23/12/2024
IMG-20240409-WA0001

ಬೆಳಗಾವಿ-೦೯: ಜನರ ಸಮಸ್ಯೆಗಳನ್ನು ಆಲಿಸುವ ಜನಪ್ರತಿನಿಧಿಗಳಿಗೆ ಯುವಕರು ನಿಮ್ಮ ಮತಚಲಾಯಿಸಬೇಕು. ಕನ್ನಡಿ ನೋಡಿ ಮತಚಲಾಯಿಸದರೆ ಭಾರತ ಭವಿಷ್ಯ, ಅಭಿವೃದ್ಧಿ ಎರಡು ಅಸಾಧ್ಯ ಎಂದು ನಟ ಪ್ರಕಾಶರಾಜ್‌ ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರಿದರು.

ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕ ಸಮಸ್ತ ಜನಪರ ಸಂಘಟನೆಗಳ ವತಿಯಿಂದ ಆಯೋಜಿಸಲಾದ ದೇಶ ಉಳಿಸಿ ಸಂಕಲ್ಪ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಅವರು ಮಾತನಾಡಿ,

ಮಕ್ಕಳ ಭವಿಷ್ಯಕ್ಕಾಗಿ ಒಳ್ಳೆಯ ನಾಯಕರನ್ನು ಆಯ್ಕೆ ಅಗತ್ಯವಿದೆ. ನಿಜವಾದ ದೇಶಭಕ್ತರಾದರೆ ಸರ್ವಾಧಿಕಾರಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಬೆಳಗಾವಿ ಜನ ವಿಚಾರ ಮಾಡಿ, ಎಚ್ಚೆತ್ತುಕೊಂಡು ಮತ ಹಾಕರಿ ಎಂದರು.

ಅದಾನಿ ಕೈ ಬದಲಾಗಿದೆ ಮಹಾಪ್ರಭು ಎಂದ ಪ್ರಕಾಶ್‌ ರಾಜ್‌ :
ಏರ್ ಪೋರ್ಟ್ ಬದಲಾಗಿಲ್ಲ. ಅದಾನಿ ಕೈ ಬದಲಾಗಿದೆ. ಏರ್ ಪೋರ್ಟ್ ನಲ್ಲಿ ಒಂದು ಚಹಾಗೆ 300 ರೂ.. ಇದು ಸರ್ಕಾರಕ್ಕೆ ಹೋಗೋದಿಲ್ಲ. ಮೋದಿ ಸ್ನೇಹಿತ ಅದಾನಿಗೆ ಹೋಗುತ್ತದೆ‌. ಟೋಲ್ ಗೇಟ್ ಮಾಫಿಯಾ ಪೆಟ್ರೋಲ್ ದರ ಹೆಚ್ಚಾಗಿದೆ. ಇದು ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ ದೇಶದ ಜನರ ಮೇಲೆ ಹೊರೆ ಬಿಳುತ್ತಿದೆ. ಅದನ್ನು ತಪ್ಪಿಸೋಣ ದೇಶ ಭಕ್ತರನ್ನು ಆಯ್ಕೆ ಮಾಡೋಣ ಎಂದು ಹೇಳಿದರು.

ದೇಶ ಉಳಿಸಿ ಸಂಕಲ್ಪ ಸಮಾವೇಶ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಮಾತನಾಡಿ, ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದರೆ ಸರ್ಕಾರವನ್ನು ಶ್ಲಾಘಿಸೋಣ. ಆದರೆ, ಜನತೆ ದಿಕ್ಕು ತಪ್ಪಿಸುವ ಕೆಲಸ ಮಾಡಿ, ಜನರಲ್ಲಿ ಜಾತಿ-ಧರ್ಮಗಳ ವಿಷಬೀಜ ಬಿತ್ತುತ್ತಿರುವ ಸರ್ಕಾರವನ್ನು ತಕ್ಕಪಾಠ ಕಲಿಸಬೇಕಾಗಿದೆ. ಹೀಗಾಗಿ ಎಲ್ಲಾ ಸಂಘಟನೆಗಳು ಒಂದಾಗಿ ಕಾಂಗ್ರೆಸ್‌ ಗೆ ಶಕ್ತಿ ತುಂಬೋಣ ಎಂದು ಹೇಳಿದರು.
ದೇಶದಲ್ಲಿ ಸ್ವಾತಂತ್ರ್ಯ ನಂತರ ಅತೀ ದೊಡ್ಡ ಹಗರಣ ಅಂದ್ರೆ ಎಲೆಕ್ಟ್ರೋ ಬಾಂಡ್ಸ್.ಎಲೆಕ್ಟ್ರೋ ಬಾಂಡ್ಸ್ ಸ್ಪಷ್ಟ ಚಿತ್ರಣ ಕೊಡತಾ ಇದೆ. ಹಣಕಾಸು ಸಚಿವ ಅರುಣ್ ಜೆಟ್ಲಿ ಅವರು ಪ್ರಧಾನಮಂತ್ರಿ ಅವರು ದೊಡ್ಡ ಹಗರಣ ಮಾಡಿದ್ದಾರೆ. ದೇಶದ ಪ್ರಮುಖ ಕಾಯ್ದೆಗಳನ್ನ ರದ್ದು ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.

