ಬೆಳಗಾವಿ-25: ಪವಿತ್ರ ಆಷಾಡ ಏಕಾದಶಿಯ ಶುಭ ದಿನದಂದು ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತಿಯ ಹೊಳೆಯೇ ಹರಿದಿದೆ. ಶ್ರೀಹರಿ ಪಾಂಡುರಂಗ ವಿಠಲನ ಸ್ಮರಣೆಯಲ್ಲಿ ಮುಳುಗಿರುವ ಭಕ್ತಾದಿಗಳು, ಪ್ರಸಿದ್ಧ ಪಂಡರಾಪುರ ಕ್ಷೇತ್ರದ ಧಾರ್ಮಿಕ ವೈಭವವನ್ನು ಬೆಳಗಾವಿಯಲ್ಲೇ ಸೃಷ್ಟಿಸಿದ್ದಾರೆ.
ಸೂರ್ಯೋದಯಕ್ಕೂ ಮುನ್ನವೇ ಬೆಳಗಾವಿಯ ವಿವಿಧ ವಿಠಲ-ರುಕ್ಮಿಣಿ ದೇವಾಲಯಗಳಲ್ಲಿ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡವು. ಗಂಡು-ಹೆಣ್ಣು, ಹಿರಿಯರು-ಕಿರಿಯರು ಎಂಬ ಭೇದವಿಲ್ಲದೆ ಸಾವಿರಾರು ಭಕ್ತಾದಿಗಳು ಸಾಲಾಗಿ ನಿಂತು ಪಾಂಡುರಂಗನ ದರ್ಶನ ಪಡೆದು ಪುನೀತರಾದರು.
ವಿಶೇಷ ಪೂಜೆ ಮತ್ತು ಮಹಾ ಅಭಿಷೇಕ
ದೇವಾಲಯಗಳಲ್ಲಿ ಪ್ರಾತಃಕಾಲದಲ್ಲಿ ವಿಠಲ-ರುಕ್ಮಿಣಿಯರ ವಿಗ್ರಹಗಳಿಗೆ ಮಹಾ ರುದ್ರಾಭಿಷೇಕ, ಕ್ಷೀರಾಭಿಷೇಕ ಮತ್ತು ತುಳಸಿ ಅರ್ಚನೆ ನೆರವೇರಿತು. ನಸುಕಿನಿಂದಲೇ ಮಹಿಳೆಯರು ತಲೆಯ ಮೇಲೆ ತುಳಸಿ ಕಳಸಗಳನ್ನು ಹೊರತು, ಪುರುಷರು ತಾಳ-ಮೃದಂಗಗಳ ನಾದದೊಂದಿಗೆ ‘ಜ್ಞಾನದೇವಾ ತುಕಾರಾಮ್’, ‘ಪಾಂಡುರಂಗ ವಿಠಲ’ ಎಂಬ ಜಯಘೋಷಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ದಿಂಡಿ (ಪಾದಯಾತ್ರೆ) ಮೆರವಣಿಗೆ ನಡೆಸಿದರು.
ಮಹಿಳೆಯರ ವಿಶೇಷ ಭಜನೆ ಮತ್ತು ಉರುಳುಸೇವೆ
ದೇವಾಲಯದ ಆವರಣದಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ತುಳಸಿ ಪೂಜೆ ಹಾಗೂ ವಿಶೇಷ ಭಜನೆ, ಕೀರ್ತನೆಗಳನ್ನು ನೆರವೇರಿಸಿದರು. ಅನೇಕ ಭಕ್ತರು ಉಪವಾಸ ವ್ರತ ಆಚರಿಸಿ, ವಿಠಲನಿಗೆ ಪ್ರಿಯವಾದ ತುಳಸಿ ಮಾಲೆ ಹಾಗೂ ನೈವೇದ್ಯವನ್ನು ಅರ್ಪಿಸಿದರು. ಭಕ್ತರ ಸಮ್ಮರ್ದವನ್ನು ನಿಯಂತ್ರಿಸಲು ಮತ್ತು ಪೂಜಾ ಕೈಂಕರ್ಯಗಳು ಸುಲಭವಾಗಿ ನಡೆಯಲು ದೇವಾಲಯ ಆಡಳಿತ ಮಂಡಳಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದವು.
”ಪಂಡರಾಪುರಕ್ಕೆ ತೆರಳಲು ಸಾಧ್ಯವಾಗದ ಸಾವಿರಾರು ಭಕ್ತರಿಗೆ ಬೆಳಗಾವಿಯಲ್ಲೇ ಪಂಡರಿಪುರದ ಭಕ್ತಿ ವಾತಾವರಣ ಅನುಭವಕ್ಕೆ ಬಂದಿದ್ದು, ಪ್ರತಿಯೊಬ್ಬರ ಮನದಲ್ಲೂ ಪಾಂಡುರಂಗನ ನಾಮಸ್ಮರಣೆ ಕಂಗೊಳಿಸುತ್ತಿದೆ.”
ದಿನವಿಡೀ ಭಜನೆ, ಹರಿಕಥೆ ಹಾಗೂ ಮಹಾಮಂಗಳಾರತಿಗಳು ಜರುಗಲಿದ್ದು, ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಸಜ್ಜಕ ಮತ್ತು ಲಘು ಉಪಹಾರದ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ. ನಗರದಾದ್ಯಂತ ಆಷಾಡ ಏಕಾದಶಿಯ ಈ ಪವಿತ್ರ ಘಳಿಗೆಯು ಅಧ್ಯಾತ್ಮಿಕ ಶ್ರದ್ಧೆ ಮತ್ತು ಸಂಭ್ರಮಕ್ಕೆ ಸಾಕ್ಷಿಯಾಯಿತು.
