ಧಾರವಾಡ-೧೪:ಮಾದಿಗ ದಂಡೋರ MRPS ಧಾರವಾಡ ಜಿಲ್ಲಾ ಸಮಿತಿ ಮತ್ತು ಯುವ ಘಟಕದ ಪದಾಧಿಕಾರಿಗಳು ಸೇರಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿಯನ್ನು ಭಾನುವಾರ ಹುಬ್ಬಳ್ಳಿ ಸ್ಟೇಷನ್ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಆಚರಿಸಿದರು.
ಮಾಲಾರ್ಪಣೆ ನೆರವೇರಿಸಿ ಮಾತನಾಡಿದ ಮಾದಿಗ ದಂಡೋರ MRPS ಉತ್ತರ ಕರ್ನಾಟಕ ಅಧ್ಯಕ್ಷರಾದ ಶ್ರೀ ಮಂಜುನಾಥ ಕೊಂಡಪಲ್ಲಿ ಅವರು “ಇಂದು ವಿಶ್ವಾದ್ಯಂತ ಸುಮಾರು 152 ದೇಶಗಳಲ್ಲಿ ಬಾಬಾಸಾಹೇಬರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ, ಸುಮಾರು 50 ದೇಶಗಳಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂಬ ಅಂದಾಜಿದೆ, ಇಂತಹ ಗೌರವ ಬಹುಷಃ ಮತ್ತಿನ್ನೊಬ್ಬರಿಗೆ ದೊರೆತ ಉದಾಹರಣೆಯೇ ಇಲ್ಲ. ಭಾರತ ದೇಶದ ಮಟ್ಟಿಗೆ ಹೇಳುವುದಾದರೆ ಸ್ವಾತಂತ್ರ್ಯ ಬಂದ 76 ವರ್ಷಗಳಲ್ಲಿ ನಾಲ್ಕು ಮಹಾ ಯುದ್ಧಗಳು, ಮೂರು ಬೃಹತ್ ಜಾಗತಿಕ ಹಿಂಜರಿತಗಳು, ಮಹಾಮಾರಿಗಳು ಮುಂತಾದ ಎಲ್ಲವನ್ನು ಸಹ ಎದುರಿಸಿ ಮೆಟ್ಟಿ ನಿಲ್ಲಲು ಸಾಧ್ಯವಾಗಿದ್ದು ನಮ್ಮ ದೇಶದ ಅಪ್ರತಿಮ ಸಂವಿಧಾನ ಮತ್ತು ಅದರ ಶಕ್ತಿಯಿಂದ ಮಾತ್ರ, ಇಂತಹ ಸಂವಿಧಾನವನ್ನು ನಮ್ಮ ದೇಶಕ್ಕೆ ನೀಡಿದ ಬಾಬಾಸಾಹೇಬರಿಗೆ ನಾವೆಲ್ಲ ಮತ್ತು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಋಣಿಯಾಗಿದ್ದೇವೆ ಎನ್ನುವುದನ್ನು ಮರೆಯಬಾರದು. ಜಾತೀಯ ಅಸಮಾನತೆಯು ಮುಗಿಲು ಮುಟ್ಟಿದ್ದ ಕಾಲಮಾನದಲ್ಲಿ ಜನಿಸಿ, ಹೆಜ್ಜೆ ಹೆಜ್ಜೆಗೆ ಅವಮಾನಗಳನ್ನು ಅನುಭವಿಸಿ, ಶೋಷಣೆಯ ವಿರುದ್ಧ ಸೆಡ್ಡು ಹೊಡೆದು ನಿಂತು, ಕೇವಲ ಪುಸ್ತಕ ಮತ್ತು ಲೇಖನಿಯಿಂದಲೇ ಹೋರಾಟ ನಡೆಸಿ, ಶತಮಾನ ಕಂಡ ಮೇರು ವ್ಯಕ್ತಿಯಾಗಿ ಬೆಳೆದು ನಿಂತ ಬಾಬಾಸಾಹೇಬರ ಜೀವನ ನಮಗೆಲ್ಲ ಅನುಕರಣೀಯ. ಮಹಿಳೆಯರಿಗೆ ಸಮಾನತೆಯನ್ನು ಪ್ರತಿಪಾದಿಸಿ ಸಾಂವಿಧಾನಿಕವಾಗಿ ಅವರಿಗೆ ಸ್ವಾತಂತ್ರ್ಯ ಕಲ್ಪಿಸಿದ್ದು, ಭಾರತೀಯ ರಿಸರ್ವ ಬ್ಯಾಂಕ್ ಸ್ಥಾಪನೆಗೆ ನಾಂದಿ ಹಾಡಿದ್ದು, ಕಾನೂನು ಮಂತ್ರಿಯಾಗಿ ಕಾರ್ಮಿಕರ ಪರವಾಗಿ ಕಾನೂನುಗಳನ್ನು ರೂಪಿಸಿದ್ದು ಮುಂತಾದ ಅನೇಕ ಸಾಧನೆಗಳು ಅವರನ್ನು ದೇಶದ ಮಹಾನ್ ಮುತ್ಸದಿ ನಾಯಕರನ್ನಾಗಿ ನಿಲ್ಲಿಸುತ್ತದೆ. ಆದರೆ ಇಂದು ವಸ್ತುಸ್ಥಿತಿಯನ್ನು ಮುಚ್ಚಿಟ್ಟು ಬಾಬಾಸಾಹೇಬರನ್ನು ಕೇವಲ ದಲಿತರು, ಹಿಂದುಳಿದವರ ನಾಯಕ ಎಂಬಂತೆ ಬಿಂಬಿಸಿರುವುದು ದೊಡ್ಡ ದೌರ್ಭಾಗ್ಯವೆಂದೇ ಹೇಳಬೇಕು. ಏನೇ ಆದರೂ, ನಾವೆಲ್ಲ ಸೇರಿ ಬಾಬಾಸಾಹೇಬರು ತೋರಿಸಿಕೊಟ್ಟ ಹಾದಿಯಲ್ಲಿ ನಡೆದು, ಮುಂದಿನ ಪೀಳಿಗೆಯನ್ನು ಬಾಬಾಸಾಹೇಬರ ಕನಸಿನಂತೆ ಶಿಕ್ಷಿತರನ್ನಾಗಿಸಿ, ಸ್ವಾಭಿಮಾನದ ಬದುಕನ್ನು ನಡೆಸಲು ಅನುವಾಗುವಂತೆ ಸಂಘಟಿಸಿ, ಭವ್ಯ ಭಾರತವನ್ನು ಕಟ್ಟುವ ಕೆಲಸ ಮಾಡೋಣ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾದಿಗ ದಂಡೋರ MRPS ಧಾರವಾಡ ಜಿಲ್ಲಾ ಕಾರ್ಯಾಧ್ಯಕ್ಷ ಗೋವಿಂದ ಬೆಲ್ಡೋಣಿ, ಜಿಲ್ಲಾಧ್ಯಕ್ಷ ಸತ್ಯನಾರಾಯಣ್ ಎಂ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶ ಕನಮಕ್ಕಲ, ಜಿಲ್ಲಾ ಕಾರ್ಯದರ್ಶಿ ಆನಂದ ಮಾದರ, ಯುವಘಟಕದ ಅಧ್ಯಕ್ಷರಾದ ಸತ್ಯನಾರಾಯಣ ಸಾಕೆ, ಉಪಾಧ್ಯಕ್ಷ ಹರೀಶ ಅನಂತಪುರ, ಪ್ರಸಾದ ಸೌದುಲ್, ಜಯವಂತ ಚಿನ್ನಾರಿ, ಹಿರಿಯ ಮುಖಂಡರಾದ ಸೂರ್ಯನಾರಾಯಣ ಕನಮಕ್ಕಲ್, ಪರಶುರಾಮ ಮಲ್ಯಾಳ, ಮುತ್ಯಾಲಪ್ಪ ಪೆನುಗೋಳ, ಸುರೇಶ ಸೌದುಲ್, ವೆಂಕಟೇಶ ಕೊಂಡಪಲ್ಲಿ, ವೆಂಕಟೇಶ ಭೂಮಪಲ್ಲಿ, ಮಂಜುನಾಥ ನಿಧಿನಾಡು, ಪುಲಿಕೇಶ ಮಲ್ಯಾಳ, ದುರ್ಗಪ್ಪ, ಕುಲ್ಲಾಯಪ್ಪ, ಈಶ್ವರಯ್ಯ ಮಠಪತಿ, ಮಂಜುನಾಥ ಕತ್ರಿಮಾಲ್, ಮಂಜುನಾಥ ಗುತ್ತಿ, ಪರಮೇಶ ಪಾಮಡಿ ಇತರರು ಹಾಜರಿದ್ದರು.