ಬೆಳಗಾವಿ-೨೮:ಕೆಎಲ್‍ಇ ಶ್ರೀ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ ಅಗದತಂತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಡಾ.ಸಂತೋಷ ಫಕೀರಗೌಡ ಪಾಟೀಲ ಅವರು “ಕ್ಯಾನ್ಸರ್ ರೋಗಿಗಳಲ್ಲಿ ಕೀಮೊ-ವಿಕಿರಣದ ಪ್ರಚೋದಕ ಪ್ರತಿಕೂಲ ಪರಿಣಾಮ ಮೇಲೆ ಜೀವಂತ್ಯಾದಿ ತುಪ್ಪದ ಮಾತ್ರಾ ಬಸ್ತಿ ಮಾಡುವ ಪರಿಣಾಮದ ಮೌಲ್ಯಮಾಪನ” ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕೆ ಬೆಳಗಾವಿಯ ಕೆಎಲ್‍ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ ಕಾಹೆರ್‍ವು 14ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಡಾ.ಸಂತೋಷ ಪಾಟೀಲ ಅವರಿಗೆ ಅದೇ ಕಾಲೇಜಿನ ಪ್ರಾಚಾರ್ಯ ಡಾ.ಸುಹಾಸ ಕುಮಾರ ಶೆಟ್ಟಿ ಮಾರ್ಗದರ್ಶನ ಮಾಡಿದ್ದರು. ಈಗಾಗಲೇ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಹಲವಾರು ತಲಸ್ಪರ್ಶಿಯಾದ ಸಂಶೋಧನೆಗಳನ್ನು ಕೈಗೊಂಡಿರುವ ಡಾ.ಸಂತೋಷ ಪಾಟೀಲ ಅವರು ಕ್ಯಾನ್ಸರ್ ಕಿಮೋ ವಿಕಿರಣಗಳ ಕುರಿತು ಮತ್ತಷ್ಟು ಸಂಶೋಧನೆಯನ್ನು ಕೈಗೊಂಡು ಅದರಲ್ಲಿಯೇ ಪಿಎಚ್‍ಡಿ ಪದವಿಯನ್ನು ಪಡೆದಿರುವುದು ಹೆಮ್ಮೆಯ ಸಂಗತಿ. ಅವರಿಗೆ ಕೆಎಲ್‍ಇ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ, ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಿಬ್ಬಂದಿವರ್ಗದವರು, ಕುಟುಂಬದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.