ಬೆಳಗಾವಿ-೧೭: ಎಸ್.ಯು.ಸಿ.ಐ. ಕಮ್ಯುನಿಸ್ಟ್ ಪಕ್ಷದ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಾಮ್ರೇಡ್ ಲಕ್ಷ್ಮಣ ಜಡಗಣ್ಣವರ ಅವರು ನಾಮಪತ್ರ ಸಲ್ಲಿಸಿದರು. ಅಂಬೇಡ್ಕರ್ ಗಾರ್ಡನ್ ಮುಂಭಾಗದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಬುಧವಾರ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಹಿಂದೆ ಕಾಂಗ್ರೆಸ್ ನ ಬೆಲೆಏರಿಕೆ, ನಿರುದ್ಯೋಗ ಬ್ರಹ್ಮಾಂಡ ಭ್ರಷ್ಟಾಚಾರದಿಂದ, ಜನವಿರೋಧಿ ನೀತಿಗಳಿಂದ ಬೇಸತ್ತಿದ್ದ ಜನತೆ ತಮಗೆ ಅಚ್ಚೆ ದಿನದ ಕನಸು ತೋರಿಸಿದ ಬಿಜೆಪಿಗೆ ಮಣೆ ಹಾಕಿದರು. ಆದರೆ ಬಿಜೆಪಿ ಕೂಡ ಅದೇ ಜನವಿರೋಧಿ ನೀತಿಗಳನ್ನು ಹೊಸ ಲೇಪನದೊಂದಿಗೆ ಇನ್ನೂ ವೇಗವಾಗಿ ಮುಂದುವರೆಸಿ 60 ವರ್ಷ ಕಾಲ ಕಾಂಗ್ರೆಸ್ ಮಾಡಿದ್ದನ್ನು ಕೇವಲ 10 ವರ್ಷಗಳಲ್ಲಿ ಮಾಡಿದ್ದೀಗ ಇತಿಹಾಸ. ಪ್ರಪಂಚದ ಯುವ ರಾಷ್ಟ್ರವಾದ ಭಾರತದಲ್ಲಿ ಕಳೆದ 45 ವರ್ಷಗಳಲ್ಲೇ ಇಲ್ಲದಂತ ನಿರುದ್ಯೋಗ ತಾಂಡವವಾಡುತ್ತಿದೆ. ಬೆಲೆಗಳು ಗಗನ ಮುಟ್ಟಿವೆ. ಅದರಾಚೆಗೆ ಈಗಷ್ಟೇ ಹೊರಬಂದಿರುವ ಕಾರ್ಪೊರೇಟ್ ಕಂಪನಿಗಳಿಂದ ಅನೈತಿಕವಾಗಿ, ಅಕ್ರಮವಾಗಿ ದೇಣಿಗೆ ಸಂಗ್ರಹ ಮಾಡುವ ಚುನಾವಣಾ ಬಾಂಡ್ ಹಗರಣ ದೇಶದ ಅತೀ ದೊಡ್ಡ ಹಗರಣವಾಗಿದೆ. ಅಂತೆಯೇ ಬಿಜೆಪಿ, ಬಡರಾಷ್ಟ್ರ ಭಾರತದ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರ ಬಂಡವಾಳ ಶಾಹಿಗಳಿಗೆ ಲಕ್ಷಾಂತರ ಕೋಟಿಯಷ್ಟು ತೆರಿಗೆಯನ್ನು ಮನ್ನಾ ಮಾಡಿದೆ. ಮತ್ತೊಂದೆಡೆ ರೈತರ ಸಬ್ಸಿಡಿ ಕಡಿತ, ನರೇಗಾ ಬಜೆಟ್ ಕಡಿತ, ಖಾಸಗೀಕರಣ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಇತ್ಯಾದಿಗಳ ಮೂಲಕ ತಾನು ಯಾರ ಪರ ಎಂಬುದನ್ನು ಸಾಬೀತು ಮಾಡಿದೆ.
