ಬೆಳಗಾವಿ -07: ಕೃಷಿ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯ ಬರಲು ಅವಕಾಶ ಇದೆ. ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ರೈತರಿಗೆ ಅನುಕೂಲ ಮಾಡಿಕೊಡಲು ಕೃಷಿ ಉತ್ಸವ ಆಯೋಜಿಸಿರುವುದನ್ನು ರೈತರು ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಗುರುವಾರ ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಬೆಳಗಾವಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಹಾಗೂ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಸಹಯೋಗದಲ್ಲಿ ಆಯೋಜಿಸಲಾದ ಐದು ದಿನಗಳ ಕಾಲ ನಡೆಯುವ ಕೃಷಿ ಉತ್ಸವ ಉದ್ಘಾಟಿಸಿ ಮಾತನಾಡಿದರು. ಜನರು ಹವ್ಯಾಸಕ್ಕಾಗಿ ಜಮೀನು ಖರೀದಿ ಮಾಡುತ್ತಿದ್ದೇವೆ. ಕೃಷಿಗಾಗಿ ಬಳಕೆ ಮಾಡಿದರೆ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಇದೇ ಮೊದಲ ಬಾರಿಗೆ ಕೃಷಿ ಉತ್ಸವ ಅಚ್ಚುಕಟ್ಟಾಗಿ ಮಾಡಿದ್ದಾರೆ. ರೈತರು ಇದರ ಲಾಭ ಪಡೆದುಕೊಳ್ಳಬೇಕು. ಕೃಷಿ ಉತ್ಸವ ಸಾಕಷ್ಟು ಯಂತ್ರೋಪಕರಣಗಳ ಮಳಿಗೆ ಇವೆ. ರೈತರಿಗೆ ಹೊಸ ಹೊಸ ಬೆಳೆ ಹಾಗೂ ಮಾರುಕಟ್ಟೆಯ ಕಲ್ಪನೆ ಬಂದಾಗ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ ಎಂದರು.
ಜನಪರ, ಸಮಾಜಮಜಖಿ ಹಾಗೂ ಬೆಳಗಾವಿಗೆ ಅನುಕೂಲವಾಗುವ ಕೆಲಸವನ್ನು ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಮಾಡಲಿ. ನಿಮ್ಮ ಜೊತೆಗೆ ಸರಕಾರ ಹಾಗೂ ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಪಿ.ಎಲ್.ಪಾಟೀಲ್ ಮಾತನಾಡಿ, ಬೆಳಗಾವಿಯಲ್ಲಿ ಐದು ದಿನ ರೈತರು ಹಾಗೂ ಜನರಿಗೆ ಕೃಷಿ ಉತ್ಸವದ ಹಬ್ಬ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಸುಮಾರು 200 ಮಳಿಗೆಗಳನ್ನು ಅಳವಡಿಸಿದ್ದಾರೆ. ಹಲವಾರು ತಂತ್ರಜ್ಞಾನ ಇರುವ, ರೈತರಿಗೆ ಸಹಾಯವಾಗುವ ಮಳಿಗೆಯನ್ನು ಅಳವಡಿಸಿ, ಕೃಷಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.
ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಸಾಕಷ್ಟು ಸಮಾಜ ಸೇವೆ ಮಾಡುವುದರ ಮೂಲಕ ಹೆಸರುವಾಸಿಯಾಗಿದೆ. ಈಗ ರೈತರ ಉದ್ಧಾರ ಮಾಡುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ತೋರಿಸಿದ್ದು ಶ್ಲಾಘನೀಯ ಎಂದರು.
ಬೆಳಗಾವಿಯಲ್ಲಿ ಸಮೃದ್ಧವಾಗಿ ಮಳೆ,ಬೆಳೆ ಬರುತ್ತದೆ. ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ವಿನ ಲಾಭಗಳಿಸಲು ಅವಕಾಶ ಇದೆ. ರೈತರು ಕೃಷಿ ಕೈಗಾರಿಕೆಯಾಗಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಅಧ್ಯಕ್ಷ ಮಂಜುನಾಥ ಅಳವಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳಗಾವಿಯಲ್ಲಿ ಇದೇ ಪ್ರಥಮ ಬಾರಿಗೆ ರೈತರ ಅನುಕೂಲಕ್ಕಾಗಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಸುಮಾರು 200ಕ್ಕೂ ಅಧಿಕ ಕೃಷಿಗೆ ಸಂಬಂಧಿಸಿದ ಮಳಿಗೆಯನ್ನು ಅಳವಡಿಸಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಅಭಯ ಜೋಶಿ, ಶಕೀಲ‌್ ಶೇಖ್, ಅಭಯ ಜೋಶಿ, ರೋಟರಿ ಗವರ್ನರ್ ನಾಸಿರ್ ಬೋರಸದ್ವಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.