ಬೆಳಗಾವಿ-೨೧: ಇಡಿ ವಿಶ್ವಕ್ಕೆ ಶಾಂತಿ ಅಹಿಂಸೆ ತತ್ವಗಳನ್ನು ಬೋಧಿಸಿ ಮಾನವ ಕಲ್ಯಾಣದ ಜೀವನ ಪಾವನಗೊಳಿಸಿದ ಭಗವಾನ ಮಹಾವೀರರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಖ್ಯಾತ ಸಂಶೋಧಕ ಡಾ.ಮದನ ಗೊಡಬೋಲೆ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿಯಲ್ಲಿಂದು ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ವಿಶ್ವಕ್ಕೆ ಮಹಾವೀರರ ತತ್ವಗಳನ್ನು ಪಾಲಿಸಬೇಕಾಗಿದೆ. ಕೆಲವಡೆ ಯುದ್ದಸದೃಶ್ಯ ಪರಿಸ್ಥಿತಿ ಇದೆ. ಮನುಷ್ಯರಲ್ಲಿ ಪ್ರೀತಿ ವಿಶ್ವಾಸ ಕಡಿಮೆಯಾಗುತ್ತಿದ್ದು, ಮಹಾವೀರರ ಸಂದೇಶಗಳನ್ನು ಪಾಲಿಸುತ್ತ ಎಲ್ಲರೂ ಮಾನವ ಕಲ್ಯಾಣಕ್ಕೆ ಶ್ರಮಿಸೋಣ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ವಿನೋದ ದೊಡ್ಡಣ್ಣವರ ಅವರು ಅತಿಥಿಗಳನ್ನು ಸ್ವಾಗತಿಸಿದರು. ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಮಧ್ಯವರ್ತಿ ಉತ್ಸವ ಸಮಿತಿ ಗೌರವ ಕಾರ್ಯಾಧ್ಯಕ್ಷ ರಾಜೇಂದ್ರ ಜೈನ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಳ್ಳಿಯ ಸಂದೇಶ ಪತ್ರಿಕೆ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ವೇದಿಕೆ ಮೇಲೆ ಉದ್ಯಮಿ ಗೋಪಾಲ ಜಿನಗೌಡ, ಪುಷ್ಪದಂತ ದೊಡ್ಡಣ್ಣವರ, ಸಚಿನ ಪಾಟೀಲ,ಮನೋಜ ಸಂಚೇತಿ,ಹಿರಿಯ ನ್ಯಾಯವಾದಿಗಳಾದ ಎಂ.ಬಿ.ಝಿರಲಿ , ರವಿರಾಜ ಪಾಟೀಲ, ರಾಜೇಂದ್ರ ಜಕ್ಕನ್ನವರ , ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದ ನಂತರ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು.
ಶೊಭಾಯಾತ್ರೆಯು ಸಮಾದೇವಿ ಗಲ್ಲಿಯಿಂದ ಪ್ರಾರಂಭಗೊಂಡು ರಾಮದೇವ ಗಲ್ಲಿ, ಕಿರ್ಲೋಸ್ಕರ ರಸ್ತೆ, ರಾಮಲಿಂಗಖಿಂಡ ಗಲ್ಲಿ, ಟಿಳಕಚೌಕ, ಶೇರಿ ಗಲ್ಲಿ, ಶನಿ ಮಂದಿರ, ಕಪಿಲೇಶ್ವರ ರಸ್ತೆ, ಶಹಾಪೂರ ಕೊರೆ ಗಲ್ಲಿ ಎಸ್.ಪಿ.ಎಂ ರೋಡ, ಗೋವಾವೇಸ ಮೂಲಕ ಮಹಾವೀರ ಭವನದಲ್ಲಿ ಮುಕ್ತಾಯಗೊಂಡಿತು. ತದನಂತರ
ಜೈನ ಯುವ ಸಂಘಟನೆ ವತಿಯಿಂದ ಬೃಹತ್ ಬೈಕ ರ‍್ಯಾಲಿ ನಡೆಸಲಾಯಿತು.
ಸಮಾರಂಭದಲ್ಲಿ ಸ್ವಸ್ತಿಶ್ರಿ ತಂಡದವರು ಪ್ರಾರ್ಥನೆ ಹಾಗೂ ಸ್ವಾಗತ ಗೀತೆ ಹಾಡಿದರು. ಸಚಿನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ನಾಯಕರ ಸಹಭಾಗ: ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಪಕ್ಷದ ರಾಜಕೀಯ ವ್ಯಕ್ತಿಗಳು ವೇದಿಕೆ ಮೇಲೆ ಉಪಸ್ಥಿತರಿರಲಿಲ್ಲ. ಆದರೆ ಸಮಾರಂಭಕ್ಕೆ ಮಾತ್ರ ಎಲ್ಲರೂ ಹಾಜರಾಗಿದ್ದರು. ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ, ಕಾಂಗ್ರೆಸ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಅಭಯ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಸುನಿಲ ಹನಮಣ್ಣವರ ಮೊದಲಾದ ನಾಯಕರು ಉಪಸ್ಥಿತರಿದ್ದರು.