ಬೆಳಗಾವಿ-೨೦: ಬೆಳಗಾವಿ ನಗರದ ಕಪಿಲೇಶ್ವರ ಮಂದಿರದ ಹಿಂಭಾಗದಲ್ಲಿರುವ ಕಪಿಲೇಶ್ವರ ಕೆರೆ ಪ್ರದೇಶದ ಸಮಸ್ಯೆಗಳ ಬಗ್ಗೆ ಮಹಾನಗರ ಪಾಲಿಕೆ ಹಾಗೂ ಹೆಸ್ಕಾಂ ನಿರ್ಲಕ್ಷಿಸುತ್ತಿರುವುದು ಗಮನ ಸೆಳೆಯುತ್ತಿದೆ.
ಈ ಪ್ರದೇಶದ ಮಕ್ಕಳು ಮತ್ತು ಯುವಕರು ಯಾವಾಗಲೂ ಕಪಿಲೇಶ್ವರ ಸರೋವರದಲ್ಲಿ ಈಜುವುದನ್ನು ಆನಂದಿಸುತ್ತಾರೆ. ಸದ್ಯ ಬೇಸಿಗೆ ರಜೆ ಇರುವುದರಿಂದ ಕಪಿಲೇಶ್ವರ ಕೆರೆಯಲ್ಲಿ ಈಜಲು ಮಕ್ಕಳು ಮುಗಿ ಬೀಳುತ್ತಿರುವುದು ಕಂಡು ಬರುತ್ತಿದೆ. ಆದರೆ, ಈ ಕೆರೆ ಪ್ರದೇಶದಲ್ಲಿ ವಿದ್ಯುತ್ ತಂತಿಗಳು ನೇತಾಡುತ್ತಿದ್ದು, ಕೆರೆಯ ಅಂಚಿನಲ್ಲಿರುವ ಮಣ್ಣು ಕುಸಿಯುತ್ತಿದೆ. ಹೀಗೆ ಮಣ್ಣು ಬೀಳುವುದು ಮುಂದುವರಿದರೆ ಕೆರೆಯ ಅಂಚಿನಲ್ಲಿರುವ ವಿದ್ಯುತ್ ಕಂಬ ಕುಸಿದು ಬೀಳುವ ಭೀತಿಯನ್ನು ಸ್ಥಳೀಯ ನಿವಾಸಿಗಳು ವ್ಯಕ್ತಪಡಿಸುತ್ತಿದ್ದಾರೆ. ಹೆಸ್ಕಾಂ ಹಾಗೂ ಪುರಸಭೆ ಆಡಳಿತ ಇತ್ತ ಗಮನಹರಿಸಿ ನೇತಾಡುತ್ತಿರುವ ವಿದ್ಯುತ್ ತಂತಿಗಳನ್ನು ತೆಗೆಯಬೇಕು ಎಂಬುದು ಕಪಿಲೇಶ್ವರ ಕೆರೆ ಪ್ರದೇಶದ ನಾಗರಿಕರ ಆಗ್ರಹವಾಗಿರುತ್ತದೆ.