
ಬೆಳಗಾವಿ-24:ಡಾ. ರಾಜಕುಮಾರ್ ಅವರ ಸರಳ, ಸಜ್ಜನಿಕೆ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದು, ಜನರೊಂದಿಗಿನ ಸರಳ ಒಡನಾಟದಿಂದಾಗಿ ಅವರು ಇಂದಿಗೂ ಕನ್ನಡಿಗರ ಮನದಲ್ಲಿ ಮರೆಯದೇ ಉಳಿದಂತಹ ಮಹಾನ್ ಚೇತನರಾಗಿದ್ದಾರೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ ಅವರು ಹೇಳಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ವಾರ್ತಾ ಭವನದಲ್ಲಿ ಏ.24(ಶುಕ್ರವಾರ) ಆಯೋಜಿಸಲಾಗಿದ್ದ ವರನಟ ಡಾ.ರಾಜಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕುಮಾರ್ ಅವರು ಉತ್ತಮ ನಟ, ಗಾಯಕರಾಗಿದ್ದರು. ಅವರ ಗೀತೆಗಳು ಇಂದಿಗೂ ಸಹ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿರುವುದು ಅವರ ಕಂಠಸಿರಿಯ ಶಕ್ತಿಯಾಗಿದೆ ಎಂದರು.
ರಾಜಕುಮಾರ್ ಅವರಂತಹ ಸರಳ ಸಜ್ಜನಿಕೆ ವ್ಯಕ್ತಿತ್ವವನ್ನು ಅಧಿಕಾರಿಗಳು ಅಳವಡಿಸಿಕೊಳ್ಳುವ ಪ್ರಯತ್ನವಾಗಬೇಕು. ಮುಂದಿನ ದಿನಮಾನಗಳಲ್ಲಿ ಡಾ. ರಾಜಕುಮಾರ್ ಅವರ ಜಯಂತಿಯನ್ನು ಇನ್ನೂ ವಿಜೃಂಭಣೆಯಿಂದ ಆಚರಿಸೋಣ ಎಂದು ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ.ಎಂ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ನಾಟಕಕಾರ-ಸಾಹಿತಿಗ ಡಿ.ಎಸ್.ಚೌಗಲೆ ಅವರು, “ಡಾ. ರಾಜಕುಮಾರ್ ಅವರು ಕನ್ನಡದ ಪ್ರತಿಯೊಬ್ಬ ಜನ ಸಾಮಾನ್ಯರ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ. ಡಾ. ರಾಜಕುಮಾರ್ ಅವರು ರಂಗಭೂಮಿಯಿಂದ ಬಂದು ಜನ ನಾಯಕನಾಗಿ ಬೆಳೆದ ಅವರು ರಂಗಭೂಮಿ ನನಗೆ ಎಲ್ಲವನ್ನು ಕೊಟ್ಟು ಕಲಿಸಿತು ಎಂಬುದನ್ನು ವಿನಮೃರಾಗಿ ಹೇಳುತ್ತಿದ್ದರು” ಎಂದರು.
ಗುಬ್ಬಿ ವೀರಣ್ಣ ಅವರ ಗರಡಿಯಲ್ಲಿ ಬೆಳೆದ ಅವರು “ರಾಜಕುಮಾರ್” ಆಗಿ ಬೆಳೆದಿರುವುದು ರೋಚಕವಾಗಿದೆ. ಸಾಮಾಜಿಕ, ಆರ್ಥಿಕ ಹಾಗೂ ದುರ್ಬಲ ವರ್ಗದಿಂದ ಬಂದಂತಹ ಮುತ್ತುರಾಜ್ ಅವರ ಬೆಳವಣಿಗೆ ಹಿಂದೆ ಕಲೆ, ಸ್ವಂತ ಶಕ್ತಿ, ಶ್ರದ್ಧೆ, ಬದ್ಧತೆ ಹಾಗೂ ಅಸಾಧಾರಣ ಪ್ರತಿಭೆಯಿಂದಾಗಿ ಅವರು ಡಾ.ರಾಜಕುಮಾರ್ ಆಗಿ ಬೆಳೆದರು.
ಸಹ ಕಲಾವಿದರನ್ನು ಸಹ ಗುರುಗಳು ಎಂದು ಕರೆಯುತ್ತಿದ್ದ ಅವರ ಗುಣವು ಸರಳ ವ್ಯಕ್ತಿತ್ವಕ್ಕೆ ಉದಾಹರಣೆಯಾಗಿದೆ. ಪ್ರತಿಯೊಬ್ಬರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ರಾಜಕುಮಾರ್ ಅವರು ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಿದ್ದರು. ಅಭಿಮಾನಿಗಳನ್ನು ದೇವರೆಂದು ಕರೆಯುತ್ತಿದ್ದ ಅವರ ಜೀವನ ಹೂವಿನದಾರಿಯಾಗಿರಲಿಲ್ಲ; ಕಲ್ಲುಮುಳ್ಳಿನ ಅತ್ಯಂತ ಹಾದಿಯಾಗಿತ್ತು.
ರಾಜಕುಮಾರ್ ಎಲ್ಲ ರೀತಿಯ ಪಾತ್ರಗಳನ್ನು ಮಾಡುವುದರ ಮೂಲಕ ಜನಸಾಮಾನ್ಯರ ಮನಸ್ಸಿನಲ್ಲಿ ಇನ್ನೂ ಹಚ್ಚಹಸಿರಾಗಿ ಉಳಿದಿದ್ದಾರೆ. ಡಾ. ರಾಜಕುಮಾರ್ ಅವರಂತಹ ಸಾಮಾನ್ಯ ವ್ಯಕ್ತಿತ್ವದ ಮನುಷ್ಯ ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿದ್ದು ನಮ್ಮೆಲ್ಲರ ಪುಣ್ಯವಾಗಿದೆ ಎಂದು ಡಿ.ಎಸ್.ಚೌಗಲೆ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೆಶಕರಾದ ಗುರುನಾಥ ಕಡಬೂರ ಅವರು, ಕನ್ನಡ ನಾಡು-ನುಡಿಯ ಅಸ್ಮಿತೆಯಾಗಿರುವ ಡಾ.ರಾಜಕುಮಾರ್ ಅವರು, ತಮ್ಮ ಚಲನಚಿತ್ರಗಳ ಮೂಲಕ ಸಮಾಜ ಸುಧಾರಣೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಸಿಬ್ಬಂದಿ ವಿಜಕುಮಾರ್ ಬೆಟಗೇರಿ, ಎಂ.ಎಲ್.ಜಮಾದಾರ, ಅನಂತ ಪಪ್ಪು, ಬೆಳಗಾವಿಯ ಮಾಧ್ಯಮ ಪ್ರತಿನಿಧಿಗಳು, ಡಾ.ರಾಜಕುಮಾರ್ ಅಭಿಮಾನಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಸುನಿತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಗೋಕಾಕಿನ ಗಂಧರ್ವ ಲಹರಿ ಮೆಲೋಡಿಸ್ ಆರ್ಕೆಸ್ಟ್ರಾ ತಂಡದ ಮುತ್ತುರಾಜ್ ಅವರು ಪ್ರಸ್ತುತಪಡಿಸಿದ ಡಾ.ರಾಜಕುಮಾರ್ ಅವರ ಜನಪ್ರಿಯ ಗೀತೆಗಳ ಗಾಯನವು ಸಭಿಕರನ್ನು ಭಾವಪರವಶಗೊಳಿಸಿತು.
