ಬೆಳಗಾವಿ-೦೭: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ವಿಜಯನಗರದ ಸರಕಾರಿ ಮರಾಠಿ ಪ್ರಾಥಮಿಕ ಪಾಠ ಶಾಲೆಯ ಬೂತ್ ನಂಬರ್ 61ರಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.
ಸಚಿವರ ಪುತ್ರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್, ಸೊಸೆ ಡಾ.ಹಿತಾ, ಸಚಿವರ ತಾಯಿ ಗಿರಿಜಾ ಹಟ್ಟಿಹೊಳಿ, ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರ ಪತ್ನಿ ಜೊತೆಗೂಡಿ ಮತದಾನ ಮಾಡಿದರು.
ಬಳಿಕ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಭಾರತ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ ಮತದಾನದ ದಿನ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಉತ್ತಮ ಜನ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದರು.
ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಪರ ಉತ್ತಮ ಅಲೆಯಿದೆ. ಕ್ಷೇತ್ರದಲ್ಲಿ ಜಯ ದಾಖಲಿಸುವ ಮೂಲಕ ಕಾಂಗ್ರೆಸ್ ಹೊಸ ಇತಿಹಾಸ ಸೃಷ್ಟಿಸಲಿದೆ. ನನ್ನ ಸಹೋದರ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಪಡೆಯೇ ನನ್ನ ದೊಡ್ಡ ಶಕ್ತಿ. ಅರಭಾವಿ, ಗೋಕಾಕ್, ಬೆಳಗಾವಿ ಉತ್ತರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮುನ್ನಡೆಗಳಿಸಲಿದೆ. ಅಜ್ಜಯ್ಯನವರ (ನೊಣವಿನಕೆರೆಯ ಶ್ರೀ ಕಾಡಾಸಿದ್ದೇಶ್ವರದ ಸ್ವಾಮೀಜಿಗಳು) ಆಶೀರ್ವಾದವಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕುಟುಂಬ ಸಮೇತ ಬಂದು ಮತಹಾಕಿರುವೆ. ಪ್ರತಿಯೊಬ್ಬರೂ ಬಂದು ಮತ ಹಾಕಬೇಕು. ಈ ಬಾರಿ ನೂರಕ್ಕೆ ನೂರರಷ್ಟು ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ದಾಖಲಿಸಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ. ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ. ಚಿಕ್ಕೋಡಿ, ಬೆಳಗಾವಿ ಎರಡು ಕ್ಷೇತ್ರ ಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯ ದಾಖಲಿಸಲಿದ್ದು, ಬೆಳಗಾವಿ ಸ್ವಾಭಿಮಾನಕ್ಕೆ ಗೆಲುವು ಸಿಗಲಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.