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ ಜಡಗಣ್ಣವರ ಪ್ರಾರಂಭದಲ್ಲಿ ಯುವಜನ ಸಂಘಟನೆ ಎಐಡಿವೈಓ ರಾಜ್ಯ ನಾಯಕರಾಗಿ ಬೆಳಗಾವಿ, ಧಾರವಾಡ ಸೇರಿದಂತೆ ಈ ವಿಭಾಗದಲ್ಲಿ ಯುವಜನರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸತತವಾಗಿ ಹೋರಾಟಗಳಿಗೆ ನೇತೃತ್ವ ವಹಿಸಿದ್ದಾರೆ. ಪ್ರಾರಂಭದಿಂದಲೂ ಪಕ್ಷದ ಪೂರ್ಣಾವಧಿ ಕಾರ್ಯಕರ್ತರಾಗಿ ಯುವಜನರ, ರೈತ-ಕಾರ್ಮಿಕರ ಚಳುವಳಿಗಳಿಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಎಸ್.ಯುಸಿ.ಐ(ಸಿ) ಪಕ್ಷದ ಧಾರವಾಡ ಜಿಲ್ಲಾ ಕಾರ್ಯದರ್ಶಿಯಾಗಿ ಜಿಲ್ಲೆಯ ಜನಹೋರಾಟಗಳಿಗೆ ನೇತೃತ್ವ ವಹಿಸುತ್ತಿದ್ದಾರೆ. ರೈತ ಮುಂದಳ ಏಐಕೆಕೆಎಂಎಸ್ ನ ರಾಜ್ಯ ಉಪಾಧ್ಯಕ್ಷರಾಗಿ ಬೆಳಗಾವಿ, ಧಾರವಾಡ ಮುಂತಾದೆಡೆ ರೈತ ಚಳುವಳಿಗೆ ನಾಯಕತ್ವ ಕೊಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ನರೇಗಾ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ, ಬಗರ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟಗಳಿಗೆ ನೇತೃತ್ವ ವಹಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಆಶಾ ಕಾರ್ಯಕರ್ತೆರ ಸಂಘದ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯ ಆಶಾ ಕಾರ್ಯಕರ್ತೆಯರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟಗಳನ್ನು ಬೆಳೆಸಿದ್ದಾರೆ. ಕೊಳಗೇರಿಗಳಲ್ಲಿ ವಾಸಿಸುವ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಆಗ್ರಹಿಸಿ ಬೆಳಗಾವಿ ಜಿಲ್ಲೆಯಲ್ಲಿ ಹಲವಾರು ವರ್ಷಗಳು ನಡೆದ ಹೋರಾಟಗಳಿಗೆ ನೇತೃತ್ವ ವಹಿಸಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ನಮ್ಮ ಪಕ್ಷ ಎಸ್‌ಯುಸಿಐ(ಸಿ) ಮತ್ತು ಅದರ ಮುಂದಳ ಸಂಘಟನೆಗಳಿಂದ ಕಳೆದ ಸುಮಾರು ಹಲವಾರು ವರ್ಷಗಳಿಂದ ಹಲವಾರು ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಹೋರಾಟಗಳನ್ನು ಕಟ್ಟಿದೆ. ಆದ್ದರಿಂದ ಜನವಿರೋಧಿ ಕಾಂಗ್ರೇಸ್, ಬಿಜೆಪಿಗಳಂತಹ ಎಲ್ಲಾ ಬಂಡವಾಳಶಾಹಿ ಪಕ್ಷಗಳ ನೀತಿಗಳನ್ನು ನೋಡಿ ಅನುಭವಿಸಿ, ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ರೈತರು, ಕೃಷಿ ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರು ಹಾಗೂ ಸಮಸ್ತ ದುಡಿಯುವ ಜನತೆ ಲಕ್ಷ್ಮಣ ಜಡಗಣ್ಣವರ ಅವರನ್ನು ಬೆಂಬಲಿಸಬೇಕು ಎಂದು ಎಸ್.ಯು.ಸಿ.ಐ. ಕಮ್ಯುನಿಸ್ಟ್ ಪಕ್ಷವು ಜನತೆಯಲ್ಲಿ ಮನವಿ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ನಾಯಕರಾದ ವಿ. ನಾಗಮ್ಮಾಳ್, ಪಕ್ಷದ ಸದಸ್ಯರಾದ ಲಕ್ಕಪ್ಪ ಬಿಜ್ಜನ್ನವರ, ರಾಜು ಗಾಣಗಿ, ಎಂಬಿ ಹುಡೇದ, ಭವಾನಿ ಶಂಕರ್ ಎಸ್ ಗೌಡ ಸೇರಿದಂತೆ ಪಕ್ಷದ ಸದಸ್ಯರು, ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸಿದ್ದರು.