ಬೆಳಗಾವಿ-28:: ಬೆಳವಡಿ ಸಂಸ್ಥಾನದ ವೀರ ಜ್ಯೋತಿಯನ್ನು ಬೆಳವಡಿಯ ಮಲ್ಲಮ್ಮನ ವೃತ್ತದಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರು ಸಡಗರದಿಂದ ಬರಮಾಡಿಕೊಂಡು, ಧ್ವಜಾರೋಹಣ ನೆರವೇರಿಸುವ ಮೂಲಕ ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ-20204 ಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿದರು.
ಬೆಳವಡಿ ಮಲ್ಲಮ್ಮನ ಹುಟ್ಟೂರು ಶಿರಸಿ ಸಮೀಪದ ಸೋಂದಾದಿಂದ ಜಿಲ್ಲೆಯ ವಿವಿಧೆಡೆ ಸಂಚರಿಸಿ, ಬೆಳವಡಿಗೆ ಆಗಮಿಸಿದ ವೀರ ಜ್ಯೋತಿಗೆ ಪೂಜೆ ಸಲ್ಲಿಸುವುದರ ಮೂಲಕ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಬಳಿಕ ಬೆಳವಡಿ ಮಲ್ಲಮ್ಮನ ಪುತಳಿಗೆ ಶಾಸಕ ಮಹಾಂತೇಶ ಕೌಜಲಗಿ ಹಾಗೂ ಗಣ್ಯಮಾನ್ಯರಿಂದ ಮಾಲಾರ್ಪಣೆ ಮಾಡಲಾಯಿತು.
ವಿವಿಧ ಕಲಾ ತಂಡಗಳ ಆಕರ್ಷಕ ಮೆರವಣಿಗೆ:
ಡೊಳ್ಳುಕುಣಿತ, ಗೊಂಬೆಕುಣಿತ, ಕುದುರೆಕುಣಿತ, ಜನಪದವಾದ್ಯಗಳು, ನಗಾರಿ, ಕುಂಭ ಹೊತ್ತ ನೂರಾರು ಮಹಿಳೆಯರು, ಕಥಕ್ಕಳಿ ತಂಡಗಳ ಮೆರವಣಿಗೆಯು ನೋಡುಗರ ಕಣ್ಣಿಗೆ ಮೆರಗು ನೀಡಿದವು.
ಬೆಳವಡಿ ಮಲ್ಲಮ್ಮನ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಬೆಳವಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಈ ಸಂದರ್ಭದಲ್ಲಿ ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕಿರಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್.ನಾಗರಾಜ, ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಉಪಾಧ್ಯಕ್ಷರು, ಬೆಳವಡಿ ಗ್ರಾಮಸ್ಥರು ಹಾಜರಿದ್ದರು. ಬೈಲಹೊಂಗಲ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸಾವಿರಾರು ಜನರು ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.