ಕೌಜಲಗಿ-25: ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ಅತಿ ದೊಡ್ಡ ಜಿಲ್ಲೆಯಾಗಿದ್ದು, ಜಿಲ್ಲೆಯ ವಿಭಜನೆ ಅವಶ್ಯಕತೆ ಇರುವಂತೆ ಜಿಲ್ಲೆಯಲ್ಲಿ ಅವಿಭಜಿತ ಗೋಕಾಕ ತಾಲೂಕು ಕೂಡ ಭೌಗೋಳಿಕವಾಗಿ ಅತ್ಯಂತ ದೊಡ್ಡ ತಾಲೂಕಾಗಿದ್ದು ಗೋಕಾಕನ್ನು ಮೂಡಲಗಿಯಂತೆ ಕೌಜಲಗಿ ತಾಲೂಕಾಗಿಯೂ ವಿಭಜಿಸಬೇಕಾದದು ಅವಶ್ಯಕವಾಗಿದೆ ಎಂದು ಕೌಜಲಗಿ ಕನ್ನಡ ಕೌಸ್ತುಭ ಸಂಘಟನೆಯ ಅಧ್ಯಕ್ಷ ಸಾಹಿತಿ ಡಾ.ರಾಜು ಕಂಬಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ನೂತನ ಜಿಲ್ಲೆಗಳನ್ನು ರಚಿಸಲು ಸರ್ಕಾರ ಮುಂದಾದಲ್ಲಿ ಗೋಕಾಕ್ ಜಿಲ್ಲಾ ಘೋಷಣೆಯ ಪೂರ್ವದಲ್ಲಿಯೇ ಗೋಕಾಕ ತಾಲೂಕನ್ನು ವೈಜ್ಞಾನಿಕವಾಗಿ ಮೂರು ಹೋಬಳಿಗಳಿಗೆ ಅನುಗುಣವಾಗಿ ವಿಭಜಿಸಿ ಕೌಜಲಗಿ ತಾಲೂಕನ್ನು ಘೋಷಿಸಲು ಇದು ಸಕಾಲವಾಗಿದ್ದು , ನಿಯೋಜಿತ ಗೋಕಾಕ್ ಜಿಲ್ಲೆಯಲ್ಲಿ ಸೇರ್ಪಡೆಗೊಳಿಸಲು ಈಗ ಜರಗುತ್ತಿರುವ ಅಧಿವೇಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಜಿಲ್ಲೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಧ್ವನಿ ಎತ್ತಬೇಕೆಂದು ಮನವಿ ಮಾಡಿದ ಕಂಬಾರ ಅವರು, ಅವಿಭಜಿತ ಗೋಕಾಕ ತಾಲೂಕು ಗೋಕಾಕ್ ಮತ್ತು ಅರಭಾವಿ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡು, ಗೋಕಾಕ, ಅರಬಾವಿ, ಕೌಜಲಗಿ ಮೂರು ಕಂದಾಯ ಹೋಬಳಿಗಳನ್ನು ಹೊಂದಿದೆ.
2017ರಲ್ಲಿ ರಾಜ್ಯದಲ್ಲಿ ನೂತನ ತಾಲೂಕು ರಚನೆಯ ಸಂದರ್ಭದಲ್ಲಿ ಗೋಕಾಕ ತಾಲೂಕನ್ನು ವಿಭಜಿಸುವಾಗ ಮೂಡಲಗಿ ಮಾತ್ರ ತಾಲೂಕು ಕೇಂದ್ರವಾಗಿ ರಚಿಸಿ, ಕೌಜಲಗಿ ಭಾಗದ ಜನರಿಗೆ ಅನ್ಯಾಯ ಮಾಡಲಾಗಿದೆ. ಕೌಜಲಗಿ ತಾಲೂಕ ರಚನೆಗಾಗಿ 1973 ರಿಂದಲೂ ಹೋರಾಟ ಮಾಡುತ್ತಲೇ ಬಂದಿದೆ. ಜಿಲ್ಲಾ ಮತ್ತು ತಾಲೂಕು ಪುನರ್ ವಿಂಗಡನ ಆಯೋಗಗಳು ಕೌಜಲಗಿಯನ್ನು ತಾಲೂಕು ಕೇಂದ್ರವಾಗಿಸಬೇಕೆಂದು ವರದಿ ನೀಡಿವೆ. ಕೌಜಲಗಿ ಹೋಬಳಿ ಭಾಗದ ಜನ ಅರಭಾವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಶೈಕ್ಷಣಿಕ ಮತ್ತು ಪೊಲೀಸ್ ಇಲಾಖೆಗೆ ಸಂಬಂಧಿಸಿ ಮೂಡಲಗಿ ತಾಲೂಕು ವ್ಯಾಪ್ತಿಯಲ್ಲಿ ಮತ್ತು ಕಂದಾಯ ಹಾಗೂ ನ್ಯಾಯಾಂಗ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದಂತೆ ಗೋಕಾಕ್ ತಾಲೂಕಿನ ವ್ಯಾಪ್ತಿಯಲ್ಲಿ ಈ ಭಾಗದ ಸಾರ್ವಜನಿಕರು, ಅಧಿಕಾರಿಗಳು ಓಡಾಡಬೇಕಾಗಿದೆ. ಉಪ ತಹಶೀಲ್ದಾರ ಕೇಂದ್ರವನ್ನು ಹೊಂದಿರುವ ಕೌಜಲಗಿಯನ್ನು ನೂತನ ತಾಲೂಕು ಕೇಂದ್ರವನ್ನಾಗಿ ರಚಿಸಿ ನೂತನ ಗೋಕಾಕ್ ಜಿಲ್ಲಾ ವ್ಯಾಪ್ತಿಯಲ್ಲಿ ಸೇರ್ಪಡಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.