ಬೆಳಗಾವಿ-05:ಸೋಮವಾರ ಮಾಜಿ ಸೈನಿಕರಿಗೆ ರಾಜ್ಯ ಸರಕಾರಿ ನೇಮಕಾತಿಗಳಲ್ಲಿ ಶೇ.10 ರಷ್ಟು ಮಿಸಲಾತಿ ಕಲ್ಪಿಸುತ್ತಿಲ್ಲ ಎಂದು ಮಾಜಿ ಸೈನಿಕರ ಮಹಾಒಕ್ಕೂಟದ ವತಿಯಿಂದ ಆರೋಪಿಸಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಅರ್ಪಿಸಿದರು.
ಕಳೆದ ಸರಕಾರಿ ನೇಮಕಾತಿಗಳಲ್ಲಿ ಶೇ. 10 ರಷ್ಟು ಮೀಸಲಾತಿ ನೀಡಿಲ್ಲ ಹಾಗೂ ನಿವೃತ್ತ ಯೋಧರಿಗೆ ಕರ್ನಾಟಕ ಸರಕಾರದಿಂದ ಬರುವ ಸೌಕರ್ಯಗಳನ್ನು ಕಡಿತಗೊಳಿಸುತ್ತಿದೆ ಎಂದು ಆರೋಪಿಸಿದ ಅವರು ಮುಂದಿನ ದಿನಗಳಲ್ಲಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿದರು.
ಮಾಜಿ ಸೈನಿಕರ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜಾರಿ ಭಾಗವಹಿಸಿ ನಂತರ ಮಾತನಾಡುತ್ತ ಸೈನಿಕರು ಸುಧೀರ್ಘ ವರ್ಷಗಳ ಸಮಯವನ್ನು ದೇಶಸೇವೆಗೆ ಮುಡಿಪಿಟ್ಟು ನಿವೃತ್ತಿಯಾದ ನಂತರ ನಮ್ಮ ರಾಜ್ಯದಲ್ಲಿ ಸರಕಾರಿ ನೌಕರಿಯಲ್ಲಿ ಮಾಜಿ ಸೈನಿಕರಿಗೆ ಶೇ. 10 ಮಿಸಲಾತಿ ಇದ್ದು, ಆದರೆ ಇತ್ತಿಚಿಗೆ ಸರಕಾರ ಹೊರಡಿಸಿರುವ ಗ್ರಾಮ ಲೆಕ್ಕಾಧಿಕಾರಿ, ಅರಣ್ಯ ರಕ್ಷಕ ಹಾಗೂ ಕೆ.ಎ.ಎಸ್ ನೇಮಕಾತಿ ಅಧಿಸೂಚನೆಯಲ್ಲಿ ಈ ಮಿಸಲಾತಿ ಸಿಗದೆ ಮಾಜಿ ಸೈನಿಕರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಈ ಪ್ರತಿಭಟನೆಯಲ್ಲಿ ಮಾಜಿ ಸೈನಿಕರ ಮಹಾಒಕ್ಕೂಟದ ಸದಸ್ಯರಾದ ದಯಾನಂದ ಢಾಳಿ, ಸಿ ಎಂ ಮಳ್ಳಿಮಠ, ರಮೇಶ ಚೌಗುಲಾ, ಶಿವಬಸಪ್ಪ ಕಾಡನ್ನವರ, ದುರ್ಗಪ್ಪ ಗಸ್ತಿ, ದುಂಡಪ್ಪ ಮಡಿವಾಳರ, ಪಕೀರಪ್ಪ ಗೌಡರ, ಶಿವಮಲ್ಲಪ್ಪ ಕುಳಲಿ ಸೇರಿದಂತೆ ಇತರರು ಹಾಜರಿದ್ದರು.