ಬೆಳಗಾವಿ-೦೪: ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಎನ್‌ಸಿಪಿ, ಶಿವಸೇನೆ (ಯುಬಿಟಿ) ಎನ್‌ಎಸ್‌ಯುಐ ಸೇರಿದಂತೆ ವಿವಿಧ ದಲಿತ ಸಂಘಟನೆಗಳು ಬೆಂಬಲ ನೀಡಿದ್ದರಿಂದ ಕೈ ಪಕ್ಷಕ್ಕೆ ಇನ್ನಷ್ಟು ಶಕ್ತಿ ಸಿಕ್ಕಂತಾಗಿದೆ.
ಸದ್ಯ ಚಿಕ್ಕೋಡಿಯಲ್ಲಿ ಚುನಾವಣಾ ಕಣ ಸಾಕಷ್ಟು ರಂಗೇರಿದ್ದು, ವಿವಿಧ ಗ್ರಾಮಗಳಲ್ಲಿ ಕಟ್ಟಿಯ ಮೇಲೆ ಕುಳಿತ ಮತದಾರರು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ “ಹಳೆ ಮುಖ ಸಾಕು ಹೊಸ ಮುಖ ಬೇಕು” ಎಂಬ ಮಾತುಗಳನ್ನಾಡುತ್ತಿದ್ದಾರೆ. ಸದ್ಯ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿಗೆ ಶರದ ಪವಾರ ಅವರ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಬೆಂಬಲ ಸೂಚಿಸಿದ್ದು, ಕೈ ಗೆ ಇನ್ನಷ್ಟು ಬಲ ಬಂದಂತಾಗಿದೆ.
ಗಡಿಭಾಗದಲ್ಲಿ ಬಲ ಹೊಂದಿದ ಎನ್‌ಸಿಪಿ: ಗಡಿಭಾಗದಲ್ಲಿ ಎನ್‌ಸಿಪಿ ತನ್ನ ಪ್ರಾಬಲ್ಯ ಹೊಂದಿದ್ದು, ಮಹಾರಾಷ್ಟ್ರ ನಾಯಕರ ಪ್ರಭಾವವೂ ಇಲ್ಲಿ ಕೆಲಸ ಮಾಡುತ್ತ ಬಂದಿದೆ. ಹಾಗಾಗಿ, ಕಾಂಗ್ರೆಸ್‌ಗೆ ಎನ್‌ಸಿಪಿ ಬೆಂಬಲ ನೀಡಿರುವುದು ಆನೆ ಬಲಬಂದಂತಾಗಿದೆ. ಸ್ಥಳೀಯ ಎನ್‌ಸಿಪಿ ಮುಖ್ಯಸ್ಥ ಶರದ ಪವಾರ್ ಸ್ವತಃ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಬೆಂಬಲ ನೀಡಿರುವುದು ಹಾಲಿ ಎಂಪಿ ಅಣ್ಣಾಸಾಹೇಬ್ ಜೊಲ್ಲೆ ಅವರ ನಿದ್ದೆಗೆಡೆಸುವಂತೆ ಮಾಡಿದೆ.
ಜೊಲ್ಲೆಗೆ ಜೊತೆಯಾಗದ ಬಿಜೆಪಿ: ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ, ಇದೇ ಕ್ಷೇತ್ರದಿಂದ ಒಂದು ಬಾರಿ ಸಂಸದರೂ ಆಗಿದ್ದ ರಮೇಶ ಕತ್ತಿ ಪ್ರಭಾವಿ ರಾಜಕಾರಣಿ. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರದ್ದೂ ಈ ಕ್ಷೇತ್ರದಲ್ಲಿ ಪ್ರಭಾವವಿದೆ. ಆದರೆ, ಇವರಿಬ್ಬರೂ ಜೊಲ್ಲೆ ಪರ ಪ್ರಚಾರಕ್ಕೆ ಬಂದಿಲ್ಲ. ಅದಾಗ್ಯೂ ಬಿಜೆಪಿಯವರಾದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೂಡ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲದ್ದರಿಂದ ಜೊಲ್ಲೆಗೆ ಅಬ್ಬರದ ಪ್ರಚಾರ ನಡೆಸಲು ಸಂಕಷ್ಟ ಎದುರಾಗುತ್ತಿದೆ.
