ಚಾಮರಾಜನಗರ-೨೦: ಯುವಜನತೆ ಮಹಾತ್ಮಗಾಂಧೀಜಿ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಚಿಂತಕ ಪ್ರೊಮಜಿ.ಎಸ್.ಜಯದೇವ್ ಕರೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಗಾಂಧಿ ಅಧ್ಯಯನ ಕೇಂದ್ರ ಎನ್ ಎಸ್ ಎಸ್ , ಐಕ್ಯೂಎಸಿ ಮತ್ತು ಸಾಂಸ್ಕೃತಿಕ ವೇದಿಕೆ, ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಆಯೋಜಿಸಿದ್ದ ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟನೆ ಹಾಗೂ ಗಾಂಧೀಜಿ ಮತ್ತು ಯುವಜನತೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮಗಾಂಧೀಜಿಯನ್ನು ಮರೆತು ಬೇರೆ ದಿಕ್ಕಿಗೆ ಹೋಗಲು ಸಾಧ್ಯವಿಲ್ಲ. ನಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಗಾಂಧೀಜಿ ತೊಡಕ್ಕಾಗಿದ್ದಾರೆ. ವಾಸ್ತವಕ್ಕೆ ದೂರವಾದ ಆಸೆಗಳು ಹಾಗೂ ಐಷಾರಾಮಿ ಬದುಕನ್ನು ವಿರೋಧಿಸಿದ ಗಾಂಧೀಜಿ ಸರಳ ಜೀವನದ ಸಂದೇಶ ಸಾರಿದ್ದರು ಎಂದರು.
ಗಾಂಧೀಜಿಯನ್ನು ವಿರೋಧಿಸುವಂತೆ ಅವರನ್ನು ಇಷ್ಟಪಟ್ಟವರು ಇದ್ದಾರೆ. ಗಾಂಧಿತನದ ಬಗ್ಗೆ ಕಳಕಳಿ ಇರುವ ಕಡೆ ಗಾಂಧಿ ಇದ್ದಾನೆ. ಅಹಿಂಸೆ ಬೇಕಾದರೆ ಐಷಾರಾಮಿ ಬದುಕಿನ ಅಗತ್ಯವಿಲ್ಲ ಎಂದು ತಿಳಿಸಿದರು.
ಕೈಗಾರಿಕೆಗಳಲ್ಲಿ ಶೋಷಣೆ ಹಾಸುಹೊಕ್ಕಾಗಿದೆ. ಸಾಮಾಜೀಕರಣ ಮಾಡಿದರೂ ಕೂಡ ಕೈಗಾರೀಕಿಕರಣದ ಜೆಡಕು ಅಂತರ್ಗತವಾಗಿದೆ. ಕೈಗಾರಿಕೆಗಳಲ್ಲಿ ಮಾಲಿನ್ಯ, ಶೋಷಣೆ, ಸಂಪನ್ಮೂಲ ನಾಶ, ಭ್ರಷ್ಟಾಚಾರ ಇದೆ. ಸಾಂಸ್ಕೃತಿಕ ಗುಲಾಮಗಿರಿಯನ್ನು ಪೋಷಿಸಿಕೊಂಡು ಬಂದ ಪರಿಣಾಮ ಅಂತರಂಗದ ಸ್ವರಾಜ್ಯ ಕಳೆದುಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಅವರು ಮಾತನಾಡಿ ಗಾಂಧೀಜೀಯವರ ಒಳ್ಳೆಯ ಚಿಂತನೆಗಳನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕು, ಗಾಂಧೀಜೀಯವರು ಯಾರನ್ನು ದ್ವೆಶಿಸಲಿಲ್ಲ, ಶ್ರೀಮಂತಿಕೆಯನ್ನು ಬಯಸಲಿಲ್ಲ ಅದರು ನಮ್ಮ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದರು, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಗಾಂಧಿಜೀಯವರ ವಿಚಾರ ಧಾರೆಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗಾಂಧಿ ಅಧ್ಯಯನ ಕೇಂದ್ರಕ್ಕೆ ಮಹಾತ್ಮಗಾಂಧೀಜಿ ಅವರ ಜೀವನಾಧಾರಿತ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಇಂದೋರ್ ನ ಕಸ್ತೂರ ಬಾ ಟ್ರಸ್ಟಿ ಪ್ರೊ.ಜಿ.ಬಿ.ಶಿವರಾಜು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್.ಚಂದ್ರಮ್ಮ, ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ಎ.ಎಂ.ಶಿವಸ್ವಾಮಿ ಸೇರಿದಂತೆ ಇತರರಿದ್ದರು.