22/06/2026
IMG-20260621-WA0011

ಬೆಳಗಾವಿ-21: ಬೆಳಗಾವಿಯಲ್ಲಿ ಕನ್ನಡ ಕಡ್ಡಾಯಗೊಳಿಸುವುದನ್ನು ವಿರೋಧಿಸಿ ಎಂ.ಇ.ಎಸ್. ಸಂಘಟನೆ ಮಹಾಮೋರ್ಚಾ ಹಮ್ಮಿಕೊಂಡಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಕನ್ನಡದ ರಕ್ಷಣೆಗೆ ಮುಂದಾಗಬೇಕು ಎಂದು ಕರವೇ ಜಿಲ್ಲಾ ಅಧ್ಯಕ್ಷ ದೀಪಕ ಗುಡಗನಟ್ಟಿ ಆಗ್ರಹಿಸಿದರು.
ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಕನ್ನಡದ ನೆಲದಲ್ಲಿ ಕನ್ನಡ ಭಾಷೆಗೆ ವಿರುದ್ಧವಾಗಿ ನಡೆಯುವ ಯಾವುದೇ ಚಟುವಟಿಕೆಯನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು.
ರಾಜ್ಯೋತ್ಸವದ ಸಂದರ್ಭದಲ್ಲಿ ಎಂ.ಇ.ಎಸ್. ಸಂಘಟನೆಗೆ ಕರಾಳ ದಿನಾಚರಣೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಹೇಳಿದ್ದರೂ, ನಂತರ ವಿವಿಧ ಸಂದರ್ಭಗಳಲ್ಲಿ ಅವಕಾಶ ನೀಡಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅಸಮಾಧಾನ ಹೋರ ಹಾಕಿದರು.
ಕನ್ನಡ ಕಡ್ಡಾಯಕ್ಕೆ ವಿರೋಧ ವ್ಯಕ್ತಪಡಿಸಿ ಮಹಾಮೋರ್ಚಾ ನಡೆಸಲು ಅವಕಾಶ ನೀಡಿರುವುದು ಕನ್ನಡಿಗರಿಗೆ ಮಾಡಿದ ಅಪಮಾನವಾಗಿದೆ. ಈ ಕುರಿತು ಸರ್ಕಾರ ಹಾಗೂ ಜಿಲ್ಲಾಡಳಿತ ಸ್ಪಷ್ಟ ನಿಲುವು ತಾಳಬೇಕು ಎಂದು ಅವರು ಒತ್ತಾಯಿಸಿದರು.
“ಬೆಳಗಾವಿಯಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆ, ನೆಲ, ಜಲ ಹಾಗೂ ಸಂಸ್ಕೃತಿಗೆ ಗೌರವ ನೀಡಬೇಕು. ಕನ್ನಡದ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಹೇಳಿದರು.
ಕನ್ನಡದ ವಿಷಯ ಬಂದಾಗ ಬೆಳಗಾವಿಯ ಮಂತ್ರಿಗಳು, ಸಂಸದರು, ಶಾಸಕರು ಸೇರಿದಂತೆ ಹಲವು ಜನಪ್ರತಿನಿಧಿಗಳು ಮೌನ ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಮ್ಮ ನಿಲುವು ಸ್ಪಷ್ಟಪಡಿಸದಿದ್ದರೆ ಕನ್ನಡಿಗರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
“ಬೆಳಗಾವಿಯಲ್ಲಿ ಕನ್ನಡ ಕಡ್ಡಾಯಗೊಳಿಸಲು ಯಾರ ಅನುಮತಿಯೂ ಅಗತ್ಯವಿಲ್ಲ. ಇಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡದ ವಿರುದ್ಧ ಧ್ವನಿ ಎತ್ತುವವರಿಗೆ ಅವಕಾಶ ನೀಡುವವರು ರಾಜಕೀಯವಾಗಿ ಹಿನ್ನಡೆ ಅನುಭವಿಸಬೇಕಾಗುತ್ತದೆ,” ಎಂದು ಹೇಳಿದರು.
ಇದೇ ವೇಳೆ, ಎಂ.ಇ.ಎಸ್. ಮಹಾಮೋರ್ಚಾಗೆ ಪ್ರತಿಯಾಗಿ ಜೂನ್ 22ರಂದು ‘ಕನ್ನಡದ ನೆಲದಲ್ಲಿ ಕನ್ನಡ ಕಡ್ಡಾಯ ನಿರಂತರ’ ಎಂಬ ಘೋಷಣೆಯೊಂದಿಗೆ ಸ್ವಾಭಿಮಾನಿ ರ್ಯಾ ಲಿ ಹಮ್ಮಿಕೊಳ್ಳಲಾಗಿದೆ ಎಂದು ಘೋಷಿಸಿದರು.
ಜೂನ್ 22ರಂದು ಬೆಳಿಗ್ಗೆ 11 ಗಂಟೆಗೆ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾಗುವ ರ್ಯಾ ಲಿ, ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಳ್ಳಲಿದ್ದು, ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡದ ಪರವಾಗಿ ಧ್ವನಿ ಎತ್ತಬೇಕು ಎಂದು ದೀಪಕ ಗುಡಗನಟ್ಟಿ ಮನವಿ ಮಾಡಿದರು.
ಈ ವೇಳೆ ಕರವೇ ರಾಜ್ಯ ಸಂಚಾಲಕ ಸುರೇಶ ಗವನ್ನವರ, ಉಪಾಧ್ಯಕ್ಷರಾದ ಗಣೇಶ್ ರೋಕಡೆ, ರಾಜು ನಾಶಿಪುಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಶರಥ ಬನೋಶಿ, ಜಿಲ್ಲಾ ಸಂಚಾಲಕರಾದ ಹೊಳೆಪ್ಪ ಸುಳದಾಳ್, ಅಡಿವೆಪ್ಪ ತಲ್ಲೂರಿ, ಉದಯಕುಮಾರ್ ಚಿಕ್ಕಣ್ಣವರ, ಸುಧೀರಗೌಡ ಪಾಟೀಲ್ , ಸೇರಿದಂತೆ ಹಲವಾರು ಕರವೇ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!