23/12/2024
IMG-20240615-WA0001

ರೈತರಿಗೆ ಮನವರಿಕೆ ಮಾಡಿದರೆ ಮಾತ್ರ ಹೊಸ ಲೆವೋಟ್ ಮಾಡಲು ಸಾಧ್ಯ

ಬೆಳಗಾವಿ-೧೫: ಜೂನ್‌ ಅಂತ್ಯದೊಳಗೆ ಮಹಾನಗರ ಪಾಲಿಕೆ, ಕೆಡಿಪಿ ಸೇರಿದಂತೆ ಪ್ರತಿ ಇಲಾಖೆಗಳ ಸಭೆಗಳನ್ನು ನಡೆಸಿ ಆಡಳಿತ ಚುರುಕುಗೊಳಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ನಗರದ ಬೂಡಾ ಕಚೇರಿ ಸಭಾಂಗಣದಲ್ಲಿ‌ ನಡೆದ ಸಾಮಾನ್ಯ ಸಭೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ತಿಂಗಳಿಂದ ಆಡಳಿತ ನಿಧಾನವಾಗಿತ್ತು. ಹೊಸ ಕಾಮಗಾರಿಗಳ ಆರಂಭಕ್ಕಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಶೀಘ್ರವೇ ಹೊಸ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಕಣಬರ್ಗಿ ಲೇಔಟ್‌ ಕಾಮಗಾರಿ ಪೂರ್ಣಗೊಳ್ಳಲು ಬಂದಿದೆ. ಹೊಸ ಲೇಔಟ್‌ ಗಳ ವಿನ್ಯಾಸಕ್ಕಾಗಿ ಈಗಾಗಲೇ ನೀಲ ನಕ್ಷೆ ತಯಾರಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೊಸ ಲೇಔಟ್‌ ಗಳನ್ನು ಮಾಡಬೇಕೋ ಅಥವಾ ಬೇಡವೋ ಎಂಬ ಕುರಿತು ನಿರ್ಧರಿಸುತ್ತೇನೆ. ಹೊಸ ಲೇಔಟ್‌ಗಳ ನಿರ್ಮಿಸಬೇಕಾದರೆ ಕೆಲವು ತಿದ್ದುಪಡಿಗಳಾಗಿದ್ದು, ಹೊಸ ಕಾನೂನುಗಳಿಂದ ರೈತರಿಗೆ ಅನೂಕುಲ ಇದೆ. ರೈತರಿಗೆ ನಾವು ಮನವರಿಕೆ ಮಾಡಿದರೆ ಮಾತ್ರ ಹೊಸ ಲೆವೋಟ್ ಗಳನ್ನು ಮಾಡಲು ಸಾಧ್ಯವಿದೆ ಎಂದು ಹೇಳಿದರು.

ಬೂಡಾದಲ್ಲಿ ನಡೆದಿರುವ ಅಕ್ರಮ ಬಗ್ಗೆ ಬೆಂಗಳೂರಿನ ಐಎಎಸ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ವರದಿ ಆಧರಿಸಿ ಕ್ರಮವಾಗುತ್ತದೆ. ಇನ್ನು ತನಿಖೆ ವಿಳಂಬವಾಗಿಲ್ಲ. ಸುದೀರ್ಘ ತನಿಖೆಯಾಗಬೇಕಾದರೆ ಸಮಯ ಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡರು.

ಅಕ್ರಮ ಬಡಾವಣೆಗಳಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅಕ್ರಮ ಇರಲಿ, ಅಧಿಕೃತ ಇರಲಿ, ಬಡಾವಣೆಗಳಿದ್ದರೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ನೀಡಬೇಕೆಂಬ ನಿರ್ದೇಶನವಿದೆ. ಹೀಗಾಗಿ ಅಕ್ರಮ ಬಡಾವಣೆಗಳಿದ್ದರೂ ಸೌಲಭ್ಯಗಳನ್ನು ನೀಡುತ್ತಾರೆಂದರು.

ಖಾನಾಪುರ ತಾಲೂಕಿನಲ್ಲಿ ಅರಣ್ಯ ಪ್ರದೇಶದಲ್ಲಿ ಲೇಔಟ್‌ ಮಾಡುತ್ತಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿ, ಅರಣ್ಯ ಪ್ರದೇಶದಲ್ಲಿ ಲೇಔಟ್‌ ಮಾಡಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ಅಧಿಕಾಗಳು ಅರಣ್ಯ ಪ್ರದೇಶದಲ್ಲಿ ನೀಗಾ ಇಟ್ಟಿರುತ್ತಾರೆ. ಅರಣ್ಯ ಪ್ರದೇಶದ ಸುತ್ತಮುತ್ತ ಖಾಸಗಿ ಜಮೀನು ಇದ್ದರೆ ಅಂತಲ್ಲಿ ಲೇಔಟ್‌ಗಳನ್ನು ಹಾಕಿರಬಹುದು ಎಂದರು.

