ಬೆಳಗಾವಿ-03:ಪಾದಯಾತ್ರೆ ಅತ್ಯಂತ ಪವಿತ್ರ ಕಾರ್ಯವಾಗಿದೆ. ಅದನ್ನು ಕೈಗೊಂಡವರು ಶಾಸಕ, ಸಚಿವ ಹಾಗೂ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕದಲ್ಲಿ ಯಡಿಯೂರಪ್ಪ ಸಹ ಪಾದಯಾತ್ರೆ ಮಾಡಿಯೇ ಮುಖ್ಯಮಂತ್ರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಯುವನಾಯಕ ತಮ್ಮನಗೌಡ ರವಿ ಪಾಟೀಲ್ ಗಡಿಭಾಗದಲ್ಲಿ ಪಾದಯಾತ್ರೆ ಕೈಗೊಂಡಿರುವುದು ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗುತ್ತದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ವಿಜಯಪುರ ನಗರದ ಶಾಸಕರ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಪಾದಿಸಿದರು.
ಮಹಾರಾಷ್ಟ್ರದ ಜತ್ ತಾಲೂಕಿನ ಬಿಳ್ಳೂರ ಗ್ರಾಮದಲ್ಲಿ ಜನಕಲ್ಯಾಣ ಸಂವಾದ ಯಾತ್ರೆಯಲ್ಲಿ ಬೆಂಬಲ ಸೂಚಿಸಿ ಮಾತನಾಡಿದರು.
ಈ ಭಾಗದಲ್ಲಿನ ಶಾಸಕರು ನಮ್ಮ ಸಚಿವ ಎಂ.ಬಿ.ಪಾಟೀಲರೊಂದಿಗೆ ಸೇರಿ ಸುಳ್ಳು ಭರವಸೆ ನೀಡಿ ಚುನಾವಣೆಯಲ್ಲಿ ಗೆದ್ದು ಜನರಿಗೆ ವಚನ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದರು.
ಈಗಾಗಲೇ ಜತ್ ತಾಲೂಕಿನ ಗಡಿಭಾಗದ ಪ್ರದೇಶದ ಜನರು ತಮ್ಮ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದ್ದರು. ಇಲ್ಲದಿದ್ದರೆ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಆಗ್ರಹಿಸಿದರು. ಆದರೆ ಸಭ್ಯ ಸುಸಂಸ್ಕೃತ ಹಾಗೂ ಪ್ರಾಮಾಣಿಕ ವ್ಯಕ್ತಿ ತಮ್ಮನಗೌಡ ರವಿ ಪಾಟೀಲ್ ಅವರನ್ನು ಶಾಸಕನಾಗಿಸಿದರೆ ಇಲ್ಲಿನ ಜನರು ಕರ್ನಾಟಕಕ್ಕೆ ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನೀರು ಬರುವುದರ ಜೊತೆಗೆ ಕ್ಷೇತ್ರವು ಅಭಿವೃದ್ಧಿಯಾಗುತ್ತದೆ ಎಂದು ಭರವಸೆ ನೀಡಿದರು.
*ಖರ್ಗೆ ನಿಜವಾದ ದಲಿತರಾಗಿದ್ದರೆ ಕಾಂಗ್ರೆಸ್ ನಲ್ಲಿ ಇರುತ್ತಿರಲಿಲ್ಲ*
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪುತ್ರ ಪ್ರಿಯಾಂಕ ಖರ್ಗೆ ಅವರಿಬ್ಬರು ನಿಜವಾದ ದಲಿತ ರಾಗಿದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ಇರುತ್ತಿರಲಿಲ್ಲ ಎಂದು ಯತ್ನಾಳ್ ಕಿಡಿ ಕಾರಿದರು. ಯಾಕೆಂದರೆ ಕಾಂಗ್ರೆಸ್ ಅಂಬೇಡ್ಕರ್ ಅಂತ್ಯಕ್ರಿಯೆಗೆ ವಿಮಾನ ವ್ಯವಸ್ಥೆ ಮಾಡಲಿಲ್ಲ. ಅಂತಹ ಮಹಾನ್ ನಾಯಕನಿಗೆ ಕಾಂಗ್ರೆಸ್ ಅನ್ಯಾಯಮಾಡಿದೆ ಆದರೆ ಜನರಿನ್ನು ಕಾಂಗ್ರೆಸ್ ಭ್ರಮೆಯಲ್ಲಿದ್ದಾರೆ ಎಂದು ತಿವಿದರು.
