ಬೆಳಗಾವಿ-೦೨: ಗೋಕಾಕ ತಾಲೂಕಿನ ಧುಪದಾಳ ಗ್ರಾಮದಲ್ಲಿ ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಶಯಕ್ಕೆ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ನೀರಿನ ಸಂಗ್ರಹದ ಸಾಮರ್ಥ್ಯವನ್ನು ಪರಿಶೀಲಿಸಿದರು.
ಇದೇ ವೇಳೆ ನೀರಿನ ಸಂಗ್ರಹ ಹೆಚ್ಚಿಗೆ ಮಾಡಲು ಯೋಜನೆ ರೂಪಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಈ ಆಣೆಕಟ್ಟಿನ ಸಾಮರ್ಥ್ಯವನ್ನು ಹೆಚ್ಚಿಸುವುದರಿಂದ ರೈತರು ಹಾಗೂ ಸಾರ್ವಜನಿಕರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ. ಇದೇ ಸಂದರ್ಭದಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಏಪ್ರಿಲ್ 1 ರಿಂದ ಹಿಡಕಲ್ ಜಲಾಶಯದಿಂದ 2 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಹಾಗೂ ಮಳೆಯ ಕೊರತೆಯಿಂದಾಗಿ ಜನ- ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿದ್ದು, ಹಿಡಕಲ್ ಜಲಾಶಯದಿಂದ ಘಟಪ್ರಭೆ ನದಿಗೆ ಕುಡಿಯುವ ಉದ್ದೇಶಕ್ಕಾಗಿ ಬಾಗಲಕೋಟ ಮತ್ತು ಮಾರ್ಗ ಮಧ್ಯದ ಹಳ್ಳಿಗಳಿಗೆ ಸರ್ಕಾರದ ಆದೇಶದನ್ವಯ ಕಾಯ್ದಿರಿಸಿದ 2. ಟಿ.ಎಂ.ಸಿ ನೀರನ್ನು ಹರಿಸಲಾಗುತ್ತಿದೆ. ಸದ್ಯ ಬರಗಾಲವಿರುವ ಕಾರಣ ನೀರನ್ನು ಮಿತವಾಗಿ ಬಳಕೆ ಮಾಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಈ ವೇಳೆ ರಾಜು ದರ್ಗಶೆಟ್ಟಿ, ಮಹಾಂತೇಶ ಮಗದುಮ, ಅರೀಪ್ ಪೀರ್ಜಾದೆ, ರೆಹಮಾನ್ ಮೊಕಾಶಿ, ಆನಂದ ಕುಲಕರ್ಣಿ, ಬಿ.ಆರ್. ಕಳಸಾ, ವಿನೋದ ಎಚ್, ನಾಗೇಶ ಕೋಲಕಾರ, ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತಿರಿದ್ದರು.