ರಾಯಬಾಗ ಗ್ರಾಮೀಣ ಭಾಗದಲ್ಲಿ ಹಾಗೂ ರಾಯಬಾಗ ಪಟ್ಟಣದಲ್ಲಿ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸದಾ ಬಡವರ ಪರವಾಗಿದ್ದು, ಚುನಾವಣೆಗೂ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ. ಸದ್ಯ ರಾಜ್ಯದಲ್ಲಿ ಪಕ್ಷದ ಪರ ಅಲೆಯಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಒಂದು ಬಾರಿ ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ರಾಜಕಾರಣದ ಮೂಲಕ ಸಮಾಜ ಸೇವೆ ಮಾಡುವುದರ ಜೊತೆಗೆ ಶಿಕ್ಷಣ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈಯಲು ಬಯಸುವ ಯುವಕರಿಗೆ ತಮ್ಮ ಫೌಂಡೇಷನ್ ಮೂಲಕ ಸಹಾಯ ಸಹಕಾರ ನೀಡುವ ನಮ್ಮ ತಂದೆ ಸತೀಶ ಜಾರಕಿಹೊಳಿ ಅವರು ನನಗೆ ಆದರ್ಶ. ಅವರ ದಾರಿಯಲ್ಲೇ ನಡೆದು ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಿಮ್ಮ ಮನೆಯ ಮಗಳಾದ ನನಗೂ ಸಹ ನಮ್ಮ ತಂದೆಯವರಿಗೆ ನೀಡಿದ ಬೆಂಬಲ, ಅಭಿಮಾನವನ್ನು ನೀಡಿ ಎಂದರು.
ಕಳೆದ 15 ವರ್ಷದಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ತಂದೆ ಸತೀಶ ಜಾರಕಿಹೊಳಿ ಅವರು ತಮ್ಮ ಮತಕ್ಷೇತ್ರದ ಗ್ರಾಮಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಶಾಲಾ ಕಾಲೇಜುಗಳನ್ನು ನಿರ್ಮಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ನನಗೂ ಇದೇ ರೀತಿಯಲ್ಲಿ ಜನರ ಸೇವೆ ಮಾಡುವ ಬಯಕೆಯಿದೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ಸ್ವಚ್ಛ ಆಡಳಿತ ನೀಡಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಕಾಂಗ್ರೆಸ್ ಪಕ್ಷದವರು. ಹೀಗಾಗಿ ದೇಶದ ಅಭಿವೃದ್ಧಿಗೆ ನಿಜವಾಗಿ ಶ್ರಮಿಸಿದವರು ಕಾಂಗ್ರೆಸ್ ಪಕ್ಷದವರು. ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಶ್ರಮಿಸುವ ಮೂಲಕ ಕಾಂಗ್ರೆಸ್ ಕೈ ಬಲಪಡಿಸಬೇಕು. ಇದಕ್ಕಾಗಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಗೆಲುವಿಗೆ ಪಣತೊಡಬೇಕು ಎಂದು ಸಭಿಕರಲ್ಲಿ ಕೋರಿದರು.
ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಕೊಟ್ಟ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಈ ಭಾರಿ ಚಿಕ್ಕೋಡಿ ಸಮಗ್ರ ಅಭಿವೃದ್ಧಿಗೆ ನನಗೆ ಬೆಂಬಲಿ ನೀಡಿ, ನಮ್ಮ ತಂದೆಯವರಾದ ಸತೀಶ್ ಜಾರಕಿಹೊಳಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಹಾಸ್ಯ ಕಲಾವಿದ ಲಪಂಗ್ ರಾಜಾ ಹಾಗೂ ಜಾನಪಾದ ಕಲಾವಿದ ಮಲ್ಲು ನಿಪನಾಳ ಅವರು ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಪರ ಮತಯಾಚಿಸಿದರು. ಈ ಸಂದರ್ಭದಲ್ಲಿ ಮಹಾವೀರ್ ಮೋಹಿತೆ, ಸಿದ್ಧಾರೂಡ ಬಡಗರ್,ಹಾಜಿ ಮುಲ್ಲಾ, ರೋಹಿನಿ ಪಾಟೀಲ್ ಕಿತ್ತೂರು ಶಾಸಕರ ಪತ್ನಿ, ಕುಲಗೋಡ, ಅರ್ಜುನ್ ನಾಯಕವಾಡಿ, ಶಿವು ಪಾಟೀಲ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.