*ವಿಜಯೇಂದ್ರ, ನಿರಾಣಿ ನನ್ನ ಸೋಲಿಸಲು ಸಂಚು ರೂಪಿಸಿದ್ದರು*
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಕಳೆದ ಚುನಾವಣೆಯಲ್ಲಿ ವಿಜಯಪುರ ನಗರದಲ್ಲಿ ನನ್ನನ್ನು ಸೋಲಿಸಲು ತಲಾ ಮೂರು ಕೋಟಿಯಷ್ಟು ಹಣವನ್ನು ಕಳುಹಿಸಿದ್ದರು. ಆದರೆ ವಿಪರ್ಯಾಸವೆಂದರೆ ನನ್ನ ಸೋಲಿಸಲು ಸಂಚು ರೂಪಿಸಿದವರೇ ಸೋತು ಸುಣ್ಣವಾಗಿದ್ದಾರೆ ಎಂದು ಟಾಂಗ್ ನೀಡಿದರು.
*ಯಡಿಯೂರಪ್ಪ ಇರುವವರೆಗೆ ನಮ್ಮ ಕುಸ್ತಿ ಇದ್ದೆ ಇರುತ್ತದೆ*
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾನು ಸಿಎಂ ಆಗುವುದನ್ನು ತಪ್ಪಿಸಲು ಯತ್ನಿಸುತ್ತಿದ್ದಾರೆ. ಬದಲಿಗೆ ತಮ್ಮ ಮಗ ವಿಜಯೇಂದ್ರರನ್ನು ಸಿಎಂ ಮಾಡಲು ನನ್ನನ್ನು ಪಕ್ಷದಿಂದ ಹೊರಹಾಕುವಂತೆ ದೆಹಲಿಯಲ್ಲಿ ಹೈಕಮಾಂಡ್ ಬಳಿ ಆವಾಗಾವಾಗ ಹೋಗುತ್ತಿರುತ್ತಾರೆ. ಆದರೆ ಅದು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ರಾಯಲಿಂಗೇಶ್ವರ ಕಕಮರಿ ಮಠದ ಗುರು ಲಿಂಗ ಜಂಗಮ ಸ್ವಾಮೀಜಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಮಣ್ಣ ಜೀವಣ್ಣವರ್, ಬಿ.ಎಸ್.ಗೆಜ್ಜಿ, ಜನಕಲ್ಯಾಣ ಸಂವಾದ ಯಾತ್ರೆಯ ಅಧ್ಯಕ್ಷ ನಿವೃತ್ತಿ ಶಿಂಧೆ ಸರ್ಕಾರ್, ಗಡಿ ಜಲ ಸಂಘರ್ಷ ಸಮಿತಿಯ ಸುನೀಲ್ ಪೋತದಾರ, ಯುವ ಮುಖಂಡ ಪಿರು ಕೋಳಿ, ಬಿಳ್ಳೂರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗನಗೌಡ ಪಾಟೀಲ್, ಮಹಾದೇವ ಕಲ್ಲೂತಿ, ಹಣಮಂತ ಗಡದೆ, ಕಾಮಣ್ಣ ಬಂಡಗರ, ಸಾಗರ ಬಿಜ್ಜರಗಿ, ಅಧ್ಯಕ್ಷ ರಾಮನಿಂಗ ನಿವರಗಿ, ರಾಮಚಂದ್ರ ಪಾಟೀಲ್, ಬಸವರಾಜ ಪಾಟೀಲ್ ಯಕ್ಕುಂಡಿ,ಗುರುಬಸು ಕಾಯಪುರೆ, ಡಾ.ರಾಜೇಶ್ ಜೀವಣ್ಣವರ್, ಅಪ್ಪು ಏಳೂರ್ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.