ಬೆಳಗಾವಿ-೨೧: ಗ್ರಾಮೀಣ ಪ್ರದೇಶದಲ್ಲಿ ಕಲುಷಿತ ನೀರಿನಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್ ಮತ್ತು ಡಬ್ಲ್ಯೂ.ಕ್ಯೂ.ಎಮ್.ಐ.ಎಸ್ ಪಾಕೇಟ್ ಹ್ಯಾಂಡ್ ಬುಕ್ ಗಳನ್ನು ಉದ್ಘಾಟಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ.
ನಗರದ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಶುಕ್ರವಾರ ರಂದು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕಲುಷಿತ ನೀರಿನಿಂದಾಗುವ ದುಷ್ಪರಿಣಾಮಗಳ ಕುರಿತು ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ವ್ಯಾಪಕ ಪ್ರಚಾರ ಮಾಡಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ರವರು ಗ್ರಾಮೀಣ ಪ್ರದೇಶದಲ್ಲಿ ಕಲುಷಿತ ನೀರಿನಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪೋಸ್ಟರ್ ಮತ್ತು ಡಬ್ಲ್ಯೂ.ಕ್ಯೂ.ಎಮ್.ಐ.ಎಸ್ (ವಾಟರ್ ಕ್ವಾಲಿಟಿ ಮ್ಯಾನೇಜಮೆಂಟ ಇನಫಾರಮೇಶನ್ ಸಿಸ್ಟಮ್) ಪಾಕೇಟ್ ಹ್ಯಾಂಡ್ ಬುಕ್ ಗಳ ಮಾದರಿಗಳನ್ನು ಸಿದ್ದಪಡಿಸಿ ವಿತರಿಸಿದ್ದು, ಅವುಗಳನ್ನು ಜಿಲ್ಲಾ ಹಂತದಲ್ಲಿ ಮುದ್ರಣಮಾಡಿ ಪ್ರತಿಯೊಂದು ಗ್ರಾಮ ಪಂಚಾಯತಿಗಳಿಗೆ ನೀಡುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನರು ಕಲುಷಿತ ನೀರು ಸೇವನೆ ಮಾಡದಂತೆ ವ್ಯಾಪಕ ಜನ-ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ನೆರೆದಿದ್ದ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಅವಗಡಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಏರ್ಪಡಿಸುವುದು, ಗ್ರಾಮ ಪಂಚಾಯತಿಗಳಲ್ಲಿನ ನೀರು ಸಂಗ್ರಹಣಾ ತೊಟ್ಟಿಗಳನ್ನು ಸ್ವಚ್ಛ್ವಗೊಳಿಸುವುದು ಮತ್ತು ಬೋರವೆಲ್ ರಿಚಾರ್ಜ ಪಿಟ್ಗಳನ್ನು ಮಾಡಿಸುವುದು, ಜಲ-ಮೂಲಗಳ ರಕ್ಷಣೆ, ನೀರಿನ ಗುಣಮಟ್ಟ ಪರಿಶೀಲನೆ ಕುರಿತು ಅರಿವು ಮೂಡಿಸುವ ಭಿತ್ತಿ ಪತ್ರಗಳ ಹಂಚಿಕೆ ಮಾಡುವುದು, ಜಿಲ್ಲೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಎಮ್.ವಿ.ಎಸ್) ವಾಟರ್ ಟ್ರಿಟಮೇಂಟ್ ಪ್ಲಾಂಟ್ (ಡಬ್ಲ್ಯೂ ಟಿ ಪಿ) ಪ್ರತಿ ಎರಡು ತಿಂಗಳಿಗೊಮ್ಮೆ ಸ್ವಚ್ಛಗೊಳಿಸುವುದು, ಅದೇ ರೀತಿ ಏಕ ಗ್ರಾಮ ಯೋಜನೆ(ಎಸ್.ವಿ.ಎಸ್) ಒವರ್ ಹೆಡ್ ಟ್ಯಾಂಕ್ (ಒ.ಎಚ್.ಟಿ) ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳನ್ನು ಪ್ರತಿ ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕೆಂದು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಯೋಜನಾ ನಿರ್ದೇಶಕ ರವಿ ಬಂಗಾರಪ್ಪನ್ನವರ, ಬೆಳಗಾವಿ ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಶಶಿಕಾಂತ ನಾಯಕ, ಜಲ ಜೀವನ್ ಮಿಷನ್ ಯೋಜನೆಯ ಯೋಜನಾ ವ್ಯವಸ್ಥಾಪಕರು ಮತ್ತು ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯ ಜಿಲ್ಲಾ ಸಮಾಲೋಚಕರು ಹಾಜರಿದ್ದರು.