IMG 20240408 161411 -
ಈ ಬಾರಿಯ ಚುನಾವಣೆ ಜನ ಸಂಕಲ್ಪದ ಚುನಾವಣೆ. ಇಂದು ಸೂರ್ಯಗ್ರಹಣ. ಈ ಪ್ರಕೃತಿ ಸಹಜ ಗ್ರಹಣದಿಂದ ಯಾವ ಅಪಾಯವೂ ಇಲ್ಲ. ಆದರೆ ಇಡೀ ದೇಶವನ್ನೇ ಅವನತಿಯಡೆಗೆ ಸೆಳೆಯುತ್ತಿರುವ ವಿಕೃತಿಯ ಗ್ರಹಣ ಈ ದೇಶವನ್ನು ಆವರಿಸಿಕೊಂಡಿದೆ. ಕುರುಡು ಕನ್ನಡಕ ಹಾಕಿಕೊಂಡವರಿಗೆ ಈ ಗ್ರಹಣ ಕಾಣುವುದಿಲ್ಲ. ನಿತ್ಯ ಟಿವಿ ನೋಡುವವರಿಗೂ ಇದು ಗೋಚರಿಸುವುದಿಲ್ಲ. ಸಹಜವಾಗಿ ಬರಿ ಕಣ್ಣಿನಿಂದ ನೋಡಿದರೆ ಸಾಕು ಈ ಗ್ರಹಣದ ವೇಗ, ಆವೇಗ, ದಿಕ್ಕು ನಿಚ್ಚಳವಾಗಿ ಗೋಚರಿಸುತ್ತದೆ. ಸ್ವಾತಂತ್ರ್ಯದ ನಂತರ ಭಾರತ ಹಿಡಿದ ಪುರೋಗಾಮಿ ದಿಕ್ಕನ್ನು ಸಹಿಸದ ಪಟ್ಟಭದ್ರ ಹಿತಾಸಕ್ತಿಗಳು ಇಡೀ ದೇಶವನ್ನು ಮತ್ತೆ ತಮ್ಮ ಕೈವಶ ಮಾಡಿಕೊಳ್ಳಲು ಮಹಾ ಸಂಚು ರೂಪಿಸಿದ್ದಾರೆ. ಅದರ ಪರಿಣಾಮವೇ ಈ ಗ್ರಹಣ ದ್ವೇಷ ರಾಜಕಾರಣ, ಕಪಟ ಮಾಧ್ಯಮ ಹಾಗೂ ಭ್ರಷ್ಟ ಹಣ, ಮೂರನ್ನೂ ಬಳಸಿಕೊಂಡು ಅಧಿಕಾರದ ಕೇಂದ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಜನರಿಗೆ ಅಚ್ಛೇ ದಿನದ ಕನಸು ತೋರಿಸಿ ಅಧಿಕಾರಕ್ಕೆ ಬಂದ ಹಾಡಹಗಲು ಜನರ ಸುಲಿಗೆಗೆ ನಿಂತಿದೆ. ಸೆಸ್ ಮತ್ತು ಜಿ ಎಸ್ ಟಿ ಹಾಕಿ. ಪೆಟ್ರೋಲಿನಿಂದ ಹಿಡಿದು ಗುಂಡುಪಿನ್ನಿನ ತನಕ ಪ್ರತಿಯೊಂದರ ಬೆಲೆ ಏರಿಸಿ, ಸಾಮಾನ್ಯರು ದುಡಿಮೆಯನ್ನೆಲ್ಲಾ ದೋಚುತ್ತಿದ್ದಾರೆ. ಈ ಪಿತೂರಿಯಲ್ಲಿ ಕೈಮಿಲಾಯಿಸಿರುವ ಕಂಪನಿಗಳಿಗೆ ದೇಶದ ಕೊಳ್ಳೆ ನಡೆಸಲು ಮುಕ್ತ ಪರವಾನಗಿ ನೀಡಲಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಮಾಫಿಯಾ ಗ್ಯಾಂಗ್ ಆಗಿ ಪರಿವರ್ತನೆಯಾಗಿದೆ. ಚುನಾವಣಾ ಬಾಂಡ್ ಹೆಸರಿನಲ್ಲಿ ಹಫ್ತಾ ವಸೂಲಿ ನಡಿಯುತ್ತಿದೆ. ದೇಶ ತುಂಡುತುಂಡಾಗಿ ಮಾರಾಟವಾಗುತ್ತಿದೆ. ಅಕ್ರಮ ವ್ಯವಹಾರಗಳು ಮುಕ್ತ ಲೈಸೆನ್ಸ್ ಪಡೆದುಕೊಂಡಿವೆ. ದೇಶ ಕಾಯಬೇಕಿದ್ದ ಸಿಬಿಐ, ಐಟಿ, ಇಡಿ ಮುಂತಾದ ಸಂಸ್ಥೆಗಳು ಗೂಂಡಾಗಿರಿ ಹಾಗೂ ವಸೂಲಿ ಧಂದೆಗೆ ಇಳಿದುಬಿಟ್ಟಿವೆ ಎಂದರು

