12/12/2025
kusnoor

ಬೆಳಗಾವಿ-೨೨: ಚಂದ್ರಕಾಂಥ ಕುಸನೂರ ಅವರು ಸಂಗೀತ, ಸಾಹಿತ್ಯ, ಚಿತ್ರಕಲಾ, ವೈಚಾರಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಆಳವಾದ ಜ್ಞಾನಯುಳ್ಳವರಾಗಿದ್ದರು. ಅವರೊಂದು ಜ್ಞಾನ ಪರ್ವತವೇ ಆಗಿದ್ದರೆಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೇ ಅವರು ತಮ್ಮಲ್ಲಿರುವ ಜ್ಞಾನವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕೆಂಬ ವಿಶಾಲ ಮನಸ್ಸಿನವರಾಗಿದ್ದರು ಎಂದು ಹಿರಿಯ ಪತ್ರಕರ್ತ, ಲೇಖಕ ಡಾ. ಸರಜು ಕಾಟ್ಕರ್ ಇಂದಿಲ್ಲಿ ಹೇಳಿದರು.
ಚಂದ್ರಕಾಂತ ಕುಸನೂರ ಸಾಂಸ್ಕೃತಿಕ ಪ್ರತಿಷ್ಠಾನದವರು ಚೆನ್ನಮ್ಮ ವೃತ್ತದ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಇಂದು ದಿ. ೨೧ ರವಿವಾರದಂದು ಮುಂಜಾನೆ ೧೧ ಗಂಟೆಗೆ ‘ಚಂದ್ರಕಾಂತ ಕುಸನೂರ : ನೆನಪು -೨೦೨೪’ ಕಾರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಸರಜೂ ಕಾಟ್ಕರ್ ಮೇಲಿನಂತೆ ಹೇಳಿದರು.
ಮುಂದೆ ಮಾತನಾಡುತ್ತ ಡಾ. ಕಾಟ್ಕರ್, ಹಲವಾರು ವಿಷಯಗಳನ್ನು ಕಲಿತುಕೊಳ್ಳಬಹುದೆಂಬ ಜ್ಞಾನದಾಸೆಯಿಂದ ಆಗಾಗ ನಾವು ಅವರ ಮನೆಗೆ ಹೋಗುತ್ತಿದ್ದೆವು. ಕಾದಂಬರಿಕಾರ ಡಾ. ಬೈರಪ್ಪನವರು ಒಮ್ಮೆ ಬೆಳಗಾವಿಗೆ ಬಂದಿದ್ದಾಗ ಚಿತ್ರಕಲೆ ಕುರಿತು ಡಾ. ಭೈರಪ್ಪ ಮತ್ತು ಕೂಸನೂರರ ನಡೆದ ಆಳವಾದ ಚರ್ಚೆಯನ್ನು ನಾನೆಂದು ಮರೆಯಲಾರೆ. ಅದರ ಧ್ವನಿಮುದ್ರಣ ನನ್ನ ಹತ್ತಿರವಿದ್ದು ಅದು ಪುಸ್ತಕರೂಪದಲ್ಲಿ ಬರುವುದು ಅತ್ಯವಶ್ಯವಾಗಿದೆ ಎಂದು ಹೇಳದರು.
‘ಕುಸನೂರರ ಚಿತ್ರಕಲೆಯ ರಸಾನುಭವ’ ವಿಷಯ ಕುರಿತಂತೆ ಮಾತನಾಡಿದ ಖ್ಯಾತ ಬರಹಗಾರರಾದ ಡಾ.ಪಿ. ಜಿ. ಕೆಂಪಣ್ಣವರ ಅವರು, ಚಿತ್ರಕಲೆಯಲ್ಲಿ ಒಂದು ಸಾಂಪ್ರದಾಯಿಕ ಚಿತ್ರಕಲೆ ಇನ್ನೊಂದು ನವ್ಯಚಿತ್ರಕಲೆ. ಕುಸನೂರರು ನವ್ಯ ಮಾದರಿಯಲ್ಲಿ ಚಿತ್ರಗಳನ್ನು ಬಿಡಿಸುತ್ತಿದ್ದರಿಂದ ಅವು ಸಾಮಾನ್ಯ ಜನರಿಗೆ ತಿಳಿಯುತ್ತಿರಲಿಲ್ಲ. ನೋಡುಗನ ದೃಷ್ಟಿಕೋನದಂತೆ ಒಂದೇ ಚಿತ್ರ ಹಲವಾರು ಅರ್ಥಗಳನ್ನು ಹೇಳುತಿದ್ದವು. ಕುಸನೂರರು ಒಬ್ಬರು ಅದ್ಭುತ ಚಿತ್ರಕಲಾವಿದ ಎಂದು ಹೇಳಿದರು.
‘ನಟನ ಅನುಭವ’ ವಿಷಯ ಕುರಿತಂತೆ ರಂಗಕರ್ಮಿ ಶಿರೀಷ ಜೋಷಿ ಮಾತನಾಡಿ, ನನ್ನ ಅಭಿನಯದ ಪಯಣ ಪ್ರಾರಂಭವಾದುದೇ ಚಂದ್ರಕಾಂತ ಕುಸನೂರರ ನಾಟಕದಿಂದ. ಇವರ ನಾಟಕಗಳ ಹಿಂದಿನ ಭಾವಗಳು ಅಂದು ನನಗೆ ತಿಳಿದಿರಲೇ ಇಲ್ಲ. ಇವರ ಹೆಚ್ಚಿನ ಎಲ್ಲ ನಾಟಕಗಳಲ್ಲಿ ನಾನು ಅಭಿನಯಿಸಿದ್ದೇನೆ. ಇವರ ಒಡನಾಟವೇ ಒಂದು ರೀತಿ ಖುಷಿ ಕೊಡುತ್ತಿತ್ತು ಎಂದು ಹೇಳಿದರುನ್ನಿ
ಇದೇ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡಮಿ ಸದಸ್ಯರಾದ ಬಾಬಾಸಾಹೇಬ ಕಾಂಬಳೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
‘ನಿರ್ದೇಶಕನ ಅನುಭವಗಳು’ ವಿಷಯ ಕುರಿತಂತೆ ನಿರ್ದೇಶಕ ಬಾಬಾಸಾಹೇಬ ಕಾಂಬಳೆ ಮಾತನಾಡಿದರು. ಪ್ರಾಸ್ತಾವಿಕ ನುಡಿಗಳನ್ನು ಸಂಚಾಲಕ ಬಿ.ಕೆ. ಕುಲಕರ್ಣಿ ಮಾತನಾಡಿದರು. ಮೀನಾಕ್ಷಿ ಸದಲಗೆ ವಂದಿಸಿದರು. ನಿರಜಾ ಗಣಚಾರಿ ನಿರೂಪಿಸಿದರು. ಖ್ಯಾತ ಕಲಾವಿದ ಬಾಳು ಸದಲಗೆ, ಡಾ. ರಾಮಕೃಷ್ಣ ಮರಾಠೆ, ಡಾ. ಎಸ್.ಬಿ. ಕುಲಕರ್ಣಿ, ರಾಮಚಂದ್ರ ಕಟ್ಟಿ, ಡಾ. ಎ. ಬಿ. ಘಾಟಗೆ, ರವಿ ಕೊಟಾರಗಸ್ತಿ, ಅರವಿಂದ ಹುನಗುಂದ ಶ್ರೀಮತಿ ಜ್ಯೋತಿ ಬದಾಮಿ ಉಪಸ್ಥಿತರಿದ್ದರು.

error: Content is protected !!