ಜತ್-01: ಗಡಿಭಾಗದ ಕನ್ನಡಿಗರನ್ನು ಭೇಟಿಯಾಗಿ ಅವರ ಸಮಸ್ಯೆಗಳಿಗೆ ಕಿವಿಯಾಗುವ ನಿಟ್ಟಿನಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ಕರ್ನಾಟಕದ ಜನಪ್ರಿಯ ನಾಯಕರಾದ ವಿಜಯಪುರ ನಗರದ ಶಾಸಕರು ಬಸನಗೌಡ ಪಾಟೀಲ್ ಯತ್ನಾಳ್ ಮಹಾರಾಷ್ಟ್ರದ ಜತ್ ತಾಲೂಕಿನ ಬಿಳ್ಳೂರ ಗ್ರಾಮಕ್ಕೆ ಆಗಮಿಸಲಿದ್ದಾರೆ. ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಯುವ ಮುಖಂಡ ಪಿರು ಕೋಳಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಜತ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜತ್ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಾಗಬೇಕು ಹಾಗೂ ಈ ಭಾಗದ ರೈತರ,ಯುವಕರ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕೆಂದು ನಮ್ಮ ಭಾಗದ ಯುವನಾಯಕರಾದ ತಮ್ಮನಗೌಡ ರವಿ ಪಾಟೀಲ್ ನೇತೃತ್ವದಲ್ಲಿ ನಾವು ಕಳೆದ ಐದು ದಿನಗಳಿಂದ ತಾಲೂಕಿನ ಉಮದಿ ಗ್ರಾಮದಿಂದ ಜನಕಲ್ಯಾಣ ಸಂವಾದ ಯಾತ್ರೆಯ ಹೆಸರಿನಲ್ಲಿ ಸುಮಾರು 300 ಕಿಲೋಮೀಟರ್ ಬೃಹತ್ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಈ ಪಾದಯಾತ್ರೆಯಲ್ಲಿ ಕ್ಷೇತ್ರದ ಎಲ್ಲ ಗ್ರಾಮಗಳ ಸಾವಿರಾರು ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಭಾಗಿಯಾಗುವ ಮೂಲಕ ತಮ್ಮನ ಗೌಡ ರವಿ ಪಾಟೀಲ್ ಅವರಿಗೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಹಲವಾರು ಕಾಮಗಾರಿಗಳು, ಜನಸಾಮಾನ್ಯರ ಸಮಸ್ಯೆಗಳ ಕುರಿತು ಈ ಯಾತ್ರೆಯಲ್ಲಿ ಮಾಹಿತಿ ಪಡೆಯಲಾಗಿದೆ. ಇವುಗಳಿಗೆ ಶೀಘ್ರದಲ್ಲೇ ನಮ್ಮ ನಾಯಕರು ಪರಿಹಾರ ನೀಡಲಿದ್ದಾರೆ ಎಂದು ಅವರು ತಿಳಿಸಿದರು. ಆಗಸ್ಟ್ 1ರಂದೇ ನಿಗದಿಯಾಗಿದ್ದ ಕಾರ್ಯಕ್ರಮವು ಕಾರಣಾಂತರಗಳಿಂದ ಮುಂದೂಡಿದ್ದು ಅಂತಿಮವಾಗಿ
ನಾಳೆ 2-08-2024 ರಂದು ಸಾಯಂಕಾಲ 4 ಗಂಟೆಗೆ ಬಿಳ್ಳೂರ ತಲುಪುವ ಈ ಪಾದಯಾತ್ರೆಯಲ್ಲಿ ಯತ್ನಾಳ್ ಅವರು ಭಾಗವಹಿಸಿ ಸ್ವಾಭಿಮಾನದ ನಡಿಗೆಗೆ ಬೆಂಬಲ ನೀಡಲಿದ್ದಾರೆ ಎಂದು ಇನ್ನೋರ್ವ ಮುಖಂಡರಾದ ಬಸವರಾಜ ಪಾಟೀಲ್ ಯಕ್ಕುಂಡಿ ತಿಳಿಸಿದ್ದಾರೆ.
ಅಲ್ಲದೆ ಪಾದಯಾತ್ರೆಯ ಮೊದಲನೇ ಹಂತದ ಕೊನೆಯ ದಿನವಾಗುವ ಶುಕ್ರವಾರ ನಡೆಯುವ ಬೃಹತ್ ಸಮಾವೇಶದಲ್ಲಿ ಯತ್ನಾಳ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಯಾವುದೇ ಭಾಷೆಯ ಕುರಿತು ಭೇದಭಾವವಿಲ್ಲದ ಸರ್ವಜನಾಂಗದ ನಾಯಕರಾಗಿರುವ ಯತ್ನಾಳ್ ಮುಖ್ಯವಾಗಿ ಈ ಭಾಗದ ಕನ್ನಡಿಗರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಕನ್ನಡ ಶಾಲೆಗಳ ಸ್ಥಿತಿಗತಿಯ ಕುರಿತು ಎರಡೂ ಸರ್ಕಾರಗಳನ್ನು ಎಚ್ಚರಿಸುವ ಕಾರ್ಯವನ್ನು ಮಾಡಲಿದ್ದಾರೆ ಎಂದು ಬಸವರಾಜ ಪಾಟೀಲ್ ತಿಳಿಸಿದ್ದಾರೆ.
ಈ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ಹಾಗೂ ಸಾಂಗ್ಲಿ, ಜತ್ ತಾಲೂಕಿನ ಎಲ್ಲ ಗ್ರಾಮಸ್ಥರು ಪಾಲ್ಗೊಳ್ಳಬೇಕೆಂದು ಯುವ ಮುಖಂಡರು ಮನವಿ ಮಾಡಿದ್ದಾರೆ.