23/12/2024
IMG-20240714-WA0002

ಬೆಳಗಾವಿ-14:ಗಿಡಗಳನ್ನು ನೆಡುವುದಷ್ಟೇ ನಮ್ಮ ಕಾರ್ಯವಲ್ಲ ಬದಲಾಗಿ ಅವುಗಳ ಪಾಲನೆಯು ನಮ್ಮೆಲ್ಲರ ಮೇಲಿರುವ ಮಹತ್ವದ ಜವಾಬ್ದಾರಿಯಾಗಿದೆ. ಇದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿ ಉಳಿಯಬಾರದು ಈ ರೀತಿಯ ವನಮಹೋತ್ಸವಗಳು ನಿರಂತರವಾಗಿ ನಡೆಯುತ್ತಿರಬೇಕೆಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್ ಕರೆ ನೀಡಿದರು.

ಶನಿವಾರ ನಡೆದ ಕಣಬರ್ಗಿಯ ಸಾಗರ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಡಾನ್ ಬೊಸ್ಕೋ, ವಿಷ್ಣು-ಲಕ್ಷ್ಮೀ ಫೌಂಡೇಶನ್ ಹಾಗೂ ತರಂಗಿಣಿ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಸಿ ನೆಟ್ಟು ಮಾತನಾಡಿದರು.
ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಪರಿಸರ ಸಂರಕ್ಷಣೆಯ ಪ್ರಜ್ಞೆ ಬೆಳೆಸಬೇಕಾಗಿದೆ ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪ್ರೇರಣೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಸ್ನೇಹಿ ವಾತಾವರಣ ಸೃಷ್ಟಿಸಲು ಶ್ರಮಿಸಬೇಕಿದೆ ಎಂದು ತಿಳಿಸಿದರು.
ಈಗಾಗಲೇ ಉತ್ತರ ಮತಕ್ಷೇತ್ರದಲ್ಲಿ ಜನರಿಗೆ ಹತ್ತಿರವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ನಾನು ಕೆಲಸ ಮಾಡುತ್ತಿದ್ದೇನೆ. ಇನ್ನುಳಿದಂತೆ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗದಂತೆ ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇನೆಂದು ಭರವಸೆ ನೀಡಿದರು.
ಯಾವುದೇ ಸ್ವಾರ್ಥ ರಹಿತ ಹಾಗೂ ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಡೊನಬೋಸ್ಕೋ ವಿಷ್ಣು ಲಕ್ಷ್ಮೀ ಫೌಂಡೇಶನ್ ಹಾಗೂ ತರಂಗಿಣಿ ಫೌಂಡೇಶನ್ ಕಾರ್ಯಕ್ಕೆ ರಾಜು ಸೇಠ್ ಶ್ಲಾಘನೆ ವ್ಯಕ್ತಪಡಿಸಿದರು.
ಸಸಿ ನೆಡುವ ಈ ಕಾರ್ಯಕ್ರಮ ಕೇವಲ ನೆಪಥ್ಯವಾದರೂ ಸಹ ಇದರಿಂದ ಸ್ಲಂ ಪ್ರದೇಶವಾಗಿರುವ ಸಾಗರ ನಗರದ ಅಭಿವೃದ್ಧಿಯ ದೃಷ್ಟಿಕೋನ ಆಯೋಜಕರಲ್ಲಿದೆ. ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ವಿಷ್ಣು ಲಕ್ಷ್ಮೀ ಫೌಂಡೇಶನ್ ಹಾಗೂ ಡಾನ್ ಬೊಸ್ಕೋ ಸಂಸ್ಥೆಗೆ ಅಭಿನಂದನೆಗಳನ್ನು ಸಮಾಜ ಸೇವಕ ಪ್ರವೀಣ್ ಗೊನ್ಸಾಲ್ವಿಸ್ ಮತ್ತು ಮೇರಿ ಜೇಕಬ್, ತಿಳಿಸಿದರು.
ಇದೇ ವೇಳೆ ಬಡಾವಣೆ ವ್ಯಾಪ್ತಿಯಲ್ಲಿ ಕಂಡು ಬಂದ ಕುಂದು ಕೊರತೆಗಳ ಕುರಿತು ಶಾಲೆಯ ಶಿಕ್ಷಕರು ಹಾಗೂ ಸಾರ್ವಜನಿಕರು ಶಾಸಕ ಸೇಠ್ ಗಮನಕ್ಕೆ ತಂದರು. ಸಮಸ್ಯೆಗಳನ್ನು ಅರಿತುಕೊಂಡ ಅವರು ಆದಷ್ಟು ಬೇಗನೆ ಇವುಗಳನ್ನು ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಂ. ಅಷ್ಟೇಕರ್, ಕಾಂಗ್ರೆಸ್ ಮುಖಂಡ ಭೈರೇಗೌಡ ಪಾಟೀಲ್, ಅನಮೋಲ ತಂಗುಧಾಮ ಹಾಗೂ ಮಕ್ಕಳ ಆಶ್ರಯ ಗೃಹದ ಸಂಯೋಜಕಿ ಸಿಸ್ಟರ್ ನಾತಾಲ್ ರೋಡ್ರಿಗಿಸ್, ವಿಷ್ಣು ಲಕ್ಷ್ಮೀ ಫೌಂಡೇಶನ್ ನಿರ್ದೇಶಕ ವಿಷ್ಣು ಇಂಗಳಿ, ತರಂಗಿಣಿ ಫೌಂಡೇಶನ್ ನ ಲವಿನಾ ಗ್ರೇಸ್,ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ, ಮುಖಂಡರಾದ ಅಜಯ್ ಬಾಗಡಿ, ಪರಶುರಾಮ ಕೊಂಡೂರ ಶಿವಪ್ಪ ಶಿರವಟ್ಟಿ ಸೇರಿದಂತೆ ಯುವಕರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.

error: Content is protected !!