ಮನುಷ್ಯನ ಎಲ್ಲಾ ಆಸೆಗಳನ್ನು ಪೂರೈಸುವಷ್ಟು ಸಂಪನ್ಮೂಲ ಈ ಭೂಮಿಯ ಮೇಲಿದೆ. ಆದರೆ ನಮ್ಮ ದುರಾಸೆಗಳನ್ನು ಪೂರೈಸುವಷ್ಟಲ್ಲ. ನೀರಿನ ಆಗರವಾಗಿದ್ದ ಕೋಲಾರ ಜಿಲ್ಲೆ, ಇಂದು ಬರಪೀಡಿತ ಜಿಲ್ಲೆಯಾಗಿ ಪರಿವರ್ತನೆಯಾಗಿದ್ದು ಇತಿಹಾಸ. ಅಲ್ಲಿನ ಅಂತರ್ಜಲ ಬರಿದಾಗಿರುವುದರಿಂದ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಬಿಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಜನತೆ ಅದೃಷ್ಟವಂತರು. ಇಲ್ಲಿ ಅನೇಕ ನದಿಗಳು ತುಂಬಿ ಹರಿಯುತ್ತವೆ. ಆದರೆ ನೀರನ್ನು ಅನಾವಶ್ಯಕ ಪೋಲು ಮಾಡಿದರೆ ಮುಂದೊಂದು ದಿನ ಬೆಳಗಾವಿಯೂ ಸಹಿತ ಕೋಲಾರದಂತೆ ಬರಪೀಡಿತ ಆದರೆ ಆಶ್ಚರ್ಯವಿಲ್ಲ. ಕಾರಣ ಎಲ್ಲರೂ ನೀರನ್ನು ಹಿತ ಮಿತವಾಗಿ ಬಳಸುತ್ತಾ ಪರಿಸರಕ್ಕೆ ಪೂರಕವಾಗಿ ಬದುಕಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುರಳಿ ಮನೋಹರ ರೆಡ್ಡಿ ಅಭಿಪ್ರಾಯಪಟ್ಟರು. ಅವರು ಇಂದು ಶಿವಬಸವ ನಗರದ ಸಿದ್ಧರಾಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ ಗಜಾನನ ಮಣ್ಣಿಕೇರಿ ಮಾತನಾಡಿ ಮಾನವನನ್ನು ಹೊರತು ಪಡಿಸಿ ಭೂಮಿಯ ಮೇಲಿನ ಯಾವ ಜೀವರಾಶಿಗಳಿಂದಲೂ ಮಾಲಿನ್ಯವಾಗುತ್ತಿಲ್ಲ. ಆದರೆ ಬುದ್ದಿವಂತ ಮಾನವನಿಂದ ಮಾತ್ರ ನಿರಂತರ ಪರಿಸರ ಮಾಲಿನ್ಯವಾಗುತ್ತಿದೆ. ನಾವೆಲ್ಲ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಭೂಮಿಗೆ ಆತಂಕ ತಪ್ಪಿದ್ದಲ್ಲ. ಭವಿಷ್ಯದಲ್ಲಿ ನೀರಿನ ಟ್ಯಾಬ್ಲೆಟ್ ತೆಗೆದುಕೊಳ್ಳುವ ಕಾಲ ಬರಬಹುದು ಎಂದರು.
ಬಹುಮಾನ ವಿತರಣಾ ಸಮಾರಂಭದ ಸಾನಿಧ್ಯವಯಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಮಾತನಾಡಿ “ಕೊಡಲಿಯ ಕಾವು ಕುಲಕ್ಕೆ ಪೆಟ್ಟು” ಎಂಬ ಮಾತಿನಂತೆ ಮಾನವನ ದುರಾಸೆಯಿಂದಲೇ ವಾತಾವರಣ ಕಲುಷಿತಗೊಂಡು ಮಾಲಿನ್ಯಯುಕ್ತ ಪರಿಸರದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಯ ಸುಸ್ಥಿರ ಭವಿಷ್ಯಕ್ಕಾಗಿ ಜಾಗೃತಗೊಳ್ಳಲು ಇದೇ ಸೂಕ್ತ ಸಮಯ ಎಂದರು.
ಸಿದ್ದರಾಮೇಶ್ವರ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಕೆ. ಬಿ. ಹಿರೇಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿಯ ವಲಯ ಪರಿಸರ ಅಧಿಕಾರಿ ಗೋಪಾಲಕೃಷ್ಣ ಸಣ್ಣತಂಗಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಸಿದ್ದರಾಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಏ.ಕೆ. ಪಾಟೀಲ ಸ್ವಾಗತಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಶೋಭಾ ಪೋಳ ಪ್ರಾಸ್ತಾವಿಕವಾಗಿ ಮಾತನಾಡಿದರು ರಾಜಶೇಖರ್ ಪಾಟೀಲ ನಿರೂಪಿಸಿದರು ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಏನ್. ಬಿ. ಅತ್ತಾರ್ ವಂದಿಸಿದರು.
ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಿಂದ ತಾಜ್ಮೀರ್ ಸವದೆ ಪ್ರಥಮ, ಸ್ವಯಂ ಸಾವಂತ್ ದ್ವಿತೀಯ ಸ್ಥಾನ ಪಡೆದುಕೊಂಡರು ಪ್ರಬಂಧ ಸ್ಪರ್ಧೆಯಲ್ಲಿ ಸುವರ್ಣ ಶಿವಲಿಂಗನವರ ಪ್ರಥಮ, ರಾಹುಲ್ ಹುಣಶ್ಯಾಳ್ ದ್ವಿತೀಯ, ರತನ್ ಎಂ ತೃತೀಯ ಸ್ಥಾನ ಪಡೆದುಕೊಂಡರು. ಅದೇ ರೀತಿ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರೌಢ ವಿಭಾಗದಿಂದ ರಾಜ್ಯವರ್ಧನ ಕಾಂಬಳೆ ಪ್ರಥಮ, ದೇವರಾಜ್ ಸೋನಾಜಿ ದ್ವಿತೀಯ, ಲಕ್ಷ್ಮಿ ಗುದಗಿ ತೃತೀಯ ಸ್ಥಾನ ಪಡೆದುಕೊಂಡರು ಪ್ರೌಢಶಾಲಾ ವಿಭಾಗದಿಂದ ಪ್ರಬಂಧ ಸ್ಪರ್ಧೆಯಲ್ಲಿ ಪೂಜಾ ಪ್ರಥಮ, ಸಮರ್ಥ್ ಕಲ್ಕಾಂಬನವರ ದ್ವಿತೀಯ, ಶ್ರೀಶಾಂತ್ ಕಾಮತ್ ತೃತೀಯ ಸ್ಥಾನ ಪಡೆದುಕೊಂಡರು. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಾಳೇಶ್ ಪಾಟೀಲ ಹಾಗೂ ಜಗದೀಶ ಗೋರಬಾಳ ತಂಡ ಪ್ರಥಮ ಸ್ಥಾನ, ಗಜಾನನ ಲಮಾಣಿ ಮತ್ತುವದರ್ಶನ ವರಗ ದ್ವಿತೀಯ ಸ್ಥಾನ ಹಾಗೂ ಸಹನಾ ಪಾಟೀಲ ಮತ್ತು ನಂದಿತಾ ನೇಸರಗಿ ತಂಡ ತೃತೀಯ ಸ್ಥಾನ ಪಡೆದುಕೊಂಡರು.