ಬೆಳಗಾವಿ-೦೬:ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೂರೊಂದು ಕನಸು ಕಟ್ಟಿಕೊಂಡಿದ್ದೇನೆ. ಜಿಲ್ಲೆಯ ಬಗ್ಗೆ ದೂರದೃಷ್ಟಿ ಹೊಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ನನ್ನ ತಾಯಿ ಹಾಗೂ ಸಚಿವರು ಆದ ಲಕ್ಷ್ಮೀ ಹೆಬ್ಬಾಳಕರ್ ಮತ್ತು ತಜ್ಞರ ಮಾರ್ಗದರ್ಶನದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಈ ಚುನಾವಣೆ ಜಿಲ್ಲೆಯ ಅಸ್ಮಿತೆ ಹಾಗೂ ಸ್ವಾಭಿಮಾನದ ವಿಷಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಹೆಚ್ಚು ಅನುದಾನ ತರಲು ಅನುಕೂಲ ಆಗಲಿದೆ. ನಮ್ಮ ಜಿಲ್ಲೆ ಕರ್ನಾಟಕದ ಎರಡನೇ ರಾಜಧಾನಿ ಎನಿಸಿಕೊಂಡರೂ ನಾವು ನಿರೀಕ್ಷಿಸಿದಷ್ಟು ಅಭಿವೃದ್ಧಿಯಾಗಿಲ್ಲ. ಜಿಲ್ಲೆಗೆ ಆಗಬೇಕಿರುವ ಕೆಲಸಗಳ ಕುರಿತು ನನಗೆ ಅರಿವಿದ್ದು, ಅಭಿವೃದ್ಧಿಯೇ ನನ್ನ ಮಂತ್ರವಾಗಲಿದೆ ಎಂದು ಮೃಣಾಲ್ ಹೆಬ್ಬಾಳಕರ್ ತಿಳಿಸಿದ್ದಾರೆ.
ಕೇಂದ್ರದಲ್ಲಿ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡುವ ಹಂಬಲ ಹೊಂದಿದ್ದೇನೆ. ಕರ್ನಾಟಕಕ್ಕೆ ಅನ್ಯಾಯವಾದರೆ, ಇದನ್ನು ಕಟ್ಟುವಾಗಿ ವಿರೋಧಿಸುವೆ. ಕರ್ನಾಟಕಕ್ಕೆ, ಬೆಳಗಾವಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ನ್ಯಾಯ ದೊರಕಿಸಿ ಕೊಡುವೆ ಎಂದು ಹೇಳಿದ್ದಾರೆ.
ವರ್ಷದ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಂದ ಜಗದೀಶ್ ಶೆಟ್ಟರ್ ಅವರನ್ನು ಚೆನ್ನಾಗಿಯೇ ನೋಡಿಕೊಳ್ಳಲಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಸೋತರೂ ಬಳಿಕ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಆದರೆ, ನಿಷ್ಠೆ ಬದಲಿಸಿದ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗಿ ಮೋದಿಯವರನ್ನ ಪ್ರಧಾನಿ ಮಾಡಬೇಕು ಅಂತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಬಿಜೆಪಿಯವರನ್ನು ಬಯ್ಯುವುದು, ಬಿಜೆಪಿಗೆ ಬಂದಾಗ ಕಾಂಗ್ರೆಸ್ ನವರನ್ನು ಬಯ್ಯುವುದು… ಈ ಹಿಂದೆ ಜಿಲ್ಲೆಗೆ ಸಾಕಷ್ಟು ಅನ್ಯಾಯ ಮಾಡಿರುವ ಇಂಥ ಸಮಯ ಸಾಧಕ ರಾಜಕಾರಣಿ ನಮ್ಮ ಜಿಲ್ಲೆಗೆ ಬೇಕಾ? ಎಂದು ಮೃಣಾಲ್ ಹೆಬ್ಬಾಳಕರ್ ಪ್ರಶ್ನಿಸಿದ್ದಾರೆ.
ಜಿಲ್ಲೆಯ ಅಭಿವೃದ್ಧಿ ಕನಸು ಹೊಂದಿರುವ ನನ್ನನ್ನು ಬೆಂಬಲಿಸಿ, ಜಿಲ್ಲೆಯ ಅಭಿವೃದ್ಧಿಗೆ ಕ್ಷೇತ್ರದ ಮತದಾರರು ಪಕ್ಷಾತೀತವಾಗಿ ಕೈಜೋಡಿಸಬೇಕು. ನಿಮ್ಮ ಮನೆ ಮಗನಾಗಿ ಹಗಲಿರುಳು ದುಡಿಯುವೆ ಎಂದು ಮೃಣಾಲ್ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.