ಡಾ.ಪ್ರಭಾಕರ ಕೋರೆಯವರು ಕಳೆದ 40 ವರ್ಷಗಳಿಂದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ, ಸಹಕಾರಿ, ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿತು.
ಈ ಸಂದರ್ಭದಲ್ಲಿ ಬೇಲಿಮಠದ ಪೂಜ್ಯರಾದ ಶಿವರುದ್ರ ಮಹಾಸ್ವಾಮೀಜಿ, ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಮಾನ್ಯ ಡಿ.ಕೆ.ಶಿವಕುಮಾರ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಮಾನ್ಯ ಈಶ್ವರ ಖಂಡ್ರೆ, ಬಸವ ಸಮಿತಿ ಅಧ್ಯಕ್ಷರಾದ ಡಾ.ಅರವಿಂದ ಜತ್ತಿಯವರು ಡಾ.ಕೋರೆಯವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಕೋರೆಯವರು ‘ಇಂದು ವಿಶ್ವದಲ್ಲೆಡೆ ಸಂಭ್ರಮದಿಂದ ಬಸವಣ್ಣವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಬಸವಣ್ಣನವರು ಈ ಜಗತ್ತು ಕಂಡಂತಹ ಅಪ್ರತಿಮ ದಾರ್ಶನಿಕರು, ಸಮಾಜ ಸುಧಾರಕರು ಮಾತ್ರವಲ್ಲ ಹೊಸ ಸಮಾಜದ ನಿರ್ಮಾಪಕರು. 850 ವರ್ಷಗಳ ಹಿಂದೆ ಅವರು ಕೈಗೊಂಡ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಶೈಕ್ಷಣಿಕ ಕ್ರಾಂತಿಯು ಇಂದಿಗೂ ಸಹ ಇಡೀ ಜಗತ್ತಿಗೆ ಆದರ್ಶಪ್ರಾಯವಾಗಿದೆ. ಬಸವಣ್ಣನವರ ತತ್ವ ಸಾಹಿತ್ಯ ಎಲ್ಲರಿಗೂ ಎಲ್ಲಾ ಧರ್ಮದವರಿಗೂ ಬೇಕು. ನಿಜವಾದ ಅರ್ಥದಲ್ಲಿ ಬಸವಣ್ಣನವರು ನಮ್ಮ “ಸಾಂಸ್ಕøತಿಕ ನಾಯಕ” ಆಗಿದ್ದಾರೆ. ನಮ್ಮ ಸಂಸ್ಕøತಿ ಉಳಿದರೆ ನಾವು ಉಳಿಯುತ್ತೇವೆ. ಹೀಗಾಗಿ ಬಸವ ಜಯಂತಿಯ ಈ ದಿನ ನಮ್ಮ ಸಾಂಸ್ಕøತಿಕ ನಾಯಕರಾದ ಬಸವಣ್ಣವರ ಬದುಕಿನ ಆದರ್ಶಗಳನ್ನು ಪಾಲಿಸುವ ಸಂಕಲ್ಪ ನಮ್ಮದಾಗಬೇಕು. “ಕಾಯಕವೇ ಕೈಲಾಸ” ಅಂತಹ ಕಾಯಕದ ಹೆಸರಿನ ಪ್ರಶಸ್ತಿಯನ್ನು ನೀಡಿರುವುದು ನನಗೆ ಹಾಗೂ ನಮ್ಮ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಗೆ ನೀಡಿದ ಗೌರವವೆಂದು ನಾನು ಭಾವಿಸುತ್ತೇನೆ. ಇಂದು ಶ್ರೀ ಅರವಿಂದ ಜತ್ತಿಯವರ ಸಾರಥ್ಯದಲ್ಲಿ ಬಸವ ಸಮಿತಿಯು ಜಗತ್ತಿನ ಹಲವಾರು ದೇಶಗಳಲ್ಲಿ ಬಸವಣ್ಣನವರ ಸಂದೇಶವನ್ನು ಮನೆ ಮನೆಗಳಿಗೆ ಮುಟ್ಟಿಸುವ ಮಹತ್ತರ ಕೆಲಸ ಮಾಡುತ್ತಿದೆ. ಅದಕ್ಕಾಗಿ ಅರವಿಂದ ಜತ್ತಿಯವರಿಗೆ ವೈಯಕ್ತಿಕವಾಗಿ ಹಾಗೂ ಈ ನಾಡಿನ ಜನತೆಯ ಪರವಾಗಿ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅಂತೆಯೆ ಬಸವಣ್ಣನವರ ದಿವ್ಯ ಸಂದೇಶವನ್ನು ಅರಿತು ಮುನ್ನಡೆದು ಬಸವ ಜಯಂತಿಯನ್ನು ಅರ್ಥಪೂರ್ಣವಾಗಿಸೋಣವೆಂದು ಎಲ್ಲರಿಗೂ ಶುಭಕೋರಿದರು.