ವಿವಿಧ ಜನಪರ ಸೈದ್ಧಾಂತಿಕ ಧಾರೆಗಳು, ಜನಚಳವಳಿಗಳು ಜೊತೆಗೂಡುತ್ತಿವೆ. ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ದೇಶಕಾಯುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸೈದ್ಧಾಂತಿಕ ವಾದವಿವಾದಗಳು, ಸಂಘಟನಾ ವೈಮನಸು ದೊಡ್ಡ ಮಟ್ಟಕ್ಕೆ ಕಡಿಮೆಯಾಗಿದೆ. ಮನಸ್ಸುಗಳ ಬೆಸುಗೆ ಅಚ್ಚಡಿ ಮೂಡಿಸುವಷ್ಟು ಉತ್ತಮ ರೀತಿಯಲ್ಲಿ ವಿಕಾಸಗೊಳ್ಳುತ್ತಿದೆ. ಹೋರಾಟಗಳು ಕ್ರಮೇಣ ಕಸುವು ಪಡೆದುಕೊಳ್ಳುತ್ತಿವೆ. ಇತ್ತೀಚಿನ ಸಿಎಎ ವಿರೋಧಿ ಹೋರಾಟ ಹಾಗೂ ಚಾರಿತ್ರಿಕ ದೆಹಲಿ ರೈತ ಹೋರಾಟವೇ ಇದಕ್ಕೆ, ಜೀವಂತ ಪುರಾವೆಗಳಾಗಿವೆ ಎಂದು ಹೇಳಿದರು.

