ಬೆಳಗಾವಿ-11: ಇಂದಿನ ಸ್ಪರ್ಧಾತ್ಮಕ ಉದ್ಯಮ ಜಗತ್ತಿನಲ್ಲಿ ಕೇವಲ ಉತ್ತಮ ಉತ್ಪನ್ನ ತಯಾರಿಸಿದರೆ ಸಾಕಾಗುವುದಿಲ್ಲ. ಅದನ್ನು ಗ್ರಾಹಕರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್‌ಗೆ ಸಮಾನ ಆದ್ಯತೆ ನೀಡುವುದು ಅತ್ಯಗತ್ಯ ಎಂದು ಬೆಳಗಾವಿಯ ಖ್ಯಾತ ಉದ್ಯಮಿ ಹಾಗೂ ಅಶೋಕ ಐರನ್ ಗ್ರೂಪ್‌ನ ಮುಖ್ಯಸ್ಥ ಜಯಂತ ಹುಂಬರವಾಡಿ ಅಭಿಪ್ರಾಯಪಟ್ಟರು.
ನಗರದ ವುಡ್ ರೋಸ್ ಹೋಟೆಲ್‌ನಲ್ಲಿ ಬೆಳಗಾವಿ ವಾಣಿಜ್ಯೋದ್ಯಮ ಸಂಘ (BCCI) ಶನಿವಾರ ಆಯೋಜಿಸಿದ್ದ ಬಿಸಿನೆಸ್ ಸಮಿಟ್ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಜನರಲ್ಲಿ ಕಲಿಯುವ ಆಸಕ್ತಿ ಮತ್ತು ಹೊಸದನ್ನು ಅಳವಡಿಸಿಕೊಳ್ಳುವ ಉತ್ಸಾಹ ಹೆಚ್ಚುತ್ತಿರುವುದು ಸಂತಸದ ಸಂಗತಿ. ಅಂತಹ ಉತ್ಸಾಹಕ್ಕೆ ಸೂಕ್ತ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಬೆಳಗಾವಿ ವಾಣಿಜ್ಯೋದ್ಯಮ ಸಂಘ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಕಳೆದ ಐದು ವರ್ಷಗಳಿಂದ ಸಂಘವು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಉದ್ಯಮಿಗಳ ಬೆಳವಣಿಗೆಗೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ. ಬಿಸಿನೆಸ್ ಸಮಿಟ್ ಕೂಡ ಬೆಳಗಾವಿಯ ಉದ್ಯಮಿಗಳಿಗೆ ಹೊಸ ಚಿಂತನೆ, ಜ್ಞಾನ ಮತ್ತು ವ್ಯಾಪಾರ ವಿಸ್ತರಣೆಗೆ ಉತ್ತಮ ಅವಕಾಶ ಕಲ್ಪಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಯಮ ಆರಂಭಿಸುವಾಗ ಬಹುತೇಕ ಉದ್ಯಮಿಗಳು ಉತ್ತಮ ಗುಣಮಟ್ಟದ ಉತ್ಪನ್ನ ತಯಾರಿಕೆಗೆ ಹೆಚ್ಚಿನ ಗಮನ ನೀಡುತ್ತಾರೆ. ಆದರೆ ಅದೇ ಮಟ್ಟದ ಮಹತ್ವವನ್ನು ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್‌ಗೆ ನೀಡುವುದಿಲ್ಲ. ಇಂದಿನ ಮಾರುಕಟ್ಟೆಯಲ್ಲಿ ಉತ್ಪನ್ನದ ಗುಣಮಟ್ಟದ ಜೊತೆಗೆ ಅದರ ಗುರುತು (ಬ್ರ್ಯಾಂಡ್) ಮತ್ತು ಪರಿಣಾಮಕಾರಿ ಮಾರುಕಟ್ಟೆ ತಂತ್ರಗಳು ಯಶಸ್ಸಿನ ಪ್ರಮುಖ ಅಂಶಗಳಾಗಿವೆ. ಆದ್ದರಿಂದ ಉದ್ಯಮಿಗಳು ತಮ್ಮ ಉತ್ಪನ್ನವನ್ನು ಜನಪ್ರಿಯ ಬ್ರ್ಯಾಂಡ್ ಆಗಿ ರೂಪಿಸಲು ಹೆಚ್ಚು ಗಮನಹರಿಸಬೇಕು ಎಂದು ಜಯಂತ ಹುಂಬರವಾಡಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಖ್ಯಾತ ಮ್ಯಾನೇಜ್ಮೆಂಟ್ ಟ್ರೇನರ್ ಸಂಜಯ ಅರೋರಾ ಅವರು ಸುಮಾರು ಎರಡು ಗಂಟೆಗಳ ಕಾಲ 300ಕ್ಕೂ ಹೆಚ್ಚು ಉದ್ಯಮಿಗಳನ್ನು ಉದ್ದೇಶಿಸಿ ಪ್ರೇರಣಾದಾಯಕ ಹಾಗೂ ಸಂವಾದಾತ್ಮಕ ಉಪನ್ಯಾಸ ನೀಡಿದರು. ವ್ಯವಹಾರ ವಿಸ್ತರಣೆ, ನಾಯಕತ್ವ, ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ, ಮಾರುಕಟ್ಟೆಯಲ್ಲಿನ ಸ್ಪರ್ಧೆಯನ್ನು ಎದುರಿಸುವ ತಂತ್ರಗಳು ಸೇರಿದಂತೆ ಹಲವು ವಿಷಯಗಳ ಕುರಿತು ಅವರು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮಕ್ಕೆ ಅಶೋಕ ಐರನ್ ಗ್ರೂಪ್ ಪ್ರಾಯೋಜಕತ್ವ ವಹಿಸಿತ್ತು.
ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಸ್ವಾಗತಿಸಿದರು. ಇವೆಂಟ್ ಚೇರಮನ್ ಉದಯ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈಸ್ ಚೇರಮನ್ ವಿಕ್ರಮ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಬಿಸಿಸಿಐ ಗೌರವ ಕಾರ್ಯದರ್ಶಿ ಸತೀಶ್ ಕುಲಕರ್ಣಿ ವಂದಿಸಿದರು.
