ಮತಗಟ್ಟೆಯತ್ತ ಹೆಜ್ಜೆ ಹಾಕಿದ ಚುನಾವಣಾ ಸಿಬ್ಬಂದಿ
ಕಲಬುರಗಿ-೦೬- ಗುಲಬರ್ಗಾ ಲೋಕಸಭಾ (ಪ.ಜಾ) ಕ್ಷೇತ್ರಕ್ಕೆ ಮೇ 7 (ಮಂಗಳವಾರ) ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಸೋಮವಾರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ 8 ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಸೆಂಟರ್‍ನಿಂದ ಇ.ಇ.ಎಂ. ಮತಯಂತ್ರ ಹಾಗೂ ಇನ್ನಿತ್ತರ ಸಾಮಗ್ರಿ ಪಡೆದ ಚುನಾವಣಾ ಸಿಬ್ಬಂದಿ ಮತಗಟ್ಟೆಯತ್ತ ಹೆಜ್ಜೆ ಹಾಕಿದರು.
ಸೋಮವಾರ ಬೆಳಿಗ್ಗೆಯಿಂದಲೆ ಮಸ್ಟರಿಂಗ್ ಸೆಂಟರ್‍ನಲ್ಲಿ ಚುನಾವಣಾ ಸಿಬ್ಬಂದಿ ಹಾಜರಿದ್ದು ತಮ್ಮ ಮತಗಟ್ಟೆಗೆ ಇ.ವಿ.ಎಂ. ಯಂತ್ರ, ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್, ವಿ.ವಿ.ಪ್ಯಾಟ್ ಸೇರಿದಂತೆ ಇನ್ನಿತರ ಸಾಮಗ್ರಿ ಸಹಾಯಕ ಚುನಾವಣಾಧಿಕಾರಿಗಳಿಂದ ಪಡೆಯುವ ದೃಶ್ಯ ಸಾಮಾನ್ಯವಾಗಿತ್ತು.
ಕ್ಷೇತ್ರದ ವ್ಯಾಪ್ತಿಗೆ ಬರುವ ಅಫಜಲಪೂರ, ಜೇವರ್ಗಿ, ಗುರುಮಠಕಲ್, ಚಿತ್ತಾಪೂರ, ಸೇಡಂ, ಗುಲಬರ್ಗಾ ಗ್ರಾಮೀಣ, ಗುಲಬರ್ಗಾ ದಕ್ಷಿಣ ಹಾಗೂ ಗುಲಬರ್ಗಾ ಉತ್ತರ ಹೀಗೆ ಪ್ರತಿ ಕ್ಷೇತ್ರದ ಮಸ್ಟರಿಂಗ್ ಕೇಂದ್ರ ಸಿಬ್ಬಂದಿಯಿಂದ ತುಂಬಿ ಹೋಗಿತ್ತು.
ಬಿಸಿಲಿನ ತಾಪಮಾನ ಹೆಚ್ಚಿರುವ ಕಾರಣ ಪೋಲಿಂಗ್ ಸಿಬ್ಬಂದಿಗಳ ಆರೋಗ್ಯ ಬಗ್ಗೆಯೂ ಚುನಾವಣಾ ಆಯೋಗ ಕಾಳಜಿ ವಹಿಸಿದ್ದು, ಓ.ಆರ್.ಎಸ್. ಪಾಕಿಟ್, ಪ್ರಥಮ ಚಿಕಿತ್ಸಾ ಕಿಟ್ ಸಹ ಇದೇ ಸಂದರ್ಭದಲ್ಲಿ ನೀಡಲಾಯಿತು. ಪೋಲಿಂಗ್ ಸಿಬ್ಬಂದಿಗೆ ಮಸ್ಟ್ರಿಂಗ್ ಸೆಂಟರ್ ನಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.
872 ವಾಹನಗಳ ವ್ಯವಸ್ಥೆ:
ಚುನಾವಣಾ ಸಿಬ್ಬಂದಿ ಮತಗಟ್ಟೆಗೆ ತೆರಳಲು ಅನುಕೂಲವಾಗುವಂತೆ 255 ಕೆ.ಕೆ.ಆರ್.ಟಿ.ಸಿ. ಸಾರಿಗೆ ಬಸ್, 594 ಕ್ರೂಸರ್, 23 ಮ್ಯಾಕ್ಸಿ ಕ್ಯಾಬ್-ಮಿನಿ ಬಸ್ ಸೇರಿದಂತೆ ಒಟ್ಟು 872 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಸದರಿ ವಾಹನದಲ್ಲಿಯೆ ಸಿಬ್ಬಂದಿ ಮತಗಟ್ಟೆಯತ್ತ ಹೆಜ್ಜೆ ಹಾಕಿದರು.
ಮಸ್ಟ್ರಿಂಗ್ ಕೇಂದ್ರಕ್ಕೆ ಡಿ.ಸಿ.ಭೇಟಿ,ಪರಿಶೀಲನೆ:
ಮಸ್ಟರಿಂಗ್ ಕಾರ್ಯ ಸುಸೂತ್ರವಾಗಿ ನಡೆಯುತ್ತಿರುವ ಬಗ್ಗೆ ಖುದ್ದಾಗಿ ಖಾತ್ರಿಪಡಿಸಿಕೊಳ್ಳಲು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುಲಬರ್ಗಾ ದಕ್ಷಿಣ ಕ್ಷೇತ್ರದ ಎ.ಸಿ.ಟಿ. ಇಂಟರ್‍ನ್ಯಾಷನಲ್ ಶಾಲೆ, ಗುಲಬರ್ಗಾ ಉತ್ತರ ಕೇತ್ರದ ಅಪ್ಪಾ ಕಿಡ್ಸ್ ವರ್ಲ್ಡ್ ಶಾಲೆ, ಗುಲಬರ್ಗಾ ಗ್ರಾಮೀಣ ಕ್ಷೇತ್ರದ ಕಲಬುರಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಅಫಜಲಪೂರ ಕ್ಷೇತ್ರದ ಅಫಜಲಪೂರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.