ಬೆಳಗಾವಿ-27: ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಬೆಳಗಾವಿ ಗ್ರಾಮೀಣ ಎಸಿಪಿ ಅವರ ಅಧ್ಯಕ್ಷತೆ ಹಾಗೂ ಸಿಪಿಐ ಪಾಟಣಶೆಟ್ಟಿ ಅವರ ನೇತೃತ್ವದಲ್ಲಿ ಮಹತ್ವದ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಾ. ಬಿ.ಆರ್. ಅಂಬೇಡ್ಕರ್ ಶಕ್ತಿ ಸಂಘದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ದಶರಥ ಕೋಲಕಾರ ಅವರು, ಎಸ್‌ಸಿ/ಎಸ್‌ಟಿ ಸಮುದಾಯದ ಹಕ್ಕುಗಳ ರಕ್ಷಣೆ ಹಾಗೂ ದಲಿತ ಕಾಲೊನಿಗಳ ಸುರಕ್ಷತೆಗೆ ಪೊಲೀಸ್ ಇಲಾಖೆಯು ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ, ಸಮುದಾಯದ ಹಕ್ಕುಗಳನ್ನು ಕಾಪಾಡುವುದು, ಸುಳ್ಳು ದೂರುಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವುದು ಹಾಗೂ ದಲಿತ ಕಾಲೊನಿಗಳಲ್ಲಿ ಬಿಗಿ ಪೊಲೀಸ್ ಭದ್ರತೆ ವಹಿಸುವ ಕುರಿತು ಅವರು ಎಸಿಪಿ ಅವರಿಗೆ ಮನವಿ ಮಾಡಿದರು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಎತ್ತಿಹಿಡಿಯುವುದರ ಜೊತೆಗೆ, ದುರ್ಬಲ ವರ್ಗದ ಜನರಿಗೆ ಸಮಾನ ನ್ಯಾಯ ದೊರಕಿಸಿಕೊಡಲು ಪೊಲೀಸ್ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಭೆಯಲ್ಲಿ ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಮಂಡಿಸಿದರು.
