ಬೆಳಗಾವಿ-09: ಗುರುವಾರ ಇಂದು ಬೆಳಗಾವಿಗೆ ಮೊದಲ ಬಾರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ಗಡಿ ಭಾಗದ ಕನ್ನಡಿಗರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತರಲು ಬುಧವಾರರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು ತುರ್ತು ಸಭೆ ನಡೆಸಿ ಸುದೀರ್ಘವಾಗಿ ಚರ್ಚ ನಡೆಸಿದರು.
ಗಡಿ ವಿವಾದ: ಮಹಾರಾಷ್ಟ್ರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರ ಸಮಿತಿ ಸಭೆಯ ಚರ್ಚೆಗಳ ಬಗ್ಗೆ ಸಭೆಯಲ್ಲಿ ಗಂಭೀರ ಕಳವಳ ವ್ಯಕ್ತವಾಯಿತು.
ನೂರು ದಿನಗಳ ಹೋರಾಟ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಬೇಕು ಎಂದು ಆಗ್ರಹಿಸಿ ಕನ್ನಡ ಸಂಘಟನೆಗಳು ಕಳೆದ 100 ದಿನಗಳಿಂದ ನಡೆಸುತ್ತಿರುವ ನಿರಂತರ ಹೋರಾಟದ ಮುಂದಿನ ಹಂತಗಳ ಕುರಿತು ಚರ್ಚಿಸಲಾಯಿತು.
ಸರ್ಕಾರದ ವಿಳಂಬ ನೀತಿ: ಪಾಲಿಕೆಯಲ್ಲಿ ಗೊತ್ತುವಳಿ ಅಂಗೀಕರಿಸುವ ವಿಷಯದಲ್ಲಿ ರಾಜ್ಯ ಸರ್ಕಾರವು ತನ್ನ ಅಭಿಪ್ರಾಯವನ್ನು ತಿಳಿಸಲು ವಿಳಂಬ ಮಾಡುತ್ತಿರುವುದು ಮತ್ತು ರಾಜ್ಯದ ಹಿರಿಯ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯದ ನಡೆಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಕಚೇರಿ ಸ್ಥಳಾಂತರ: ಬೆಂಗಳೂರಿನಲ್ಲಿರುವ ಗಡಿ ಸಂರಕ್ಷಣಾ ಆಯೋಗದ ಮುಖ್ಯ ಕಚೇರಿಯನ್ನು ತಕ್ಷಣವೇ ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಮುಖ್ಯಮಂತ್ರಿಗಳ ಗಮನ ಸೆಳೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಮಹತ್ವದ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಮೈನು ಮಕಾನದಾರ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ನೃಪತುಂಗ ಯುವಕ ಸಂಘದ ಅಧ್ಯಕ್ಷ ಸಾಗರ್ ಬೋರಗಲ್ಲ ಹಾಜರಿದ್ದರು.
ಅಲ್ಲದೆ, ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ಶರೀಫ ಸನದಿ, ಕರವೇ ಯುವಸೇನೆಯ ಜಿಲ್ಲಾಧ್ಯಕ್ಷ ಬಾಳಪ್ಪ ಗುಡಗೇನಟ್ಟಿ, ಕರುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಲ್ಲಪ್ಪ ಗುಡಗೇನಟ್ಟಿ, ವಕರವೇ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ ಸಿಗಿಹಳ್ಳಿ, ರಾಹುಲ್ ಭೋಸ್ಲೆ, ನಾಗಪ್ಪ ಕೊಪ್ಪದ, ಶಿವಾಜಿ ಗುರುವ, ಎಸ್.ಎಸ್. ಮೂಕನವರ, ಆನಂದ ಬಿಲಾವರ, ಸಂತೋಷ ತಳ್ಳಿಮನಿ, ಭರಮ ಕಾಂಬ್ಳೆ, ದೇವೇಂದ್ರ ತಳವಾರ ಹಾಗೂ ವೀರಕನ್ನಡಿಗ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ಗಂಗಾರಾಮ ಚವ್ಹಾಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಗಡಿ ಕನ್ನಡಿಗರ ಹಿತರಕ್ಷಣೆಗಾಗಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
