ಬೆಳಗಾವಿ-14: 50 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಂತ ಬಾಳೇಕುಂದ್ರಿ ಗ್ರಾಮದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಕಾಳಜಿಯಿಂದ ಹಣ ಮಂಜೂರಾಗಿದ್ದು, ಜನರಿಗೆ ಈ ಹಿಂದೆ ಕೊಟ್ಟಿದ್ದ ವಾಗ್ದಾನವನ್ನು ಈಡೇರಿಸಲಾಗಿದೆ. 50 ಲಕ್ಷ ರೂ,ಗಳ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಚನ್ನರಾಜ ತಿಳಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಅನುಪಸ್ಥಿತಿಯಲ್ಲಿ, ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು. ಸಾರ್ವಜನಿಕರಿಗೆ ತೊಂದರೆಗಳಾಗಂತೆ, ನಿಗದಿತ ಸಮಯದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಚನ್ನರಾಜ ಹಟ್ಟಿಹೊಳಿ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಗುಲಾಬಿ ಅ. ಕೋಲಕಾರ, ಉಪಾಧ್ಯಕ್ಷರಾದ ಬಿಬಿ ಅನಿಫಾ, ಸದಸ್ಯರುಗಳಾದ ಪಾರ್ವತಿ ತಳವಾರ, ಮೈನೂದ್ದಿನ್ ಅಗಸಿಮನಿ, ಮಹಮ್ಮದ್ ಜಮಾದಾರ, ಮಲ್ಲಿಕ್ ಮನಿಯಾರ್, ಅಪ್ಸರ್ ಜಮಾದಾರ, ಹೊನಗೌಡ ಪಾಟೀಲ, ಜಮೀಲ್ ಕಾಜಿ, ಪ್ರವೀಣ ಪಾಟೀಲ, ದತ್ತು ಕೋಲಕಾರ್, ಮಾರುತಿ ಕಾಂಬಳೆ ಮುಂತಾದವರು ಹಾಜರಿದ್ದರು.