23/12/2024
IMG-20240619-WA0017

ಬೆಳಗಾವಿ-೧೯: ನಗರದಲ್ಲಿರುವ ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಪ್ರಸ್ತುತ ಇರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಇಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಮಿತಿಯ ಜಿಲ್ಲಾಧ್ಯಕ್ಷ ಬಸವರಾಜ ಅರವಳ್ಳಿ ನೇತೃತ್ವದಲ್ಲಿ ನಗರದ ಮಹಾನಗರ ಪಾಲಿಕೆಯಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಲಾಯಿತು.

ಬೆಳಗಾವಿ ನಗರ ಹಾಗೂ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸೇರಿದಂತೆ ಹಿಂದುಳಿದ ವರ್ಗಗಳ ಜನಸಂಖ್ಯೆ ಹೆಚ್ಚಿಗೆ ಇರುವುದರಿಂದ ಬೆಳಗಾವಿ ನಗರದಲ್ಲಿ ಶಿಕ್ಷಣವೂ ಗುಣಮಟ್ಟದಿಂದ ಕೂಡಿದ್ದು, ವಿದ್ಯಾರ್ಥಿಗಳಿಗೆ ಓದಲು ಒಳ್ಳೆಯ ವಾತಾವರಣ ಇರುವುದರಿಂದ ಬೆಳಗಾವಿ ನಗರ ಹಾಗೂ ತಾಲೂಕಿನ ಜನ ಬೆಳಗಾವಿಯಲ್ಲಿಯೇ ಉದ್ಯೋಗದ ಜೊತೆಗೆ ಉಪ ಜೀವನವನ್ನು ಅವಲಂಬಿಸಿದ್ದಾರೆ ಎಂದು ಸಮಿತಿ ಸದಸ್ಯರು ಇದೇ ವೇಳೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಬಡತನದಲ್ಲಿ ಬೆಳೆದ ಮಕ್ಕಳಿಗೆ ವಸತಿ ನಿಲಯಗಳು ಶಿಕ್ಷಣದ ಭದ್ರಬುನಾದಿಗಳಾಗಿದ್ದು, ಬಹು ದೂರದ ಊರಿನಿಂದ ಶಿಕ್ಷಣದ ಕನಸು ಹೊತ್ತು ಬಂದ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಸ್ಥಳವೇ ಇಲ್ಲವಾಗಿದೆ. ಆದ್ದರಿಂದ ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 125 ರಷ್ಟಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು 150ರ ವರೆಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಅಲ್ಲದೆ ಎರಡು ಮೆಟ್ರಿಕ್ ಪೂರ್ವ ವಸತಿ ಗೃಹಗಳನ್ನು ಹೆಚ್ಚಿಗೆ ಮಾಡಿ ಕಡುಬಡುವ ವಿದ್ಯಾರ್ಥಿಗಳ ಶಿಕ್ಷಣದ ಕನಸನ್ನು ಬೆಳಗಾವಿ ನಗರದಲ್ಲಿಯೇ ನನಸಾಗುವಂತೆ ಮಾಡಬೇಕೆಂದು ವಿನಂತಿಸಿದರು.
ಮನವಿ ಆಲಿಸಿದ ಸಚಿವರು ತಕ್ಷಣ ಸ್ಥಳದಲ್ಲಿದ್ದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಯಲ್ಲಪ್ಪ ಹೆಚ್ ಹುಲಿ, ಸಾಮಾಜಿಕ ಹೋರಾಟಗಾರರಾದ ವಿಷ್ಣು ಇಂಗಳಿ, ಸಮಿತಿಯ ಜಂಟಿ ಕಾರ್ಯದರ್ಶಿ ಸುಭಾಷ್ ಹುಲ್ಲೇನವರ್, ಬೆಳಗಾವಿ ನಗರ ಅಧ್ಯಕ್ಷ ಪ್ರಕಾಶ್ ತಳವಾರ್ ಸೇರಿದಂತೆ ದಲಿತ ಮುಖಂಡರಾದ ಸಂದೀಪ್ ಕೋಲಕಾರ ಇನ್ನಿತರರು ಹಾಜರಿದ್ದರು.

error: Content is protected !!