ಬೆಳಗಾವಿ(ಸಂಕೇಶ್ವರ)-29 :ಭಾನುವಾರ ಹಿರಣ್ಯಕೇಶಿ ನದಿಯ ಪ್ರವಾಹ ಪೀಡಿತ ಪ್ರದೇಶ ಹಾಗೂ ಕಾಳಜಿ ಕೇಂದ್ರಗಳಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಹಿರಣ್ಯಕೇಶಿ ನದಿ ಪಾತ್ರದಲ್ಲಿ ಮುಳುಗಡೆಯಾದ ನದಿ ಗಲ್ಲಿ,ಮಠ ಗಲ್ಲಿ ಪ್ರದೇಶಕ್ಕೆ ಹಾಗೂ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.ಮುಳುಗಡೆಯಾದ ಮನೆಗಳು,ಸಂತ್ರಸ್ತರಿಗೆ ಕಲ್ಪಿಸಿದ ವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ನೆರೆ ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆ ಮಾಡಿ, ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸೂಚಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನತೆ ಯಾರು ಕೂಡ ಭಯ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ, ತಹಶೀಲ್ದಾರ , ಸ್ಥಳೀಯ ಮಟ್ಟದ ಅಧಿಕಾರಿಗಳು ಸೇರಿದಂತೆ ನಾವು ಕೂಡ ನಿರಂತರವಾಗಿ ನಿಮ್ಮ ಜೊತೆ ಇದ್ದೇವೆ ಎಂದು ಹೇಳಿದರು.
ಜಿಲ್ಲಾಡಳಿತ, ಸ್ಥಳೀಯ ಮಟ್ಟದ ಅಧಿಕಾರಿಗಳು ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ಆರಂಭಿಸಿದ್ದು, ಗುಣಮಟ್ಟದ ಆಹಾರವನ್ನು ಕಾಳಜಿ ಕೇಂದ್ರದಲ್ಲಿ ನೀಡಲಾಗುತ್ತಿದ್ದು,ನೆರೆ ಸಂತ್ರಸ್ತರು ಹಲವು ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದು, ಪ್ರಾಮಾಣಿಕವಾಗಿ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ತಹಶೀಲ್ದಾರ ಮಂಜುಳಾ ನಾಯಿಕ, ತಾಲೂಕಾ ವೈದ್ಯಾಧಿಕಾರಿ ಉದಯ ಕುಡಚಿ, ಉಪ ತಹಶೀಲ್ದಾರ ಸಿ.ಎ.ಪಾಟೀಲ, ಕಂದಾಯ ನಿರೀಕ್ಷಕ ಎ.ಎಮ್. ಕಮತನೂರ, ಪುರಸಭೆಯ ಮುಖ್ಯಾಧಿಕಾರಿ ಪ್ರಕಾಶ ಮಠದ, ಸಿಪಿಐ ಶಿವಶರಣ ಅವಜಿ,ಅಭಿಯಂತರ ರವೀಂದ್ರ ಗಡಾದ,ಗ್ರಾಮ ಲೆಕ್ಕಾಧಿಕಾರಿಗಳಾದ ಎನ್.ಆರ್ ಪಾಟೀಲ ಸೇರಿದಂತೆ ಇತರರು ಹಾಜರಿದ್ದರು.