ಬೆಳಗಾವಿ-೧೭:ವೇಗವಾಗಿ ಬೆಳೆಯುತ್ತಿರುವ ಬೆಳಗಾವಿಗೆ ನಗರಕ್ಕೆ ಅಷ್ಟೇ ವೇಗವಾಗಿ ಕೆಲಸ ನಿರ್ವಹಿಸುವ ಸಂಸದ ಬೇಕು. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದರು.
ಮಹಾಂತೇಶ್ ನಗರದ ಮಹಾಂತ್ ಭವನದಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಚಿವರು, ಬೆಳಗಾವಿ ಎಲ್ಲಾ ದಿಕ್ಕಿನಲ್ಲಿ ಬೆಳೆಯುತ್ತಿದೆ. ಬೆಳೆಯುತ್ತಿರುವ ಬೆಳಗಾವಿಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ತರಬೇಕಾಗಿದೆ. ಇಲ್ಲಿನ ಯುವಕರಿಗೆ ಉದ್ಯೋವಕಾಶ ಕಲ್ಪಿಸಬೇಕಿದೆ. ಹೀಗಾಗಿ ಉತ್ಸಾಹದಿಂದ ಕೆಲಸ ಮಾಡಲು ಸಂಸದ ಬೇಕು. ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಮೇಲೆ ಅಭಿಮಾನವೂ ಇಲ್ಲ. ಕೆಲಸ ಮಾಡುವ ಹಸಿವೂ ಇಲ್ಲ. ಅಂತಹವರನ್ನು ತಿರಸ್ಕರಿಸಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಕರೆ ನೀಡಿದರು.
ಕರ್ನಾಟಕ ಸರ್ಕಾರ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಪ್ರಮಾಣಿಕವಾಗಿ ತಲುಪಿಸಲಾಗುತ್ತಿದೆ. ಸುಮಾರು 1.20 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿವೆ. ಇದು ವಿಶ್ವದಲ್ಲಿಯೇ ಮಾದರಿಯಾದ ಯೋಜನೆ. ಸರ್ವರನ್ನು ಬಸವಣ್ಣನವರ ಸಮಾನತೆಯ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಜಾರಿಗೆ ತಂದ ಯೋಜನೆ ಇದಾಗಿದೆ ಎಂದು ಸಚಿವರು ಹೇಳಿದರು.
ಮನೆಯಲ್ಲಿ ಕೂರದೆ ಎಲ್ಲರೂ ಮತದಾನ ಮಾಡಿ, ಬೆಳಗಾವಿ ಸ್ವಾಭಿಮಾನ ಉಳಿಸೋಣ. ಬೆಳಗಾವಿ ಜನರ ಕಷ್ಟ ಸುಖಗಳ ಬಗ್ಗೆ ಅರಿತಿರುವ ಅಭ್ಯರ್ಥಿಯನ್ನು ಬೆಂಬಲಿಸೋಣ. ಬದ್ದತೆ ಇಲ್ಲದ ಬಿಜೆಪಿ ಅಭ್ಯರ್ಥಿ ಕಣದಲ್ಲಿದ್ದು, ಅವರಲ್ಲಿ ಸಾಕಷ್ಟು ಗೊಂದಲವಿದೆ. ಪಕ್ಷಾತೀತವಾಗಿ ಎಲ್ಲರೂ ಮೃಣಾಲ್ ಬೆಂಬಲಿಸಿ ಎಂದು ಸಚಿವರು ಹೇಳಿದರು. ಬೆಳಗಾವಿ ಇನ್ನೂ ಬೆಳೆಯಬೇಕು. ಮೆಟ್ರೋ, ಫ್ಕೈಓವರ್, ಕೈಗಾರಿಕೆಗಳು ಬರಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, ಮುಖ್ಯಮಂತ್ರಿ ಆಗಿ ಎರಡು ಬಾರಿ ಉಸ್ತುವಾರಿ ಸಚಿವರಾಗಿ, ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದರೂ ಅಭಿವೃದ್ಧಿ ಬಗ್ಗೆ ಚಿಂತಿಸದೆ ನಿರ್ಲಕ್ಷ್ಯ ವಹಿಸಿದರು. ಶೆಟ್ಟರ್ ಅವರಿಗೆ ಅಭಿವೃದ್ಧಿ ಮಾಡೋಕೆ ಬರಲ್ಲ. ಬಿಜೆಪಿ ಅಭ್ಯರ್ಥಿಗೆ ಇಲ್ಲಿ ಮತ ಕೇಳಲು ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಜಗದೀಶ್ ಶೆಟ್ಟರ್ ಬೆಳಗಾವಿಗೆ ಸಾಕಷ್ಟು ಅನ್ಯಾಯ ಮಾಡಿದ್ದಾರೆ. ಅವರು ಕೈಗಾರಿಕೆ ಸಚಿವರಾಗಿದ್ದಾಗ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ. ಆಗ ಅವರ ಲಕ್ಷ್ಯ ಕೇವಲ ಹುಬ್ಬಳ್ಳಿ -ಧಾರವಾಡದ ಮೇಲಿತ್ತು. ನಾನು ಬೆಳಗಾವಿ ಬಗ್ಗೆ ಹೇಳಲು ಹೋದರೆ ನನ್ನ ಮೇಲೆ ಕೋಪಿಸಿಕೊಂಡರು. ಬೆಳಗಾವಿಗೆ ಏನೇ ಬಂದರೂ ಅಡ್ಡಗಾಲು ಹಾಕುವ ಚಾಲಿ ಅವರದ್ದಾಗಿತ್ತು. ಈಗ ಬೆಳಗಾವಿ ನನ್ನ ಕರ್ಮ ಭೂಮಿ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕ ಫಿರೋಜ್ ಸೇಠ್ ಮಾತನಾಡಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಉತ್ತಮ ರೀತಿಯಿಂದ ಕೆಲಸ ಮಾಡುತ್ತಿದ್ದಾರೆ. ಪುತ್ರ ಮೃಣಾಲ ಕೂಡ ಅವರದೇ ಮಾದರಿಯಲ್ಲಿ ಕೆಲಸ ಮಾಡಲಿದ್ದಾನೆ. ಹಾಗಾಗಿ ನಾವೆಲ್ಲ ಅವರಿಗೆ ಹೆಚ್ಚಿನ ಮತ ನೀಡಿ ಆಯ್ಕೆ ಮಾಡೋಣ. ಎಲ್ಲರೂ ಸೇರಿ ಬೆಳಗಾವಿಯನ್ನು ಅಭಿವೃದ್ಧಿಪಡಿಸೋಣ ಎಂದರು.
ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್, ಆಮ್ ಆದ್ಮಿ ಪಕ್ಷದ ಗಿರೀಶ್ ಬಾಳೆಕುಂದ್ರಿ, ದಿನೇಶ ಬಾಳೆಕುಂದ್ರಿ, ಆರ್.ಪಿ.ಪಾಟೀಲ ಮೊದಲಾದವರು ಮಾತನಾಡಿದರು. ಈ ವೇಳೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್, ಮಾಜಿ ಸಚಿವ ಶಶಿಕಾಂತ್ ನಾಯಕ್, ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್.ಕಿವುಡಸಣ್ಣನವರ, ಮಾಜಿ ಮೇಯರ್ ಎನ್.ಬಿ.ನಿರ್ವಾಣಿ, ಮಾಜಿ ಉಪ ಮೇಯರ್ ಜ್ಯೋತಿ ಭಾವಿಕಟ್ಟಿ, ಮಾಜಿ ಕಾರ್ಪೋರೇಟರ್ ಅನುಶ್ರೀ ದೇಶಪಾಂಡೆ, ಪುಷ್ಪ ಪರ್ವತರಾವ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.