀತಿರಾಣಿ ಸಿದ್ರಾಮಣಿ ವಂದಿಸಿದರು.

error: Content is protected !!