23/12/2024
IMG-20240402-WA0066

ಬೆಳಗಾವಿ-೦೨: ನದಿಗಳಲ್ಲಿ ಅನಧಿಕೃತ ಪಂಪ್ ಸೆಟ್ ಮೂಲಕ ನೀರು ಎತ್ತುತ್ತಿರುವುದು ಕಂಡು ಬರುತ್ತಿದೆ. ಕೂಡಲೇ ಪರಿಶೀಲಿಸಿ ಅಂತಹ ಪಂಪಸೆಟ್ ವಶಪಡಿಸಿಕೊಂಡು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ತೊಂದರೆ ಕಂಡುಬರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬರ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷ್ಣಾ ನದಿಯಲ್ಲಿ ಮತ್ತು ಕೆರೆಗಳಲ್ಲಿ ಅನಧಿಕೃತವಾಗಿ ಪಂಪ್ ಸೆಟ್ ಮೂಲಕ ನೀರು ಬಳಕೆ ಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿಬಂದಿವೆ. ಅವುಗಳನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಯಾವುದೇ ತೊಂದರೆ ಎದುರಾದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆದು ಕೂಡಲೇ ತೆರವುಗೊಳಿಸಬೇಕು ಎಂದು ತಿಳಿಸಿದರು.

ಅಥಣಿ, ಕಾಗವಾಡ ತಾಲೂಕುಗಳಲ್ಲಿ ಕುಡಿಯುವ ನೀರಿನ ತೊಂದರೆಯಿದೆ. ಹೆಚ್ಚಿನ ಸಮಯ ತ್ರಿ-ಫೇಸ್ ವಿದ್ಯುತ್ ಪೂರೈಕೆಗೆ ರೈತರಿಂದ ಬೇಡಿಕೆಯಿದೆ. ಸದ್ಯದ ಪರಿಸ್ಥಿತಿಯಲ್ಲಿ ದಿನದಲ್ಲಿ 4 ಗಂಟೆಗಳ ಕಾಲ ತ್ರಿ-ಫೇಸ್ ವಿದ್ಯುತ್ ಒದಗಿಸಲು ಸೂಕ್ತವಾಗಿದೆ ಎಂದು ಹೇಳಿದರು.

ಮುಂದಿನ 10 ದಿನಗಳಿಗೆ ಮಾತ್ರ ವಾರದಲ್ಲಿ 4 ದಿನ 4 ಗಂಟೆಗಳ ಕಾಲ ತ್ರಿ-ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. 10 ದಿನಗಳಲ್ಲಿ ಮಹಾರಾಷ್ಟ್ರ ಜಲಾಶಯಗಳಿಂದ ನೀರು ಬಿಡುಗಡೆಯಾದರೆ ಯಾವುದೇ ತೊಂದರೆಯಿಲ್ಲ. ಒಂದುವೇಳೆ ನೀರು ಬಿಡುಗಡೆಯಾಗದೆ ಇದಲ್ಲಿ ವಿದ್ಯುತ್ ಸರಬರಾಜು ಕುರಿತು 10 ದಿನಗಳ ನಂತರ ಜಲಾಶಗಳಲ್ಲಿನ ನೀರಿನ ಮಟ್ಟ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಅಥಣಿ, ಚಿಕ್ಕೊಡಿ ತಾಲೂಕಿನಲ್ಲಿ ಈಗಾಗಲೇ ಟೆಂಡರ್ ಮೂಲಕ ಜಾನುವಾರುಗಳಿಗೆ ಮೇವು ಸರಬರಾಜು ಮಾಡಲಾಗುತ್ತಿದೆ. ಪ್ರತಿ ಕೆಜಿಗೆ 2 ರೂಪಾಯಿಯಂತೆ ರೈತರಿಗೆ ಮೇವು ಹಂಚಿಕೆ ಮಾಡಬೇಕು.

ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಿದಲ್ಲಿ ಟ್ಯಾಂಕರ್ ಮ್ಯಾನೇಜ್ಮೆಂಟ್ ತಂತ್ರಾಂಶದ ಮೂಲಕ ಮಾತ್ರ ಹಣ ಪಾವತಿಸಬೇಕು ಎಂದು ಸಂಬಂಧಿಸಿದ ತಹಶೀಲ್ದಾರ್ ಗಳಿಗೆ ತಿಳಿಸಿದರು.

ಕುಡಿಯುವ ನೀರಿನ ತೊಂದರೆ, ಜಾನುವಾರುಗಳಿಗೆ ಮೇವು ಹಂಚಿಕೆ ಸೇರಿದಂತೆ ಬರ ನಿರ್ವಹಣೆಯಲ್ಲಿ ಯಾವುದೇ ತೊಂದರೆ ಎದುರಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಎಲ್ಲ ತಹಶೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶನ ನೀಡಿದರು.

ಈಗಾಗಲೇ ಟ್ಯಾಂಕರ್ ಗಳಲ್ಲಿ ನೀರು ತುಂಬಿಸಿ ಪೂರೈಸಲಾಗುತ್ತಿದೆ. ಬೇಡಿಕೆ ಪ್ರದೇಶಗಳನ್ನು ಗುರುತಿಸಿ ನೀರು ಸರಬರಾಜು ಮಾಡಬೇಕು. ಅಗತ್ಯಕ್ಕೆ ತಕ್ಕಂತೆ ನೀರು ಸದ್ಬಳಕೆಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಡಾ.ಭೀಮಾಶಂಕರ ಗುಳೇದ, ಮಹಾನಗರ ಪಾಲಿಕೆ ಆಯುಕ್ತ ಲೋಕೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಶ್ ಕೋಣಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಟರ, ಕ್ರೀಡಾ ಇಲಾಖೆ ಉಪ ನಿರ್ದೇಶಕ ಬಿ. ಶ್ರೀನಿವಾಸ್, ಬೆಳಗಾವಿ ತಹಶೀಲ್ದಾರ್ ಸಿದ್ದರಾಯ ಭೋಸಗಿ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ನವೀನ ಶಿಂತ್ರೆ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ರಾಜೀವ ಕೂಲೇರ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

error: Content is protected !!