ಒಂದು ಎಚ್ಚರಿಕೆ ನಮ್ಮಲ್ಲಿರುವುದು ಬಹಳ ಅಗತ್ಯ. ನಾವು ಈ ಅಭಿಯಾನವನ್ನು ಸ್ವತಂತ್ರ ನಾಗರೀಕ ಅಭಿಯಾನವಾಗಿ ನಡೆಸಬೇಕು. ಯಾವುದೇ ರಾಜಕೀಯ ಪಕ್ಷಕ್ಕೆ ಸಹಾಯ ಮಾಡಲು ನಾವಿದನ್ನು ಮಾಡುತ್ತಿಲ್ಲ. ನಮ್ಮ ದೇಶದ ಹಾಗೂ ನಮ್ಮ ಜನರ ಭವಿಷ್ಯವನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಈ ಜನರಾಜಕಾರಣಕ್ಕೆ ಇಳಿದಿದ್ದೇವೆ. ಜಾಗೃತ ನಾಕರೀಕರಾದ ನಾವು ಶಾಶ್ವತ ವಿರೋಧ ಪಕ್ಷವಿದ್ಯಂತೆ, ನಾಳೆ ಯಾರೇ ಅಧಿಕಾರಕ್ಕೆ ಬಂದರೂ ಅವರ ಜೊತೆಯೂ ನಾವು ಜನಹಿತದ ರಕ್ಷಣೆಗಾಗಿ ರಾಜಿರಹಿತ ಸಂಘರ್ಷವನ್ನು ಚಾಲ್ತಿಯಲ್ಲಿಡಬೇಕಿದೆ. ನಾಗರೀಕರೇ ಒಂದು ಪ್ರಚಂಡ ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪಗೊಳ್ಳುವ ಅಗತ್ಯ ಈ ದೇಶಕ್ಕೆ ಅಗತ್ಯವಿದೆ ಎಂದು ತಿಳಿ ಹೇಳಿದರು.
ಸಾಮಾಜಿಕ‌ ಮತ್ತು ಮಹಿಳಾ ಹೋರಾಟಗಾರ್ತಿ ಡಾ. ಬಿಟಿ ಲಲಿತಾ ನಾಯ್ಕ ಮಾತನಾಡಿ, ಸಮಾಜಕ್ಕಾಗಿ ದುಡಿದವರು ಅಲ್ಪಜನರು ದೇಶವನ್ನು ಹಾಳು ಮಾಡುತ್ತಿರುವವರು ಸಹಸ್ರಾರು ಜನರು, ಮೂಡ ನಂಬಿಕೆಯಲ್ಲಿ ಜನರು ಮಗ್ನರಾಗಿದ್ದೆವೆ. ಮೌಡ್ಯತೆ, ಗುಲಾಮಗಿರಿಯನ್ನು ಬುಡಸಮೇತ ಕಿತಹಾಕಬೇಕು. ಹೀಗಾಗಿ ಜನರನ್ನು ಒಂದಾಗಿ ಕಾಂಗ್ರೆಸ್‌ ಬೆಂಬಲ ನೀಡಬೇಕು. ದೇಶದ ಸ್ಥಿತಿ ಅಫಾತದಲ್ಲಿದೆ ಅದನ್ನು ಉಳಿಸಿಕೊಳ್ಳೋಣ ಎಂದರು.

ಸಮುದಾಯ ಬಹಳ ಪ್ರಬುದ್ಧತೆಯನ್ನು, ಬದ್ಧತೆಯನ್ನು, ಒಗ್ಗಟ್ಟನ್ನು ಬೆಳೆಸಿಕೊಳ್ಳುತ್ತಿದೆ. ಇದೇ ನಿಜವಾದ ಆಶಾ ಕಿರಣವಾಗಿದೆ. ನಮ್ಮಂತೆಯೇ ಬೇರೆ ಬೇರೆ ರಾಜ್ಯಗಳಲ್ಲೂ ಜೀವಪರ ಮನಸ್ಸುಗಳು ತಮ್ಮದೇ ರೀತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಈ ಎಲ್ಲಾ ಪ್ರಾಮಾಣಿಕ ಪ್ರಯತ್ನಗಳು ವಿಫಲಗೊಳ್ಳುವುದಿಲ್ಲ ಎಂಬ ವಿಶ್ವಾಸ ನನಗಿದೆ.

ಎಮರ್ಜೆನ್ಸಿಯ ನಂತರದ ಚುನಾವಣೆಯಲ್ಲಿ ಬಂದಂತಹ ಅಧಿಕಾರ ಪಲ್ಲಟದ ಫಲಿತಾಂಶವನ್ನು ಈ ಬಾರಿಯೂ ನಾವು ಕಾಣುವ ಎಲ್ಲಾ ಸಾಧ್ಯತೆ ಇದೆ. ವಿಶ್ವಾಸ ದ್ರೋಹ ಮಾಡಿದವರಿಗೆ ಈ ಬಾರಿ ಜನ ತಕ್ಕ ಪಾಠ ಕಲಿಸಿಯೇ ತೀರುತ್ತಾರೆ ಎಂದು ಆರೋಪಿಸಿದರು.

