23/12/2024
IMG-20240430-WA0005

ಗೋಕಾಕ್-೩೦: ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸರಣಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಕೊಟ್ಟ ಭರವಸೆಗಳನ್ನು ಈಡೇರಿಸದ ಮೋದಿ, ಇದೀಗ ಚುನಾವಣೆ ವೇಳೆ ಹೊಸ ಹೊಸ ಸುಳ್ಳುಗಳನ್ನು‌ ಸೃಷ್ಟಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಆರೋಪಗಳ ಸುರಿಮಳೆಗೈದರು.

ಗೋಕಾಕ್ ನ ವಾಲ್ಮೀಕಿ ಮೈದಾನದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಪರ ಚುನಾವಣಾ ಪ್ರಚಾರಾರ್ಥ ನಡೆದ ಪ್ರಜಾಧ್ವನಿ-2 ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಈ ಚುನಾವಣೆಯಲ್ಲಿ ನೀವು ಕೊಡುವ ತೀರ್ಪು, ದೇಶದ ಭವಿಷ್ಯವನ್ನು ಬದಲಿಸುವ ತೀರ್ಪು.‌ ಕೇಂದ್ರ ಕೊಟ್ಟ ಭರವಸೆಗಳಲ್ಲಿ ಎಷ್ಟು ಈಡೇರಿವೆ? ದೇಶದ ಜನರಿಗೆ ಮೋದಿ ಸರಣಿ ಸುಳ್ಳು ಗಳನ್ನು ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

2013ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ಜನಸಾಮಾನ್ಯರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡಿದೆವು. ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಆಹಾರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಆದರೆ, ಇದರ ಕ್ರೆಡಿಟ್ ಪಡೆಯಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ವಿದೇಶದಲ್ಲಿರುವ ಕಪ್ಪು ಹಣ ತಂದು, ಎಲ್ಲರ ಅಕೌಂಟ್ ಗೆ 15 ಲಕ್ಷ ರೂಪಾಯಿ ಹಾಕಲಾಗುವುದು ಎಂದರು. 10 ವರ್ಷ ಆದರೂ ಒಂದು ಪೈಸೆ ಬರಲಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡಲಿಲ್ಲ. ಕನಿಷ್ಟ 20 ಲಕ್ಷ ಉದ್ಯೋಗ ಕೊಡಲಿಲ್ಲ. ಬದಲಿಗೆ ನಿರುದ್ಯೋಗಿಗಳ ಸಂಖ್ಯೆ ಜಾಸ್ತಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಹಿಂದಿನ ಚುನಾವಣೆಯಲ್ಲಿ ಆರ್ಟಿಕಲ್ 370, ಪುಲ್ವಾಮ ದಾಳಿ‌, ಸರಣಿ ಸುಳ್ಳುಗಳನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಅಧಿಕಾರಕ್ಕೇರಿದ್ದರು. ಇದೀಗ ಮತ್ತೆ ಮೋದಿ ಹತಾಶೆಯಿಂದ ಸುಳ್ಳು ಹೇಳಲು ಶರುಮಾಡಿದ್ದಾರೆ. ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು. ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎಂದು ಮೋದಿ ಸುಳ್ಳು ಹೇಳಲು ಶುರು ಮಾಡಿದ್ದಾರೆ. ಕರ್ನಾಟಕದ ಬಗ್ಗೆ ಅನೇಕ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅಧಿಕಾರಿಗಳಿಗೆ ಸಂಬಳ ಕೊಡಲು ಹಣ ಇಲ್ಲ. ಎಂದು ಸುಳ್ಳು ಹೇಳಲಾಗ್ತಿದೆ. ನಾವು ಅಧಿಕಾರಕ್ಕೆ ಬಂದಾಗ ಯಾರಿಗೂ ಸಂಬಳವೇ ಆಗಿರಲಿಲ್ಲ, ಎಲ್ಲರಿಗೂ ಸಂಬಳ ಮಾಡಿ, ನಂತರ ಕೂಡ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಗೃಹ ಜ್ಯೋತಿ, ಗೃಹಲಕ್ಷ್ಮಿ ಶಕ್ತಿ ಯೋಜನೆಗಳಿಂದ ಮಹಿಳೆಯರಿಗೆ ಸಬಲೀಕರಣಕ್ಕೆ ಅನುಕೂಲವಾಗಿದೆ. ಕರ್ನಾಟಕ, ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ಮೇಲೆ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ನಂಬಿಕೆ ಬಂದಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ನೀಡಲಾಗುವುದು ಎಂದರು.

*ಮೃಣಾಲ್‌ ಅಲ್ಲ, ನಾನೇ ಅಭ್ಯರ್ಥಿ*
ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿದರೆ ನನಗೆ ಆಶೀರ್ವಾದ ಮಾಡಿದಂತೆ ಆಗುತ್ತೆ. ಈ ಕ್ಷೇತ್ರದ ಅಭ್ಯರ್ಥಿ ನಾನೇ, ಲಕ್ಷ್ಮೀ ಹೆಬ್ಬಾಳಕರ್ ಮಗ ಅಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ನನಗೆ ಶಕ್ತಿ ಬಂದಂತೆ ಆಗುತ್ತದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಡಾ.ಎಂ.ಸಿ.ಸುಧಾಕರ್, ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕರಾದ ಲಕ್ಷ್ಮಣ್ ಸವದಿ, ಭದ್ರಾವತಿ ಶಾಸಕರಾದ ಬಿ.ಕೆ.ಸಂಗಮೇಶ್, ಪುಟ್ಟ ರಂಗಶೆಟ್ಟಿ, ರಾಜು ಸೇಠ್, ನಯನಾ ಮೋಟಮ್ಮ, ಕೇರಳ ಶಾಸಕ ರೋಜಿ ಜಾನ್, ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ.ಜಿ, ಭೋವಿ ನಿಗಮದ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ, ಮುಖಂಡರಾದ ಡಾ.ಮಹಾಂತೇಶ್ ಕಡಾಡಿ, ಮೋಹನ್ ಲಿಂಬಿಕಾಯಿ, ಅಶೋಕ್ ಪೂಜಾರಿ, ಸಿದ್ದಲಿಂಗ ದಳವಾಯಿ, ಅರವಿಂದ ದಳವಾಯಿ, ಚಂದ್ರಶೇಖರ್ ಕೊಣ್ಣೂರ, ಲಕ್ಕಣ್ಣ ಸವಸುದ್ದಿ, ಪ್ರೇಮಾ ಚಿಕ್ಕೋಡಿ, ಬಸವನಗೌಡ ಹೊಳಿಯಾಚೆ, ಪ್ರಕಾಶ್ ಢಾಗೆ, ಜಾರಿಕ್ ನದಾಫ್, ಗಂಗಾಧರ ಬಡಕುಂದ್ರಿ, ಭೀಮಪ್ಪ ಹಂದಿಗುಂದ್, ರಮೇಶ್ ಉಟಗಿ, ಸುರೇಶ್ ಅರಳಿ, ಲಗಮಣ್ಣ ಕಳಸನ್ನವರ್ ಸೇರಿದಂತೆ ಹಲವು ಮಂದಿ ಹಾಜರಿದ್ದರು.

error: Content is protected !!