23/12/2024
IMG-20240507-WA0014

ಬೆಳಗಾವಿ:ಕುಂದಾನಗರಿ ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಮತ ಚಲಾಯಿಸಿದರು. ತಮ್ಮ ಮತದಾನದ ಹಕ್ಕು ಬಂದ ಮೇಲೆ ತವರು ಕ್ಷೇತ್ರ ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ್ ಮತ ಹಾಕುತ್ತಿದ್ದರು‌. ಆದರೆ, ಬೆಳಗಾವಿ ಅಭ್ಯರ್ಥಿಯಾದ ಬಳಿಕ‌ ತಮ್ಮ ಮತವನ್ನು ಹುಬ್ಬಳ್ಳಿಗೆ ವರ್ಗಾಯಿಸಿಕೊಂಡಿದ್ದು ವಿಶೇಷವಾಗಿತ್ತು.

ಸೊಸೆ ಶ್ರದ್ಧಾ ಶೆಟ್ಟರ್, ಸಂಸದೆ ಮಂಗಲ ಅಂಗಡಿ ಅವರ ಜೊತೆಗೆ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಸಂಖ್ಯೆ 26ರ ಮತಗಟ್ಟೆಗೆ ಆಗಮಿಸಿ ಜಗದೀಶ ಶೆಟ್ಟರ್ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತಗಟ್ಟೆಯಿಂದ ಹೊರಬಂದು ವಿಜಯದ ಸಂಕೇತ ತೋರಿಸಿದರು‌.

ಮತ ಹಾಕಿದ ಬಳಿಕ‌ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಗದೀಶ ಶೆಟ್ಟರ್, ದೊಡ್ಡ ಪ್ರಮಾಣದಲ್ಲಿ ಜನರು ಆಗಮಿಸಿ ಮತ ಚಲಾಯಿಸುತ್ತಿದ್ದು, ಮತದಾನದ ಮಹತ್ವದ ಬಗ್ಗೆ ಜನರಿಗೆ ಸಾಕಷ್ಟು ಜಾಗೃತಿ ಮೂಡಿದೆ. ಇನ್ನು ಕಳೆದ ಎರಡು ದಿನಗಳಿಂದ ಹಣ ಹಂಚುವುದು ಬಿಟ್ಟರೆ, ಮತದಾರರನ್ನು ಮನವಲಿಸುವ ಕೆಲಸ ಮಾಡಲಿಲ್ಲ. ಹಣದ ಹಂಚಿಕೆ ಮೇಲೆಯೇ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಆದರೆ, ಜನ ಅವರನ್ನು ತಿರಸ್ಕರಿಸಿ, ಸರಿಯಾದ ಉತ್ತರ ಕೊಡುತ್ತಾರೆ. ಹಣ ಮತ್ತು ಅಧಿಕಾರದ ಬಲದ ಮೇಲೆ ಪ್ರಜಾತಂತ್ರ ವ್ಯವಸ್ಥೆ ನಡೆಯುವುದಿಲ್ಲ ಎಂದು ತಿರುಗೇಟು ಕೊಟ್ಟರು.

ನಿಮ್ಮ ಸಾಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸಬೇಕಿತ್ತು. ಆದರೆ, ಸೋಲಿನ ಭೀತಿ ಮತ್ತು ಹತಾಸೆಯಿಂದ ಹಣ ಹಂಚಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಒಂದು ದೂರು ಕೊಟ್ಟಿದ್ದೇವೆ. ಸಂಬಂಧಿಸಿದ ಅಧಿಕಾರಿಗಳ ಗಂಭೀರ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಜಗದೀಶ ಶೆಟ್ಟರ್ ಆಗ್ರಹಿಸಿದರು‌.

ಕಳೆದ ಒಂದು ತಿಂಗಳಿಂದ ಬೆಳಗಾವಿಯಲ್ಲಿ ಪ್ರಚಾರ ಮಾಡುತ್ತಿದ್ದೇನೆ. ನಮಗೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚಾಗುತ್ತದೆ. ಅಲ್ಲದೇ ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು ಎನ್ನುವ ಜನರ ಇಚ್ಛೆಯಿಂದ ಮತ್ತಷ್ಟು ಜನ ಸ್ಫೂರ್ತಿಗೊಳ್ಳುತ್ತಿದ್ದಾರೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಜನ ಆಗಮಿಸುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟ ಜೋರಾಗಿದೆ. ಹಾಗಾಗಿ, ಬೇಗ ಬೇಗನೇ ಆಗಮಿಸಿ ಮತ ಚಲಾಯಿಸುವಂತೆ ಜಗದೀಶ ಶೆಟ್ಟರ್ ಕೋರಿದರು.

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆಶಿ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಯಿಸಿದ ಜಗದೀಶ ಶೆಟ್ಟರ್, ಆ ರೀತಿ ಆರೋಪ ಕೇಳಿ ಬಂದಿದೆ. ಆದರೆ, ಡಿಕೆಶಿ ಅದನ್ನು ಅಲ್ಲಗಳೆದಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಡಿಕೆಶಿ ಹೆಸರು ಮೊದಲಿನಿಂದಲೂ ಕೇಳಿ ಬರುತ್ತಿದೆ. ಹಾಗಾಗಿ, ಎಸ್ಐಟಿ ತನಿಖೆಯಿಂದ ನ್ಯಾಯ ಸಿಗುವುದಿಲ್ಲ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಹಾಗಾಗಿ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಈ ಚುನಾವಣೆಗೂ ಪ್ರಜ್ವಲ್ ರೇವಣ್ಣ ಪ್ರಕರಣ ಮತ್ತು ಡಿಕೆಶಿ ಆಡಿಯೋ ವೈರಲ್ ವಿಚಾರಗಳಿಗೂ ಯಾವುದೇ ರೀತಿ ಸಂಬಂಧವಿಲ್ಲ, ಪರಿಣಾಮ ಬೀರುವುದಿಲ್ಲ ಎಂದು ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದರು.

 

error: Content is protected !!