ಭೂ ಸ್ವಾಧೀನಕ್ಕೂ ಮುನ್ನ ಟೆಂಡರ್‌ ಕರೆಯುವುದು ತಪ್ಪು. ಇಂತಹ ತಪ್ಪುಗಳು ಸಾಕಷ್ಟು ನಡೆದಿವೆ. ಬೆಳಗಾವಿ ರಿಂಗ್‌ ರೋಡ್‌ ಕಾಮಗಾರಿಯಲ್ಲಿಯೂ ಇದೇ ರೀತಿಯ ತಪ್ಪು ಆಗಿತ್ತು. ಆದರೆ ಈಗ ಸಮಸ್ಯೆ ಸರಿಪಡಿಸಿದ್ದು, ಬೆಳಗಾವಿ ರಿಂಗ್‌ ರೋಡ್‌ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.

ದರ್ಶನ್‌ ಕೇಸ್‌ ಬಗ್ಗೆ ಬೆಂಗಳೂರಿನವರನ್ನೇ ಕೇಳಿ: ಚಿತ್ರನಟ ದರ್ಶನ್‌ ಕೇಸ್‌ ಬಗ್ಗೆ ನನಗೆ ಮಾಹಿತಿ ಇಲ್ಲ. ಅಲ್ಲೇ ಬೆಂಗಳೂರಿನಲ್ಲಿ ಇದ್ದವರಿಗೆ ನೀವು ಕೇಳಿ. ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳಿಗೆ ಚಿತ್ರನಟರ ಸಂಪರ್ಕ ಇರುವುದು ತುಂಬಾ ಕಡಿಮೆ ಎಂದರು.

ಕುಮಟಳ್ಳಿ ಮನೆಗೆ ಬಂದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ:

ಮಾಜಿ ಶಾಸಕ ಕುಮಟಳ್ಳಿ ನಮ್ಮ ಮನೆಗೆ ಬಂದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ನಾವು ಅವರ ಮನೆಗೆ ಹೋಗುತ್ತಿದ್ದೇವು, ಈಗ ನಾವು ಅಧಿಕಾರದಲ್ಲಿ ಇದ್ದಿದ್ದರಿಂದ ನಮ್ಮ ಮನೆಗೆ ಅವರು ಬಂದಿದ್ದಾರೆ ಅಷ್ಟೇ. ಕುಮಟಳ್ಳಿ ಅಷ್ಟೇ ಅಲ್ಲ, ಶ್ರೀಮಂತ ಪಾಟೀಲ್‌, ದುರ್ಯೋಧನ ಐಹೊಳೆ, ಎಸ್.ಟಿ. ಸೋಮಶೇಖರ್‌, ವಿಠ್ಠಲ್‌ ಹಲಗೆಕರ್‌ ಸೇರಿದಂತೆ ಬಿಜೆಪಿ ಹಲವು ಶಾಸಕರು, ನಾಯಕರು ನಮ್ಮ ಮನೆಗೆ ಬರುತ್ತಾರೆ. ಕೆಲಸ, ಕಾರ್ಯಗಳಿದ್ದರೆ ನಾಯಕರು ಬರುವುದು ಸಹಜವೆಂದರು.

ಲೋಕಸಭೆ ಚುನಾವಣೆಗೂ ಮುಂಚಿತ ಡಿಸಿಎಂ ಹುದ್ದೆ ಕೇಳಿದ್ದೀವಿ. ಆದರೆ ಈಗ ಡಿಸಿಎಂ ಹುದ್ದೆಯ ಅವಶ್ಯಕತೆ ಇಲ್ಲ. ಲೋಕಸಭೆ ಚುನಾವಣೆಗೆ ಅನೂಕುಲವಾಗಲಿ ಎಂಬ ದೃಷ್ಟಿಯಿಂದ ಡಿಸಿಎಂ ಹುದ್ದೆ ಕೇಳಿದ್ದೀವಿ ಅಷ್ಟೇ. ಸಚಿವ ಸ್ಥಾನ ಇದೆ. ಚಿಕ್ಕೋಡಿ ಜನತೆ ನಮ್ಮ ಮೇಲೆ ವಿಶ್ವಾಸ ಇಟ್ಟು ಪುತ್ರಿ ಪ್ರಿಯಂಕಾಗೆ ಅವಕಾಶ ನೀಡಿದ್ದಾರೆ. ಅವರ ವಿಶ್ವಾಸ ಉಳಿಸಲು ಕೆಲಸಗಳನ್ನು ಮಾಡುತ್ತೇವೆಂದು ಇದೇ ವೇಳೆ ಭರವಸೆ ನೀಡಿದರು.

ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಎಲ್ಲಾ ಇಲಾಖೆಗೆ ಅನುದಾನ ಸಿಗುತ್ತಿದೆ. ಅನುದಾನ ಸಿಕ್ಕಿಲ್ಲ ಎಂಬ ಪ್ರಶ್ನೆಯ ಉದ್ಬವಿಸಲ್ಲ. ಗ್ಯಾರಂಟಿಗಳನ್ನು ನಿಲ್ಲಿಸಲ್ಲ ಎಂದು ಸಿಎಂ ಸಿದ್ದರಾಮಯ್ಯನವರೇ ತಿಳಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನೀವು ಸಿಎಂ, ಡಿಸಿಎಂ ಬಳಿಯ ಕೇಳಬೇಕು ಎಂದರು.

ಈ ಸಂರ್ಭದಲ್ಲಿ ಶಾಸಕ ಆಸೀಫ್ (ರಾಜು) ಸೇಠ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಜರಿದ್ದರು.

error: Content is protected !!