ದಲಿತರ ಬಗ್ಗೆ ಕಲ್ಲೋಳಿಕರಗೆ ಈಗೇಕೆ ಕಾಳಜಿ: ಸಂವಿಧಾನ ತಿದ್ದುಪಡಿಗೆ ಹುನ್ನಾರ ನಡೆಸಿರುವ ಭಾರತೀಯ ಜನತಾ ಪಾರ್ಟಿಯೊಂದಿಗೆ ಕೈಜೋಡಿಸಿರುವ ಚಿಕ್ಕೋಡಿ ಪಕ್ಷೇತರ ಅಭ್ಯರ್ಥಿ, ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ದಲಿತರೊಂದಿಗೆ ಚೆಲ್ಲಾಟ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿವೆ. ಈವರೆಗೂ ದಲಿತರ ಬಗ್ಗೆ ಕಾಳಜಿ ತೋರದ ಕಲ್ಲೋಳಿಕರ ಅವರಿಗೆ ಇದೀಗ ದಿಢೀರನೇ ದಲಿತರ ಬಗ್ಗೆ ಜ್ಞಾನೋದಯವಾಗಿದೆ. ತಮ್ಮ ಅಧಿಕಾರವಧಿಯಲ್ಲಿ ದಲಿತರ ಬಗ್ಗೆ ಒಂದಿಷ್ಟು ಕಾಳಜಿ ವಹಿಸದ ಕಲ್ಲೋಳಿಕರ ಈಗ ದಲಿತರ ಬಗ್ಗೆ ಮೊಸಳೆಕಣ್ಣೀರು ಹಾಕುತ್ತಿದ್ದಾರೆ. ಬಿಜೆಪಿ ಮೊದಲಿನಿಂದಲು ದಲಿತ ವಿರೋಧಿ, ಡಾ.ಬಿ.ಆರ್.ಅಂಬೇಡ್ಕರ ಅವರ ಬರೆದ ಸಂವಿಧಾನವನ್ನೇ ಬದಲು ಮಾಡಲು ಹೊರಟಿದೆ. ಮೀಸಲಾತಿಯನ್ನು ರದ್ದುಪಡಿಸುವ ಹುನ್ನಾರ ಮಾಡುತ್ತ ಬಂದಿದೆ. ಇಂತಹವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗಬೇಕೆಂಬ ದುರುದ್ದೇಶದಿಂದ ದಲಿತ ಮತಗಳನ್ನು ಒಡೆಯಲು ಶಂಭು ಕಲ್ಲೋಳಿಕರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ದಲಿತ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂಬ ಆರೋಪಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಇಷ್ಟ ದಿನ ಎಲ್ಲಿದ್ದರು ಶಂಭು ಕಲ್ಲೋಳಿಕರ? ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಶಂಭು ಕಲ್ಲೋಳಿಕರ ನಿವೃತ್ತ ಬಳಿಕ ತಮ್ಮ ಊರಿನತ್ತ ಮುಖ ಮಾಡಿದ್ದಾರೆ. ಈವರೆಗೂ ಕ್ಷೇತ್ರದ ಬಗ್ಗೆ ಯಾಗಲಿ, ತಮ್ಮ ಊರಿನ ಬಗ್ಗೆ ಯಾಗಲಿ ಕಾಳಜಿ ಇಲ್ಲದ ಇರುವ ಈಗ ದಿಢೀರನೇ ದಲಿತರ ಉದ್ದಾರದ ಬಗ್ಗೆ ಮಾತನಾಡುತ್ತಿದ್ದಾರೆ. ಅಧಿಕಾರ ಅನುಭವಿಸದ ವೇಳೆ ಯಾರಿಗಾದರೂ ಸಹಾಯ ಮಾಡಿದ್ದಾರೆಯೇ?ಈಗ ನಿವೃತ್ತಿಯಾದ ಬಳಿಕ ದಲಿತರ ಬಗ್ಗೆ ಜಪ ಮಾಡುತ್ತಿದ್ದಾರೆ. ಇದನ್ನು ನೋಡಿದರೆ , ಇದರಲ್ಲಿ ರಾಜಕೀಯ ಹುನ್ನಾರ ನಡೆದಿರುವ ಸ್ಪಷ್ಟವಾಗುತ್ತದೆ. ಹಾಗಾಗಿ, ಚುನಾವಣೆಯಲ್ಲಿ ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ವಿವಿಧ ದಲಿತಪರ ಸಂಘಟನೆಗಳು ಮನವಿ ಮಾಡಿವೆ. ಅಲ್ಲದೇ ಹುಕ್ಕೇರಿ ಅವುಜೀಕರ ಧ್ಯಾನ ಯೋಗಾಶ್ರಮದಲ್ಲಿ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಮತ್ತವರ ನೂರಾರು ಕಾರ್ಯಕರ್ತರು ಏಕಾಏಕಿಯಾಗಿ ನುಗ್ಗಿ ಧಾಂದಲೆ ನಡೆಸಿದಲ್ಲದೇ ಸ್ವಾಮೀಜಿ ಅವರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿರುವದರಿಂದ ಮಠದ ಭಕ್ತರಿಗೆ ಸಾಕಷ್ಟು ನೋವುಂಟಾಗಿದೆ. ಇದರಿಂದ ಪ್ರಜ್ಞಾವಂತ ಮತದಾರರು ಎಲ್ಲವನ್ನೂ ಸೂಕ್ಷಮವಾಗಿ ಗಮನಿಸುತ್ತಿದ್ದು, ಪಕ್ಷೇತರ ಅಭ್ಯರ್ಥಿ ಕಲ್ಲೋಳಕರ ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ದೃಢ ನಿರ್ಧಾರ ಮಾಡಿದ್ದಾರೆ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.