ಸಮಾಜ ಸೇವಕರಾದ ಶಿವಾಜಿ ಕಾಗನೇಕರ್ ಅವರು ಮಾತನಾಡಿ, ಕೃಷಿ ಪ್ರಧಾನ ದೇಶ ಭಾರತ , ಕೃಷಿ ಮೇಲೆ ಅವಲಂಭಿತರಾದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಕಾಲ ಎದುರಾಗಿದೆ. ಕೃಷಿ ಕಾನೂನು ಜಾರಿಗೆ ಬಂದಿದೆ. ರೈತರಿಗೆ ಯೋಗ್ಯ ಬೆಲೆ ಸಿಗಬೇಕೆಂಬ ಪಂಜಾಬಿ ಆಂದೋಲನದ ಮಾಡಲಾಗಿದೆ. ಆದರೂ ಅನ್ನದಾತನಿಗೆ ನ್ಯಾಯ ಸಿಗುತ್ತಿಲ್ಲ, ರೈತರ ಎಲ್ಲಿದೆ ಬೆಂಬಲ ಬೆಲೆ, ಹೀಗಾಗಿ ರೈತರ ಪರ ಹೋರಾಟ ನಡೆದಿದೆ. ದೇಶದ ರೈತರನ್ನು ದಿಕ್ಕಾಪಾಲು ಮಾಡುವ ಯತ್ನ ನಡೆದಿದೆ. ನಾವು ಅದನ್ನು ತಡೆಯೋಣ ಅವರಿಗೆ ಸಹಕಾರ ನೀಡಿ, ಅನ್ನದಾತರನ್ನು ಉಳಿಸಿಕೊಳ್ಳೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಕಾಶ್ ಕಮ್ಮರಡಿ, ಬಡಗಲಪುರ ನಾಗೇಂದ್ರ , ಯೂಸೂಫ್ ಕನ್ನಿ , ವರಲಕ್ಷ್ಮಿ, ಫಾ. ಅರುಣ್ ಲೂಯಿಸ್/ ಥಿಯೋಲಾ ಎನ್. ವೆಂಕಟೇಶ್, ಎಣ್ಣೆಗೆರೆ ವೆಂಕಟರಾಮಯ್ಯ, ಅಖಿಲಾ ವಿದ್ಯಾಸಂದ್ರ, ಶಿವಾಜಿ ಕಾರ್ಣೇಕರ್, ದಿಲಿಪ್ ಕಾಮತ್, ಸಿದಗೌಡ ಮೋದಗಿ, ರಹಮತ್ ತರಿಕೆರೆ, ಶಂಕರ್ ಹಲಗತ್ತಿ, ಶ್ರೀಪಾದ್ ಭಟ್, ರವೀಂದ್ರ ನಾಯ್ಕರ್ , ಕೇಸರಿ ಹರವು ಜನ, ಚಾಮರಸ ಮಾಲಿ ಪಾಟೀಲ್ , ನಾಗೇಶ್ ಸಾತೇರಿ , ಹೊನ್ನಪ್ಪ ಮರಿಯಮ್ಮನವರ್ , ಆನಂದ್ ಮೆಣ್ಣೆ, ಬಸವರಾಜ್ ಕೌತಾಳ್, ಜಿ.ವಿ. ಕುಲಕರ್ಣಿ, ಜಿ.ಎಂ. ಜೈನೇಖಾನ್, ಕಾ. ಜನಾರ್ಧನ್, ಮಂದ ನೇವಿಗೆ, ಗೀತಾ ಧರಣವರ್, ಮಲ್ಲಿಗೆ ಸಿರಿಮನೆ, ಕ್ಲಾರಾ ಫರ್ನಾಂಡಿಸ್ , ಯಾಸೀನ್ ಮಕಾನ್ ದಾರ್, ಹನೀಫ್ ಸಿದ್ದೀಕಿ, ಡಿ.ಎಸ್. ಚೌಗಳೆ, ನಾಗೇಶ್ವರ , ರಾವ್ , ಸೈಯದ್ ಖಲೀಮುಲ್ಲಾ ಸೇರಿದಂತೆ ಇತರರು ಹಾಜರಿದ್ದರು.

error: Content is protected !!