ಬೆಳಗಾವಿ-೧೧: ಮತ್ತೊಂದು ಜೀವ ಉಳಿಸುವ ಶ್ರೇಷ್ಠದಾನ ರಕ್ತದಾನ. ಎಲ್ಲರೂ ರಕ್ತ ದಾನ ಮಾಡುವ ಮನೋಭಾವ ಬೆಳೆಸಿ ಕೊಳ್ಳಬೇಕು. ರಕ್ತದಾನ ಮಾಡುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಹಿಂಡಾಲ್ಕೊ ಕಂಪನಿಯ ಘಟಕದ ಮುಖ್ಯಸ್ಥರಾದ ಅಭಿಜೀತ್ ಬಂದಿ ಹೇಳಿದರು.
ಹಿಂಡಾಲ್ಕೋ ಕಾಲನಿಯಲ್ಲಿ ಬಸವನ ಬಳಗ ಹಿಂಡಾಲ್ಕೋ ಹಾಗೂ ಕೆಎಲ್ ಇ ಡಾ.ಪ್ರಭಾಕರ್ ಕೋರೆ ಆಸ್ಪತ್ರೆ ಸಹಯೋಗದಲ್ಲಿ ಶಿವಬಸವ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ ಮಹಾ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವೈದ್ಯರ ಸಲಹೆಯಂತೆ ನಾವೆಲ್ಲರೂ ಕಾಲ-ಕಾಲಕ್ಕೆ ರಕ್ತದಾನ ಮಾಡಬೇಕು. ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಅದನ್ನು ಮನುಷ್ಯರಿಂದಲೇ ಪಡೆಯಬೇಕು. ಅದಕ್ಕೆ ಜನರು ಹೆಚ್ಚೆಚ್ಚು ರಕ್ತದಾನ ಮಾಡಲು ಮುಂದೆ ಬರುವುದರ ಜತೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಳೆದ 15 ವರ್ಷದಿಂದ ಬಸವನ ಬಳಗ ಹಿಂಡಾಲ್ಕೋ ಹಾಗೂ ಕೆಎಲ್ ಇ ಸಂಸ್ಥೆಯ ಸಹಯೋಗದೊಂದಿಗೆ ಮಹನೀಯರ ಜಯಂತಿ ನಿಮಿತ್ತವಾಗಿ ರಕ್ತದಾನ ಆಯೋಜನೆ ಮಾಡಲಾಗುತ್ತಿದೆ. ಈ ಅಳಿಲು ಸೇವೆಯಿಂದ ಎಷ್ಟೋ ಬಡಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ನಾಡಿನ ಸಮಸ್ತ ಜನತೆಗೆ ಶಿವಬಸವ ಜಯಂತಿಯ ಹಾರ್ದಿಕ ಶುಭಾಶಯ ಕೋರಿದ ಅವರು, ಸಮಾಜದಲ್ಲಿ ಸಮಾನತೆಯನ್ನು 12ನೇ ಶತಮಾನದಲ್ಲಿಯೇ ಸಾರಿದ ಕೀರ್ತಿ ಜಗಜ್ಯೋತಿ ಬಸವೇಶ್ವರರಿಗೆ ಸಲ್ಲುತ್ತದೆ. ಶ್ರೇಷ್ಠ ವಚನಗಳ ಮೂಲಕ ಮಾನವ ಕುಲಕ್ಕೆ ದಾರಿ ತೋರಿದ ಕಾಯಕಯೋಗಿ, ಜಗಜ್ಯೋತಿ ಬಸವೇಶ್ವರರು. ಸಮ-ಸಮಾಜ ಏಳಿಗೆಗೆ ಶ್ರಮಿಸಿದ್ದಾರೆ. ಕವಿ, ತತ್ವಜ್ಞಾನಿ, ಸಮಾಜ ಸುಧಾರಕರು, ಶರಣರಲ್ಲಿ ಜಗಜ್ಯೋತಿ ಬಸವಣ್ಣನವರು ಅಗ್ರಗಣ್ಯರು ಎಂದರು.
ಧಾರ್ಮಿಕ ಸಹಿಷ್ಣತೆಯ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರಾಗಿದ್ದು , ಎಲ್ಲರನ್ನೂ ಒಗ್ಗೂಡಿಸಿಕೊಂಡು ರಾಜ್ಯಭಾರ ಮಾಡಿದ ಶಿವಾಜಿ ಮಹಾರಾಜರು ಸರ್ವಕಾಲಕ್ಕೂ ಒಬ್ಬ ಅಜರಾಮರ ನಾಯಕ, ಮರಾಠಾ ಸಮುದಾಯದವರು ಅಪ್ರತಿಮ ರಾಷ್ಟ್ರ ಭಕ್ತರು-ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಹಾಪುರುಷರ ಜಯಂತಿಯಂದು ಸಮಾಜ ಸೇವೆಯಲ್ಲಿ ಒಂದಾದ ರಕ್ತದಾನ ಸೇವೆ ಮಾಡುವುದರಿಂದ ಅರ್ಥಪೂರ್ಣ ಜಯಂತಿ ಆಗಲಿದೆ. ಒಳ್ಳೆಯ ಸಂದೇಶ ಸಾರಿದ ಮಹನೀಯರ ಆದರ್ಶವನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಕರೆ ಕೊಟ್ಟರು.
ಈ ವೇಳೆ 150ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಅನುಶ್ಕಾ ಬಂದಿ, ಮಾನವ ಸಂಪನ್ಮೂಲ ಮ್ಯಾನೇಜರ್ ಮಹೇಶ್ ಶೆಟ್ಟಿ, ಕಂಪನಿ ವೈದ್ಯಾಧಿಕಾರಿಯಾದ ಡಾ. ಜೋ ತ್ಸ್ನಾ ಎಂ, ಕೆ ಎಲ್ ಇ ರಕ್ತ ಬಂಡಾರದ ಮುಖ್ಯಸ್ಥರ ಎಸ್ ವಿ ವೀರಗಿ, ವೈದ್ಯಾಧಿಕಾರಿಗಳಾದ ಡಾ. ವಿಠ್ಠಲ್ ಮಾನೆ, ಬಸವನ ಬಳಗದ ಕಾರ್ಯದರ್ಶಿಯಾದ ಬಿ ಎಂ ಕುಲಕರ್ಣಿ, ಅಶೋಕ್ ಈಟಿ, ರವಿ ಮಲ್ಕನವರ, ಆರ್ ಆರ್ ಪಾಟೀಲ, ಈಶ್ವರ ಮಗದುಮ್ಮ ಹಾಗು ಬಳಗದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಸವರಾಜ್ ತಳವಾರ್ ನಿರೂಪಿಸಿದರು ಮತ್ತು ವಂದಿಸಿದರು.