ಜಾರಕಿಹೊಳಿ ಇಟ್ಸ್ ಓಕೆ: ಚಿಕ್ಕೋಡಿ ಲೋಕಸಭಾ ಅಖಾಡಕ್ಕೆ ಸ್ವತಃ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಕಣಕ್ಕೆ ಇಳಿದಿರುವದರಿಂದ ಇಡಿ ಕ್ಷೇತ್ರ ಅಭಿವೃದ್ದಿ ಆಗುವದರಲ್ಲಿ ಎರಡು ಮಾತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಮ್ಮೆ ಗೆದ್ದು ಮತ್ತೋಮ್ಮೆ ಚುನಾವಣಾ ಕಣಕ್ಕೆ ಇಳಿದ ಜೋಲ್ಲೆ ಅವರು ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬ ಪ್ರಶ್ನೆ ಎಲ್ಲಡೆ ಹರಿದಾಡುತ್ತಿದ್ದು, ಮತದಾರರು ಮಾತ್ರ ಜೊಲ್ಲೆ ಬದಲು ಹೊಸ ಮುಖವಾದ ಪ್ರಿಯಂಕಾ ಜಾರಕಿಹೊಳಿಗೆ ಮಣೆ ಹಾಕಲು ಮುಂದಾಗಿದ್ದಾರೆ ಎನ್ನಾಲಾಗಿದೆ. ಅದರಲ್ಲೂ ಮುಖ್ಯವಾಗಿ ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿಆಗಿರುವ ಪ್ರಿಯಂಕಾ ಎಂಬಿಎ ಪದವೀಧರೆಯಾಗಿದ್ದು ತಂದೆಯ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಯಮಕನಮರಡಿ ಕ್ಷೇತ್ರದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರಿಯಂಕಾ ಅವರು ವಿವಿಧ ಮಹಿಳಾ ಸಂಘ- ಸಂಸ್ಥೆಗಳೊಂದಿಗೆ ಒಟನಾಟ ಹೊಂದಿದ್ದು, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಇವರು ಕೂಡ ಸಾಕಷ್ಟು ಜನಪ್ರಿಯತೆ ಹೊಂದಿರುವದರಿಂದ ಮತದಾರರು ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿಗೆ ಇಟ್ಸ್ ಓಕೆ ಎನ್ನುತ್ತಿದ್ದಾರೆ.
ಜೊಲ್ಲೆ ನಾಟ್ ಓಕೆ: ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕ್ಷೇತ್ರದಿಂದ ದೂರ ಉಳಿದಿದ್ದು, ಬರಿ ನಿಪ್ಪಾಣಿಗೆ ಮಾತ್ರ ಸೀಮಿತ ಆಗಿದ್ದಾರೆ ಎನ್ನುವ ಆರೋಪವಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು ಮೊದಲಾಗಿ ಮೂಲಸೌಕರ್ಯಗಳ ಅಭಿವೃದ್ಧಿ ಆಗಿದ್ದರೂ ಮಹತ್ವದ ರೈಲ್ವೆ ಮಾರ್ಗಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು, ಕೈಗಾರಿಕೆಗಳ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿಆಗದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಅಲ್ಲದೇ ಬೆಳಗಾವಿ ಜಿಲ್ಲೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದ್ದರೂ ಬಹುತೇಕ ಕೈಗಾರಿಕೆಗಳು ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಣಗಲಾ ಹೊರತುಪಡಿಸಿ ಪ್ರಮುಖ ಕೈಗಾರಿಕಾ ವಸಾಹತು ಇಲ್ಲ. ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗಗಳ ಸಂಪರ್ಕವಿದ್ದು ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ ಅವಕಾಶಗಳು ಹೇರಳವಾಗಿದ್ದರೂ ಸಂಸದರು ಸ್ಪಂದಿಸುತ್ತಿಲ್ಲಎಂಬ ಆರೋಪವಿದೆ. ಅಲ್ಲದೇ ಜನರ ಕೈಗೆ ಅಷ್ಟು ಸುಭವಾಗಿ ಚಿಕ್ಕೋಡಿ ಸಂಸದರು ಸಿಗಲ್ಲ ಎಂಬ ಆರೋಪ ಅಣ್ಣಾಸಾಹೇಬ್ ಜೊಲ್ಲೆ ಮೇಲೇ ಕೇಳಿ ಬರುತ್ತಿರುವದರಿಂದ ಮತದಾರರು ಮಾತ್ರ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ನಾಟ್ ಓಕೆ ಎನ್ನುತ್ತಿದ್ದಾರೆ. ಒಟ್ಟಾರೆಯಾಗಿ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಕೈ ಪಕ್ಷದ ಅಬ್ಬರ ಪ್ರಚಾರಕ್ಕೆ ಮುದುಡಿದ ಕಮಲಿಗೆ ನೀರು ಸಿಂಪರಿಸುವರ್ಯಾರು ಎಂಬ ಪ್ರಶ್ನೆ ಎಲ್ಲಡೆ ಕೇಳಿ ಬರುತ್ತಿದೆ.